ಬೆಂಗಳೂರಿನ ಪ್ರಮುಖ ಯೋಜನೆ 2026 ಮಾರ್ಚ್‌ಗೆ ಅಂತ್ಯ: ಡಿಸಿಎಂ ಡಿ.ಕೆ ಶಿವಕುಮಾರ್
ಬೆಂಗಳೂರು: ಬೆಂಗಳೂರಿನ ಪ್ರಮುಖ ಯೋಜನೆಯ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಹತ್ವದ ಅಪ್ಡೇಟ್ಸ್ ನೀಡಿದ್ದಾರೆ. ಮುಂದಿನ ವರ್ಷ (2026) ಮಾರ್ಚ್ ತಿಂಗಳ ವೇಳೆಗೆ ಕೋರಮಂಗಲದಿಂದ - ಸರ್ಜಾಪುರವರೆಗಿನ 5.50 ಕಿ.ಮೀ ಉದ್ದದ ಬಫರ್ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ರಾಜಕಾಲುವೆ ಪಕ್ಕದಲ್ಲಿ ಸಂಚಾರಿಯುಕ್ತ ಬಫರ್ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಶಿವಕುಮಾರ್ ಅವರು ಸೋಮವಾರ ಪರಿಶೀಲನೆ ನಡೆಸಿದ್ದು, ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬಫರ್ ರಸ್ತೆಗಳು ಬೆಂಗಳೂರಿನ ಪಾಲಿಗೆ ಇತಿಹಾಸ ಸೃಷ್ಟಿ ಮಾಡಲಿರುವ ರಸ್ತೆಗಳಾಗಲಿವೆ. ಕೆರೆಗಳು ಹಾಗೂ ರಾಜಕಾಲುವೆ ಪಕ್ಕದಲ್ಲಿರುವ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಮಾಡಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಮುಂದಾಗಿದ್ದೇವೆ. ಮೊದಲ ಹಂತದಲ್ಲಿ 300 ಕಿ.ಮೀ ಉದ್ದದ ರಸ್ತೆ ನಿರ್ಮಿಸಲು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಈ ರಸ್ತೆ ಎಂ.ಜಿ ರಸ್ತೆಯಿಂದ ಬೆಳ್ಳಂದೂರಿನವರೆಗೆ ಸಾಗಲಿದೆ. ಮಿಲಿಟರಿಯವರು ಈ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಜಾಗ ನೀಡಿದ್ದಾರೆ. ಈ ಜಾಗ ಬಿಟ್ಟುಕೊಡುವಂತೆ ನಾವು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದೆವು. ಅವರು ಸದ್ಯಕ್ಕೆ ಕೆಲಸ ಮಾಡಿಕೊಳ್ಳಿ ಎಂದು ಅನುಮತಿ ನೀಡಿದ್ದಾರೆ. ಇಲ್ಲಿ ಹೊಸ ರಸ್ತೆ ನಿರ್ಮಾಣವಾಗುತ್ತಿದ್ದು, ಸಾರ್ವಜನಿಕರು ಸೇನಾ ಪ್ರದೇಶದಿಂದ ಸುತ್ತುವರೆದು ಹೋಗುವುದು ತಪ್ಪಲಿದೆ. ಸುಮಾರು 10 ಕಿ.ಮೀ ನಷ್ಟು ಪ್ರಯಾಣ ಕಡಿತವಾಗಲಿದೆ ಎಂದು ತಿಳಿಸಿದ್ದಾರೆ.
ಈ ಬಫರ್ ರಸ್ತೆಗಳಲ್ಲಿ ಬಸ್, ಲಾರಿಯಂತಹ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಸಾರ್ವಜನಿಕರು, ಬೈಕ್, ಕಾರುಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಭಾರಿ ವಾಹನಗಳಿಂದ ರಸ್ತೆ ಕುಸಿಯುವ ಸಮಸ್ಯೆಯಾಗಬಾರದು ಎಂದು ಈ ತೀರ್ಮಾನ ಮಾಡಿದ್ದೇವೆ ಎಂದು ಡಿಸಿಎಂ ಹೇಳಿದ್ದಾರೆ.
ಮೊದಲ ಹಂತದಲ್ಲಿ ರಾಜರಾಜೇಶ್ವರಿ ನಗರ, ಐಟಿಪಿಎಲ್ ಹಾಗೂ ಈ ಭಾಗ ಸೇರಿದಂತೆ ಅನೇಕ ಕಡೆಗಳಲ್ಲಿ ಕಾಮಗಾರಿ ಮಾಡುತ್ತಿದ್ದೇವೆ. ಈ ಬಫರ್ ವಲಯದಲ್ಲಿ ಯಾರಿಗೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಹೀಗಾಗಿ ಜಾಗ ಕಳೆದುಕೊಳ್ಳುವವರಿಗೆ ಟಿಡಿಆರ್ ನೀಡುತ್ತಿದ್ದೇವೆ. ಇದರಿಂದ ಅವರಿಗೆ ರಕ್ಷಣೆ ಸಿಗಲಿದೆ. ಮುಂದೆ ಯಾವುದೇ ಕೆಐಎಡಿಬಿ ಸೇರಿದಂತೆ ಇತರೆ ಆಸ್ತಿಗಳಿದ್ದರೆ, ಬಫರ್ ವಲಯ ರಸ್ತೆಗೆ ಜಾಗ ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕು ಎಂದು ಸೂಚಿಸಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಕಂಟ್ರೋಲ್
ಇನ್ನು ಬೆಂಗಳೂರಿನ ಪ್ರಮುಖ ರಸ್ತೆಗಳ ಟ್ರಾಫಿಕ್ ಕಡಿಮೆ ಮಾಡುವ ಸಲುವಾಗಿ ಬಫರ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ವಾಹನ ಸಂಚಾರ ಸುಲಭವಾಗಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜಕಾಲುವೆಗಳ ಬಫರ್ ವಲಯದಲ್ಲಿ 'ಸಂಚಾರಯುಕ್ತ ಯೋಜನೆ' ಅಡಿ 300 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು. ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಕ್ಕಾಗಿ ಸೇನೆಯವರು ನಮಗೆ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ.
ಎಂ.ಜಿ ರಸ್ತೆಯಿಂದ ಬೆಳ್ಳಂದೂರುವರೆಗೂ ಹೊಸ ರಸ್ತೆ ನಿರ್ಮಾಣವಾಗಲಿದೆ. ಬಫರ್ ವಲಯದ ರಸ್ತೆಯಲ್ಲಿ ಸಂಚರಿಸುವುದರಿಂದಾಗಿ ನಾಗರಿಕರಿಗೆ ಸುಮಾರು 10 ಕಿ.ಮೀ ಪ್ರಯಾಣ ಕಡಿಮೆ ಆಗುತ್ತದೆ. ನಮ್ಮ ಬೆಂಗಳೂರಿನ ಸಂಚಾರ ಸಮಸ್ಯೆಯನ್ನು ನಿಯಂತ್ರಣ ಮಾಡಲು ವಿಶೇಷವಾದ ಯೋಜನೆ ರೂಪಿಸಲಾಗುವುದು ಎಂದು ಅವರು ಹೇಳಿದ್ದಾರೆ.












Click it and Unblock the Notifications