Kadugodi: ಬೆಸ್ಕಾಂ ನಿರ್ಲಕ್ಷ್ಯದಿಂದಲೇ ತಾಯಿ-ಮಗು ಸಾವು ಸಾಬೀತು: ತನಿಖಾ ವರದಿ
ಬೆಂಗಳೂರು, ಡಿಸೆಂಬರ್ 07: ಬೆಂಗಳೂರಿನ ಕಾಡುಗೋಡಿಯಲ್ಲಿ ಪಾದಾಚಾರಿ ಮಾರ್ಗದಲ್ಲಿ ತುಂಡಾಗಿದ್ದ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಹಸಗೂಸು ಸಾವನ್ನಪ್ಪಿದ ಘಟನೆಗೆ ರಾಜ್ಯವೇ ಕಂಬನಿ ಮಿಡಿದಿತ್ತು. ಮೇಲ್ನೋಟಕ್ಕೆ ಇದು ಬೆಸ್ಕಾಂ ನಿರ್ಲಕ್ಷ್ಯ ಎನ್ನಲಾಗಿತ್ತು. ಇದೀಗ ಅಸಲಿ ಕಾರಣವನ್ನು ಸರ್ಕಾರದ ವಿದ್ಯುತ್ ಪರಿವೀಕ್ಷಣಾಲಯವು ತನಿಖೆಯಿಂದ ಬಹಿರಂಗಗೊಳಿಸಿದೆ.
ತನ್ನದಲ್ಲದ ತಪ್ಪಿಗೆ ಎರಡು ಅಮಾಯಕ ಜೀವಗಳು ಬಲಿ ಆದವು. 9 ತಿಂಗಳ ಹಸುಗೂಸು ಘಟನೆಯಲ್ಲಿ ಜೀವ ಬಿಟ್ಟಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನವೆಂಬರ್ 19 ರ ಬೆಳಗ್ಗೆ ನಡೆದ ಈ ವಿದ್ಯುತ್ ದುರಂತಕ್ಕೆ ಕಾರಣ ಯಾರು ಅನ್ನವುದು ಕಾಡುತ್ತಿತ್ತು. ತನ್ನಿಂದ ತಪ್ಪಾಗಿದೆ ಎಂದು ಬೆಸ್ಕಾಂ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ.

ಸದ್ಯ ತನಿಖೆ ನಡೆಸಿರುವ ಆಯೋಗುವ ಕಾಡುಗೋಡಿ ವಿದ್ಯುತ್ ದುರಂತಕ್ಕೆ ಬೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ. ಇದರಿಂದಲೇ ತಾಯಿ ಮಗು ಬಲಿ ಆಗಿರುವುದು ಬೆಳಕಿಗೆ ಬಂದಿದೆ ಎಂದು ತನ್ನ ತನಿಖೆಯಲ್ಲಿ ತಿಳಿಸಿದೆ. ಬೆಸ್ಕಾಂ ಅಧಿಕಾರಿಗಳೇ ನೇರ ಕಾರಣ ಅಂತ ವಿದ್ಯುತ್ ಪರಿವೀಕ್ಷಣಾಲಯದ ತನಿಖೆಯಲ್ಲಿ ಬಯಲಾಗಿದೆ. ಈ ಸಂಬಂಧ ವರದಿ ಕೂಡ ನೀಡಲಾಗಿದೆ.
ತನಿಖಾ ವರದಿಯ ಅಂಶಗಳು
ವಿದ್ಯುತ್ ಪರಿವೀಕ್ಷಣಾಲಯದ ವರದಿಯಲ್ಲಿ 'ವಿದ್ಯುತ್ ಮಾರ್ಗವು ತುಂಡಾಗಿ ಪುಟ್ ಪಾತ್ ಮೇಲೆ ಲೋ ಫಲ್ಟ್ ಕರೆಂಟ್ ಪಾತ್ ಉಂಟಾಗಿದೆ. ನಿಗದಿತ ಪಾಲ್ಟ್ ಕರೆಂಟ್ ಭೂಮಿಗೆ ಹೋಗದೆ ಇರುವುದರಿಂದ ಇ.ಎಪ್.ಆರ್. ಮೇಲೆ ಟ್ರಿಪ್ ಆಗಲು ಬೇಕಾದ ನಿಗದಿತ ರಿಲೆ ಪಿಕ್- ಆಪ್ ಕರೆಂಟ್ ಪ್ರವಹಿಸಿಲ್ಲ.
