Share Market: ಅಜ್ಜ ಖರೀದಿಸಿದ್ದ 500 ಷೇರುಗಳಿಂದ ಕೋಟ್ಯಧಿಪತಿಯಾದ ಬೆಂಗಳೂರು ಮಹಿಳೆ
ಅದೃಷ್ಟ ಯಾವಾಗ ಯಾರಿಗೆ ಖುಲಾಯಿಸಿತ್ತದೆ ಎಂದು ಯಾರಿಗು ಗೊತ್ತಿರುವುದಿಲ್ಲ. ಯಾವಾಗಲೋ ಅಜ್ಜ ನೂರು ರೂಪಾಯಿಗೆ ಖರೀದಿ ಮಾಡಿದ್ದ ಆಸ್ತಿಯಿಂದ ಇಂದು ಮಕ್ಕಳು, ಮೊಮ್ಮಕ್ಕಳು ಕೋಟ್ಯಧಿಪತಿಗಳಾಗಿರುವುದನ್ನು ನೋಡಿದ್ದೇವೆ. ಅದೇ ರೀತಿ ಆಗಿನ ಕಾಲದಲ್ಲಿ ಖರೀದಿ ಮಾಡಿದ್ದ ಚಿನ್ನ, ಬೆಳ್ಳಿ, ಮುತ್ತು, ರತ್ನಗಳು ಕೂಡ ಇಂದಿನ ತಲೆಮಾರನ್ನು ಶ್ರೀಮಂತರನ್ನಾಗಿಸಿದಿ. ಇಲ್ಲೊಬ್ಬ ಮಹಿಳೆಗೆ ಕೂಡ ತನ್ನ ತಾತ ಖರೀದಿ ಮಾಡಿದ್ದ ಷೇರುಗಳು ಅದೃಷ್ಟ ತಂದಿದ್ದು, ಕೋಟ್ಯಧಿಪತಿಯನ್ನಾಗಿ ಮಾಡಿದೆ.
ಬೆಂಗಳೂರು ನಿವಾಸಿ ಪ್ರಿಯಾ ಶರ್ಮಾ ಎನ್ನುವವರಿಗೆ ಅಜ್ಜ ತೆಗೆದುಕೊಂಡಿದ್ದ ಷೇರುಗಳು ಈಗ ವರದಾನವಾಗಿ ಬಂದಿವೆ. ಅಜ್ಜ ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ) ಕಂಪನಿಯ ಷೇರುಗಳನ್ನು ತೆಗೆದುಕೊಂಡಿದ್ದರು, ಈ ವಿಚಾರವನ್ನು ಮೊಮ್ಮಗಳಿಗೂ ತಿಳಿಸಿರಲಿಲ್ಲ, ಆದರೆ ವಿಲ್‌ನಲ್ಲಿ ಇದನ್ನು ನಮೂದಿಸಿದ್ದರು. ಇದು ಈಗ ಮೊಮ್ಮಗಳ ಅದೃಷ್ಟ ಖುಲಾಯಿಸಿದೆ.

ಅಜ್ಜ ಸಾವನ್ನಪ್ಪಿದ ಬಳಿಕ ಅವರ ವಿಲ್‌ನಲ್ಲಿ ಷೇರುಗಳ ವಿಚಾರ ಇರುವುದನ್ನು ಪ್ರಿಯಾ ಶರ್ಮಾ ಗಮನಕ್ಕೆ ಬಂದಿದೆ. 2004 ರಲ್ಲಿ ಅವರು 500 ಎಲ್ & ಟಿ ಕಂಪನಿಯ ಷೇರುಗಳನ್ನು ಖರೀದಿ ಮಾಡಿದ್ದರು. ಆ ಷೇರುಗಳು ಭಾರಿ ಏರಿಕೆ ಕಂಡಿದ್ದು, ಬಳಿಕ ಕಂಪನಿ ಬೋನಸ್ ಷೇರುಗಳನ್ನು ಕೂಡ ಬಿಟ್ಟಿತ್ತು. 2004 ರಲ್ಲಿ ಕೊಂಡಿದ್ದ 500 ಷೇರುಗಳು ಈಗ 4500 ಷೇರುಗಳಾಗಿ ಬದಲಾಗಿದೆ. ಸದ್ಯ ಈ ಷೇರುಗಳ ಒಟ್ಟು ಮೌಲ್ಯ 1.72 ಕೋಟಿ ರೂಪಾಯಿ ಎನ್ನಲಾಗಿದೆ.
ಸವಾಲುಗಳ ನಡುವೆ ಬಂತು ಹಣ
2004 ರಲ್ಲಿ ಖರೀದಿ ಮಾಡಿದ್ದ ಷೇರುಗಳನ್ನು ಹಿಂಪಡೆಯುವುದು ಪ್ರಿಯಾ ಅವರಿಗೆ ಸುಲಭವಾಗಿರಲಿಲ್ಲ. ಮೂಲ ದಾಖಲೆಗಳು ಇಲ್ಲದ ಕಾರಣ ಅವರಿಗೆ ಷೇರು ಪಡೆಯುವುದು ಕಷ್ಟಕರವಾಗಿತ್ತು. ಪ್ರಿಯಾ ತನ್ನ ಅಜ್ಜನ ದಾಖಲೆಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಮುಂಬೈ ಪ್ರೊಬೇಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು.
ಕಳೆದುಕೊಂಡ ಹೂಡಿಕೆಗಳನ್ನು ಮರುಪಡೆಯುವಲ್ಲಿ ಪರಿಣಿತಿ ಹೊಂದಿರುವ ಷೇರ್ ಸಮಾಧಾನ್ ಎನ್ನುವ ಸಂಸ್ಥೆಯು ಪ್ರಿಯಾ ಅವರ ಸಹಾಯಕ್ಕೆ ಬಂದಿದೆ. ಕಂಪನಿಯು ಪ್ರೊಬೇಟ್ ಮತ್ತು ಕೆವೈಸಿ ಅಪ್‌ಡೇಟ್‌ಗಳು ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಸಹಾಯ ಮಾಡಿದೆ ಮತ್ತು ಅಧಿಕೃತ ದಾಖಲೆಗಳು ಮತ್ತು ಷೇರು ಪ್ರಮಾಣಪತ್ರಗಳ ನಡುವಿನ ವ್ಯತ್ಯಾಸಗಳನ್ನು ಪರಿಹರಿಸಿದ್ದು, ಪ್ರಿಯಾ ಅವರಿಗೆ ಸಹಾಯ ಮಾಡಿದೆ.
ಸತತ ಒಂದು ವರ್ಷಗಳ ಶ್ರಮದ ಬಳಿಕ ಪ್ರಿಯಾ ಶರ್ಮಾ ತನ್ನ ಅಜ್ಜನ ಷೇರುಗಳನ್ನು ಹಿಂಪಡೆದುಕೊಂಡಿದ್ದಾರೆ. ಎಲ್ & ಟಿ ಕಂಪನಿಯಿಂದ ಷೇರು ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. ಈಗ ಷೇರುಗಳ ಮೌಲ್ಯ 2 ಕೋಟಿ ರೂಪಾಯಿ ಎಂದು ಹೇಳಲಾಗಿದ್ದು, ಪ್ರಿಯಾ ಶರ್ಮಾ ಅವರಿಗೆ ಲಾಟರಿ ಹೊಡೆದಷ್ಟೇ ಖುಷಿಯಾಗಿದೆ.
ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿ ಹೂಡಿಕೆಯು ಯಾಕೆ ಲಾಭದಾಯಕ ಎನ್ನುವುದಕ್ಕೆ ಈ ಪ್ರಕರಣವನ್ನು ಕೂಡ ಉದಾಹರಣೆಯಾಗಿ ಕೊಡಬಹುದು. ವಾರೆನ್ ಬಫೆಟ್, ರಾಜೇಶ್ ಜುಂಜುನ್‌ವಾಲಾ ಅವರಂತಹ ದೈತ್ಯ ಹೂಡಿಕೆದಾರರು ಕೂಡ ದೀರ್ಘಾವಧಿ ಹೂಡಿಕೆಯಿಂದಲೇ ಸಾವಿರಾರು ಕೋಟಿ ಗಳಿಸಿದ್ದಾರೆ.












Click it and Unblock the Notifications