Bengaluru: ಕಾವೇರಿ ನೀರಿನ ದರ ಏರಿಕೆ ಸುದ್ದಿ: ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು
ಬೆಂಗಳೂರು: ರಾಜಧಾನಿಯ ಜನರ ಜೀವನಾಡಿ 'ನಮ್ಮ ಮೆಟ್ರೊ' ಪ್ರಯಾಣ ದರ ಏರಿಕೆಯ ಬಿಸಿ ಇನ್ನೂ ಆರುವ ಮುನ್ನವೇ, ಮತ್ತೊಂದು ಬೆಲೆ ಏರಿಕೆಯ ಕಾರ್ಮೋಡ ಬೆಂಗಳೂರಿಗರನ್ನು ಆವರಿಸಿದೆ. ಹೌದು, ನಗರದ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿರುವ 'ಕಾವೇರಿ ನೀರು' (Kaveri Water) ಕೂಡ ದುಬಾರಿಯಾಗಲಿದೆಯೇ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ಏಪ್ರಿಲ್ 1ರ ನಂತರ ನೀರಿನ ಬಿಲ್ ಪಾವತಿಸುವಾಗ ಜೇಬಿಗೆ ಕತ್ತರಿ ಬೀಳಲಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
ಏಪ್ರಿಲ್ 1ರಿಂದ ಶೇ.3ರಷ್ಟು ದರ ಏರಿಕೆ?
ಈ ಆತಂಕಕ್ಕೆ ಪ್ರಮುಖ ಕಾರಣ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹಿಂದೆ ತೆಗೆದುಕೊಂಡಿದ್ದ ನಿರ್ಧಾರ. ಕಳೆದ ವರ್ಷ ಮಂಡಳಿಯ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ಅವರು, "ಪ್ರತಿ ವರ್ಷ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನೀರಿನ ದರದಲ್ಲಿ ಶೇ. 3ರಷ್ಟು ಹೆಚ್ಚಳ ಮಾಡಲಾಗುವುದು," ಎಂದು ಹೇಳಿಕೆ ನೀಡಿದ್ದರು. ಆಡಳಿತ ಸುಧಾರಣಾ ಆಯೋಗವು (Administrative Reforms Commission) ಕೂಡ ಜಲಮಂಡಳಿಯ ಆರ್ಥಿಕ ಸ್ಥಿರತೆಯನ್ನು ಕಾಪಾಡುವ ದೃಷ್ಟಿಯಿಂದ ಪ್ರತಿ ವರ್ಷ ನೀರಿನ ದರವನ್ನು ಪರಿಷ್ಕರಿಸುವಂತೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ, ಈ ಬಾರಿಯೂ ಏಪ್ರಿಲ್ ತಿಂಗಳಿನಿಂದ ಆಟೋಮ್ಯಾಟಿಕ್ ಆಗಿ ನೀರಿನ ದರ ಏರಿಕೆಯಾಗಲಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಕಳೆದ ವರ್ಷ ಏನಾಗಿತ್ತು?
ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಜಲಮಂಡಳಿಯು ನೀರಿನ ದರವನ್ನು ಪರಿಷ್ಕರಿಸಿತ್ತು. ಆಗ ಗೃಹ ಬಳಕೆದಾರರಿಗೆ (Domestic Users) ಪ್ರತಿ ಲೀಟರ್‌ಗೆ ಕನಿಷ್ಠ 15 ಪೈಸೆಯಿಂದ ಹಿಡಿದು ಗರಿಷ್ಠ 1 ಪೈಸೆಯವರೆಗೆ ದರ ಹೆಚ್ಚಳ ಮಾಡಲಾಗಿತ್ತು. ಇನ್ನು ವಾಣಿಜ್ಯ ಬಳಕೆದಾರರಿಗೆ (Commercial Users) ಪ್ರತಿ ಲೀಟರ್‌ಗೆ ಗರಿಷ್ಠ 1.90 ಪೈಸೆಯವರೆಗೆ ದರ ಏರಿಕೆ ಮಾಡಲಾಗಿತ್ತು. ವಿದ್ಯುತ್ ದರ ಏರಿಕೆ ಮತ್ತು ನಿರ್ವಹಣಾ ವೆಚ್ಚಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ದರ ಏರಿಕೆ ಅನಿವಾರ್ಯ ಎಂದು ಅಂದು ಸಮರ್ಥಿಸಿಕೊಳ್ಳಲಾಗಿತ್ತು.
