New Flyover: ಬೆಂಗಳೂರಿಗೆ ಹೊಸ ಮೇಲ್ಸೇತುವೆ- 2 ಲಕ್ಷ ವಾಹನಗಳಿಗೆ ಟ್ರಾಫಿಕ್ ಜಾಮ್‌ನಿಂದ ಮುಕ್ತಿ: ಎಲ್ಲಿ? ಯಾವಾಗ?
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ಮಳೆ ಹಾಗೂ ರಸ್ತೆ ಕಾಮಗಾರಿಯಿಂದ ಮಾತ್ರವಲ್ಲದೆ ನಗರದ ಕೆಲ ರಸ್ತೆಗಳಲ್ಲಿ ಪ್ರತಿ ದಿನವೂ ಟ್ರಾಫಿಕ್ ಜಾಮ್ ಉಂಟಾಗಿರುತ್ತದೆ. ವಿಶೇಷವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ವಾಹನ ಸವಾರರ ಪರದಾಟ ನಿತ್ಯ ಕಂಡು ಬರುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಾದಹಳ್ಳಿ ಜಂಕ್ಷನ್ ಬಳಿ ಹೊಸ ಮೇಲ್ಸೇತುವೆಯನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ.
ಹೌದು... ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ಗಳನ್ನು ಕಡಿಮೆ ಮಾಡಲು ಹಾಗೂ ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ತೊಂದರೆಯಾಗದಂತೆ ಈ ಜನನಿಬಿಡ ಜಂಕ್ಷನ್‌ನಲ್ಲಿ ಹೊಸ ಮೇಲ್ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದಾಗಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿದಿನ ಸರಿಸುಮಾರು 750 ವಿಮಾನಗಳು ಕಾರ್ಯ ನಿರ್ವಹಿಸುತ್ತವೆ. 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಾರೆ. ಇವರಲ್ಲಿ ಸುಮಾರು 80% ಪ್ರಯಾಣಿಕರು ಹೆಬ್ಬಾಳದ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಾರೆ. ಇದು ಮಾರ್ಗದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಕಂಡು ಬರುವುದರಿಂದ ಇಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಎನ್‌ಎಚ್‌ಎಐ ನಿರ್ಧರಿಸಿದೆ. ಇದು ಈ ಪ್ರಮುಖ ಮಾರ್ಗವನ್ನು ಬಳಸುವ ಎಲ್ಲಾ ಪ್ರಯಾಣಿಕರಿಗೂ ಅನುಕೂಲ ಮಾಡಿಕೊಡಲಿದೆ. ಈ ಹೊಸ ಯೋಜನೆಯ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಈಗಾಗಲೇ 13-ಕಿಮೀ ಉದ್ದದ ಫ್ಲೈಓವರ್
ಈಗಾಗಲೇ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಯಲಹಂಕ ಏರ್ ಬೇಸ್‌ವರೆಗೆ 13-ಕಿಮೀ ಉದ್ದದ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಇದು ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳಿಗೆ ಸಿಗ್ನಲ್ ಮುಕ್ತ ಪ್ರಯಾಣವನ್ನು ಒದಗಿಸುತ್ತದೆ. ಆದರೆ ಟೋಲ್ ಪ್ಲಾಜಾ ಬಳಿಯ ಸಾದಹಳ್ಳಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುತ್ತದೆ. ಟ್ರಾಫಿಕ್ ಸಿಗ್ನಲ್ ಮತ್ತು ಟೋಲ್ ಪ್ಲಾಜಾದಲ್ಲಿ ವಾಹನಗಳು ನಿಧಾನ ಗತಿಯಲ್ಲಿ ಸಾಗುತ್ತವೆ. ಈ ಮಾರ್ಗದಲ್ಲಿ ಹೆಚ್ಚೆಚ್ಚು ವಾಹನಗಳು ಸಾಲುಗಟ್ಟಿ ನಿಲ್ಲುವುದರಿಂದ ಸವಾರರು ತುಂಬಾ ಕಿರಿಕಿರಿಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಎನ್‌ಎಚ್‌ಎಐ (NHAI) ಸಾದಹಳ್ಳಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಿದೆ. ಈ ಯೋಜನೆಯ ಟೆಂಡರ್ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.
ನಿತ್ಯ 2 ಲಕ್ಷಕ್ಕೂ ಅಧಿಕ ವಾಹನಗಳಿಗೆ ಬಿಗ್ ರಿಲೀಫ್
ಹೊಸ ಮೇಲ್ಸೇತುವೆ ನಿರ್ಮಾಣದಿಂದ ಟ್ರಾಫಿಕ್ ವಿಳಂಬವನ್ನು ತಪ್ಪಿಸಬಹುದು. ಇದರಿಮದ ಪ್ರತಿದಿನ ಈ ಮಾರ್ಗವನ್ನು ಬಳಸುವ 2 ಲಕ್ಷಕ್ಕೂ ಹೆಚ್ಚು ವಾಹನಗಳಿಗೆ ಪರಿಹಾರ ಸಿಗಲಿದೆ. ಈ ಹೊಸ ಮೇಲ್ಸೇತುವೆ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಪ್ರಯಾಣದ ಅನುಭವವನ್ನು ಸುಧಾರಿಸುವ ನಿರೀಕ್ಷೆಯಿದೆ.
ಇದೀಗ ಕೊಡಿಗೇಹಳ್ಳಿ, ಬ್ಯಾಟರಾಯನಪುರ, ಜಕ್ಕೂರುದಂತಹ ಪ್ರಮುಖ ಸ್ಥಳಗಳಲ್ಲಿನ ಟ್ರಾಫಿಕ್ ಸಿಗ್ನಲ್‌ಗಳು ಹೆಬ್ಬಾಳ ಮೇಲ್ಸೇತುವೆಯನ್ನು ಬಳಸದ ವಾಹನಗಳಿಗೆ ವಿಳಂಬವನ್ನು ಸೃಷ್ಟಿಸುತ್ತವೆ. ಇದಲ್ಲದೆ ಹೆಬ್ಬಾಳ ಮೇಲ್ಸೇತುವೆಯ ಕೆಳಗೆ ಸಂಚರಿಸುವ ವಾಹನಗಳ ಸಂಚಾರವನ್ನು ಸುಗಮಗೊಳಿಸಲು ಈ ಸಿಗ್ನಲ್‌ಗಳಲ್ಲಿ ಮೇಲ್ಸೇತುವೆಗಳ ನಿರ್ಮಾಣವನ್ನು NHAI ಯೋಜಿಸುತ್ತಿದೆ. ಇದು ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಸಂಪೂರ್ಣ ಸಿಗ್ನಲ್ ಮುಕ್ತ ಪ್ರಯಾಣವನ್ನು ಒದಗಿಸುತ್ತದೆ.












Click it and Unblock the Notifications