BESCOM: ಕರ್ತವ್ಯನಿರತ 'ಬೆಸ್ಕಾಂ' ಸಿಬ್ಬಂದಿಗೆ ಮಹಿಳೆ ಕಪಾಳಮೋಕ್ಷ, ಮುಂದಾಗಿದ್ದೇನು?
ಬೆಂಗಳೂರು, ಜನವರಿ 30: ಮನೆ ಮನೆಗೆ ವಿದ್ಯುತ್ ಪೂರೈಕೆ ಮಾಡುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ)ನ ಲೈನ್‌ಮ್ಯಾನ್ (ಪವರ್‌ಮ್ಯಾನ್) ಮೇಲೆ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿದ ಘಟನೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜರುಗಿದೆ.
ಹೌದು, ಬೆಂಗಳೂರು ನಗರ ಜಿಲ್ಲೆಯ ಹಳೆ ಚಂದ್ರಾಪುರ ನಿವಾಸಿ ಮಹಿಳೆಯೊಬ್ಬರು ಬೆಸ್ಕಾಂ ಸಿಬ್ಬಂದಿಗೆ ಕಪಾಳಕ್ಕೆ ಹೊಡೆದಿದ್ದಾರೆ. ಇದೀಗ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಿಳೆ ಇರುವ ಚಂದಾಪುರ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದರು. ಇದು ಕಾನೂನು ಬಾಹಿರವಾಗಿದ್ದು, ತಡೆಯಲು ಮುಂದಾದ ಬೆಸ್ಕಾಂ ಲೈನ್‌ಮ್ಯಾನ್ ಹರೀಶ್ ಹಳಮನಿ ಅವರಿಗೆ ಮಹಿಳೆ ನಿಂದಿಸಿದ್ದಾರೆ. ಮಾತನಾಡುತ್ತಲೇ ಅವರಿಗೆ ಕಪಾಳಕ್ಕೆ ಹೊಡೆದಿದ್ದಾರೆ.
ಮಹಿಳೆ ವಿರುದ್ಧ ಎಫ್‌ಐಆರ್ ದಾಖಲು
ಬೆಸ್ಕಾಂ ಸಿಬ್ಬಂದಿಗೆ ಹೊಡೆದ ಮಹಿಳೆಯ ಹೆಸರು ರೂಪಮ್ಮ. ಇದೇ ತಿಂಗಳ ಜನವರಿ 24 ರಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಘಟನೆ ಬಳಿಕ ಮಹಿಳೆಯಿಂದ ಏಟು ತಿಂದ ಹಳಮನಿ ಅವರ ಜತೆ ಬಂದಿದ್ದ ಮತ್ತೋರ್ವ ಬೆಸ್ಕಾಂನ ಜೂನಿಯರ್ ಎಂಜಿನಿಯರ್ ಅವರು ಸುರನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ.
ಸದ್ಯ ಈ ಘಟನೆ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಡಿಯೋದಲ್ಲಿ ಮಹಿಳೆ ಹಳಮನಿಗೆ ಜಗಳವಾಡಿ ಕಪಾಳಮೋಕ್ಷ ಮಾಡುತ್ತಿರುವುದು ಕಂಡು ಬಂದಿದೆ. ಅಕ್ರಮವಾಗಿ ವಿದ್ಯುತ್ ಬಳಸಿದ್ದಕ್ಕೆ ದಂಡ ವಿಧಿಸುವುದಾಗಿ ಬೆಸ್ಕಾಂ ಸಿಬ್ಬಂದಿ ಹೇಳಿದಾಗ ಮಹಿಳೆ ಈ ರೀತಿ ದೌರ್ಜನ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ.
ನಿರ್ಮಾಣ ಹಂತದ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ
ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ ಪ್ರಕಾರ, ಬೆಸ್ಕಾಂನ ಜೂನಿಯರ್ ಎಂಜಿನಿಯರ್ ಆರ್.ಆರ್.ಸುರೇಶ್ ಮತ್ತು ಅವರ ಸಹೋದ್ಯೋಗಿಗಳು ಹಳೆಯ ಚಂದ್ರಾಪುರಕ್ಕೆ ಭೇಟಿ ನೀಡಿ ಬಾಕಿ ಬಿಲ್‌ಗಳನ್ನು ಸಂಗ್ರಹಿಸಲು ಮತ್ತು ಪ್ರದೇಶದಲ್ಲಿನ ಅಕ್ರಮ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಈ ವೇಳೆ ರೂಪಮ್ಮ ಒಡೆತನದ ಮನೆಯೊಂದು ನಿರ್ಮಾಣ ಹಂತದಲ್ಲಿತ್ತು. ಈ ವೇಳೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಲು ಮುಂದಾಗಿದ್ದು ಕಂಡು ಬಂದಿತ್ತು. ಹೀಗಾಗಿ ಕೂಡಲೇ ಹರೀಶ್ ಅವರು ಅದನ್ನು ತಡೆದಿದ್ದಾರೆ. ನಿರ್ಮಾಣ ಹಂತದಲ್ಲಿರುವ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಯತ್ನಿಸುತ್ತಿದ್ದ ಹಳಮನಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾಳೆ.
ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), ಮತ್ತು 353 (ಸಾರ್ವಜನಿಕ ನೌಕರನ ಕರ್ತವ್ಯ ತಡೆ, ಹಲ್ಲೆ ಅಥವಾ ಕ್ರಿಮಿನಲ್ ಬಲದ ಅಡಿಯಲ್ಲಿ ಮಹಿಳೆ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಮಹಿಳೆ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ವರದಿ ಆಗಿದೆ.












Click it and Unblock the Notifications