ರಿಲೆ ಪಿಕ್- ಆಪ್ ಕರೆಂಟ್ ಪ್ರವಹಿಸದೇ ಇರುವುದೇ ಇ.ಎಪ್.ಆರ್ ಟ್ರಿಪ್ ಆಗದೇ ಇರುವುದಕ್ಕೆ ಕಾರಣವಾಗಿದ್ದರು ಸಹ ಬೆಸ್ಕಾಂ ಅಧಿಕಾರಿಗಳು ಹಳೆದಾದ ಮತ್ತು ಶಿಥಿಲಗೊಂಡಿರುವ ವಿದ್ಯುತ್ ಮಾರ್ಗಗಳನ್ನ ಗಮನಿಸಿಲ್ಲ. ಹಳೆಯದಾದ ಮತ್ತು ಶಿಥಿಲಗೊಂಡ ವಿದ್ಯುತ್ ಮಾರ್ಗಗಳನ್ನು ಗಮನಿಸಿ ಸುಸ್ಥಿಯಲ್ಲಿಟ್ಟುಕೊಂಡಿಲ್ಲ'' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯುತ್ ಮಾರ್ಗಗಳನ್ನು ಸುಸ್ಥಿಯಲ್ಲಿಟ್ಟುಕೊಂಡಿದ್ದಾರೆ ಈ ರೀತಿ ಅಪಘಾತ ಸಂಬಂವಿಸುತ್ತಿರಲಿಲ್ಲ. ವಿದ್ಯುತ್ ಮಾರ್ಗದಲ್ಲಿ ಸಂಬಂಧಿಸಿದ ಎಲ್.ಬಿ.ಎಸ್ ನ ನಿರ್ವಹಣೆ ಮಾಡಿ ವರ್ಮಿನ್ ಪ್ರೂಪ್ ಹಾಗಿ ನಿರ್ವಹಿಸಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ.
ಸದರಿ ಒವರ್ ಹೆಡ್ ಬೇರ್ ವಾಹಕಗಳ ಮಾರ್ಗಗಳಲ್ಲಿ ಅರ್ಥ್ ಗಾರ್ಡ ಅಳವಡಿಸಿದ್ದರೆ ಅಫಘಾತ ತಪ್ಪಿಸಬಹುದಿತ್ತು ಎಂದು ವರದಿ ನೀಡಲಾಗಿದೆ.
ನಿಯಮ ಉಲ್ಲಂಘನೆ
ಈ ಪ್ರಕರಣದಲ್ಲಿ ಬೆಸ್ಕಾಂ ಅಧಿಕಾರಿಗಳು ದಿ ಸೆಂಟ್ರಲ್ ಎಲೆಕ್ಟ್ರಿಕಲ್ ಸೇಫ್ಟಿ ಅಥಾರಿಟಿ ರೆಗ್ಯುಲೇಷನ್- 2023 ರೆಗ್ಯುಲೇಷನ್ 14(1) ,24(1)(i),48(7), ಮತ್ತು 76(1) ಉಲ್ಲಂಘಿಸಿರೋದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಬೆಸ್ಕಾಂ ಅಧಿಕಾರಿಗಳಿಗೆ ಇಂತಹ ದುರಂತಗಳನ್ನು ತಡೆಗಟ್ಟಲು ಕ್ರಮಗಳನ್ನು ಅನುಸರಿಸುವಂತೆ ವಿದ್ಯುತ್ ಪರಿವೀಕ್ಷಣಾಯ ಕೆಲವು ಸಲಹೆ ಕೊಟ್ಟಿದೆ. ಅಪಘಾತಗಳನ್ನು ತಡೆಗಟ್ಟಲು ಹಳೆಯ, ಶಿಥಿಲಗೊಂಡಿರುವ ವಿದ್ಯುತ್ ವಾಹಕಗಳನ್ನು ಗುರುತಿಸಿ ಅವುಗಳನ್ನು ಯು.ಜಿ/ಒವರ್ ಹೆಡ್ ಕೇಬಲ್‌ಗೆ ಬದಲಾಯಿಸಬೇಕು. ಅಪಾಯ ಸ್ಥಿತಿಯಲ್ಲಿರುವುದನ್ನು ಸುಸ್ಥಿಯಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ವಿದ್ಯುತ್ ವ್ಯವಸ್ಥೆಯಲ್ಲಿ ಅಳವಡಿಸುವ ಮೀಟರಿಂಗ್ ಕ್ಯುಬಿಕಲ್, ಎಲ್.ಬಿ.ಎಸ್.ಆರ್.ಎಮ್.ಯು ಸೇರಿದಂತೆ ಇತರೆ ಉಪಕರಣಗಳನ್ನು ಹಾಳಾಗದಂತೆ ನೋಡಿಕೊಳ್ಳಬೇಕು. ಪ್ರೊಟೆಕ್ಷನ್ ಸಿಸ್ಟಮ್ ಸುಸ್ಥಿತಿಯಲ್ಲಿರುವಂತೆ ನಿರ್ವಹಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಹಾದು ಹೋಗಿರುವ ಒವರ್ ಹೆಡ್ ಬೇಲ್ ವಾಹಕಗಳ ಮಾರ್ಗಗಳಲ್ಲಿ ವಾಹಕವು ತುಂಡಾಗಿ ಬಿದ್ದಾಗ ವಿದ್ಯುತ್‌ನಿಂದ ಸಂಭವಿಸುವ ಅವಘಡಗಳನ್ನು ತಡೆಗಟ್ಟಲು ಅರ್ಥ್ ಗಾರ್ಡ ಅಳವಡಿಸುವಂತೆ ತಿಳಿಸಲಾಗಿದೆ.












Click it and Unblock the Notifications