ಡಿಕೆಶಿ ಸ್ಪಷ್ಟನೆ
ಪ್ರಸ್ತುತ ಕಾವೇರಿ ನೀರಿನ ದರ ಏರಿಕೆ ಕುರಿತು ಎದ್ದಿರುವ ಊಹಾಪೋಹಗಳ ಬಗ್ಗೆ ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ. ಆದರೆ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆಶಿ, "ಸದ್ಯಕ್ಕೆ ಸರ್ಕಾರದ ಮುಂದೆ ನೀರಿನ ದರ ಏರಿಕೆ ಮಾಡುವ ಯಾವುದೇ ಪ್ರಸ್ತಾಪವಿಲ್ಲ. ಈ ಬಗ್ಗೆ ಮಂಡಳಿಯಲ್ಲಿಯೂ ಯಾವುದೇ ಚರ್ಚೆ ನಡೆದಿಲ್ಲ," ಎಂದು ಹೇಳುವ ಮೂಲಕ ಸದ್ಯಕ್ಕೆ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಮೆಟ್ರೊ ದರ ಏರಿಕೆಯಿಂದಾಗಿ ಈಗಾಗಲೇ ಸಾರ್ವಜನಿಕ ವಲಯದಲ್ಲಿ ಅಸಮಾಧಾನವಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳ ಚುನಾವಣೆಗಳು ಸಮೀಪಿಸುತ್ತಿರುವುದು ಅಥವಾ ಜನರ ಆಕ್ರೋಶಕ್ಕೆ ತುತ್ತಾಗುವ ಭಯದಿಂದ ಸರ್ಕಾರ ಈ ನಿರ್ಧಾರವನ್ನು ತಡೆಹಿಡಿಯುವ ಸಾಧ್ಯತೆಗಳಿವೆ.
ಮಂಡಳಿಯ ಆರ್ಥಿಕ ಸಂಕಷ್ಟ
ಒಂದು ಕಡೆ ಜನರ ಹಿತಾಸಕ್ತಿಯಾದರೆ, ಮತ್ತೊಂದು ಕಡೆ ಜಲಮಂಡಳಿಯ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಕಾವೇರಿ ನೀರನ್ನು 100 ಕಿ.ಮೀ ದೂರದಿಂದ ಮತ್ತು ತಗ್ಗು ಪ್ರದೇಶದಿಂದ ಎತ್ತರದ ಬೆಂಗಳೂರಿಗೆ ಪಂಪ್ ಮಾಡಲು ಮಂಡಳಿಯು ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ. ಹಳೆಯ ಕೊಳವೆಗಳ ಬದಲಾವಣೆ ಮತ್ತು ಹೊಸ ಬಡಾವಣೆಗಳಿಗೆ ನೀರು ಪೂರೈಕೆ ಮಾಡಲು ಮಂಡಳಿಗೆ ಹೆಚ್ಚಿನ ಆದಾಯದ ಅಗತ್ಯವಿದೆ. ಹೀಗಾಗಿ, ದರ ಏರಿಕೆ ಅನಿವಾರ್ಯ ಎಂದು ಅಧಿಕಾರಿಗಳು ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ.
ಒಟ್ಟಿನಲ್ಲಿ, "ಸದ್ಯಕ್ಕೆ ಚರ್ಚೆ ಇಲ್ಲ" ಎಂದು ಡಿಸಿಎಂ ಹೇಳಿದ್ದರೂ, ಏಪ್ರಿಲ್ 1 ಹತ್ತಿರ ಬರುತ್ತಿದ್ದಂತೆ 'ನೀರಿನ ದರ'ದಲ್ಲಿ ಏರಿಳಿತವಾಗಲಿದೆಯೇ ಅಥವಾ ಯಥಾಸ್ಥಿತಿ ಮುಂದುವರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications