Bengaluru: 'ಕರಿಮಣಿ ಮಾಲೀಕ' ಸಂಗೀತದಲ್ಲಿ ನೀರಿನ ಸಮಸ್ಯೆ 'ರೀಲ್ಸ್' ಮಾಡಿದ 'ಬಿಬಿಎಂಪಿ' ಮಾಜಿ ಕಾರ್ಪೋರೇಟರ್: ವಿಡಿಯೋ ವೈರಲ್
ಬೆಂಗಳೂರು, ಮಾರ್ಚ್ 08: ಉದ್ಯಾನ ನಗರಿಯಾಗಿರುವ ಬೆಂಗಳೂರು ಜನರಿಗೆ ಕುಡಿಯು ನೀರಿಲ್ಲದೇ ಕಂಗಾಲಾಗಿದ್ದಾರೆ. ಮಳೆ ಬಾರದ ಬರಗಾಲ ಉಂಟಾಗಿದೆ. ಅಂತರ್ಜಲ ಕುಸಿದಿದೆ. ನೀರಿಗೆ ಹಾಹಾಕಾರಾ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆಯನ್ನು ಜನಪ್ರತಿನಿಧಿಯೊಬ್ಬರು 'ರೀಲ್ಸ್' ವಿಡಿಯೋ ಮಾಡಿದ್ದು, ಭಾರೀ ವೈರಲ್ ಆಗಿದೆ.
ಬೆಂಗಳೂರಿನ ನೀರಿನ ಸಮಸ್ಯೆಯನ್ನು 'ಕರಿಮಣಿ ಮಾಲೀಕ' ಹಾಡಿನ ಸಂಗೀತ ಬಳಿಸಿ ರೀಲ್ಸ್ ವಿಡಿಯೋ ಮಾಡಿ ಹೇಳಲಾಗಿದೆ. ಜನಪ್ರತಿನಿಧಿಯೊಬ್ಬರು ನೀರಿನ ಸಮಸ್ಯೆಯನ್ನು ಈ ರೀತಿಯ ವಿಡಿಯೋ ಮೂಲಕ ತಿಳಿಸಿರುವುದು ಇದೇ ಮೊದಲು ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ 'ಉಪೇಂದ್ರ' ಸಿನಿಮಾದ 'ಏನಿಲ್ಲ...ಏನಿಲ್ಲ.. ನಿನ್ನ ನನ್ನ ನಡುವೆ ಏನಿಲ್ಲ...' ಹಾಡು ಸಖತ್ ಟ್ರೆಂಡ್ ಹುಟ್ಟುಹಾಕಿದೆ. ಎಲ್ಲೆಲ್ಲೂ ಇದೇ ಹಾಡನ್ನು ಗುಯ್ ಗುಡುತ್ತಿದ್ದಾರೆ. ಟ್ರೆಂಡ್‌ನಲ್ಲಿರುವಾಗಲೇ ಈ ಹಾಡಿನ ಸಂಗೀತ ಬಳಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಾಜಿ ಕಾರ್ಪೋರೇಟ್ ಮೋಹನ್ ರಾಜ್ ಅವರು ರೀಲ್ಸ್ ವಿಡಿಯೋ ಮಾಡಿ ತಮ್ ಫೇಸ್‌ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಾದ್ಯಂತ ನೀರಿನ ಸಮಸ್ಯೆ, ಕಾವೇರಿ ನೀರಿಲ್ಲದೇ ಉಂಟಾದ ಪರಿಸ್ಥಿತಿ ಕುರಿತು ಮೋಹನ್ ರಾಜ್ ಅವರು ಬೆಳಕು ಚೆಲ್ಲಿದ್ದಾರೆ. ತಮ್ಮದೇ ಧ್ವನಿಯಲ್ಲಿ ಅವರು 'ನೀರಿಲ್ಲ..ನೀರಿಲ್ಲ...' ಸಾಲುಗಳನ್ನು ಹಾಡಿದ್ದಾರೆ. ಇದಕ್ಕೆ ಬಿಂದಿಗೆ (ಕೊಡಪಾನ) ಹಿಡಿದು ಬಡಾವಣೆಯ ಹೆಣ್ಣುಮಕ್ಕಳ ಸಾಥ್ ನೀಡಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಡಿಯೋದಲ್ಲಿ ಏನೇನಿದೆ?
ಪಾತ್ರೆ ತೊಳೆಯಲು ನೀರಿಲ್ಲ....ಕುಡಿಯಲು ನೀರಿಲ್ಲ ಎಂದು ಹೇಳುವ ಮಹಿಳೆಯರ ಜತೆ ಸೇರಿಕೊಂಡು ಮಾಜಿ ಕಾರ್ಪೋರೇಟರ್ ಮೋಹನ್ ರಾಜ್ ತಾವೇ ಹಾಡುವ ಮೂಲಕ ಸದ್ಯದ ಬೆಂಗಳೂರು ನೀರಿನ ಸ್ಥಿತಿ ಬಗ್ಗೆ ವಿವರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
''ನೀರಿಲ್ಲ....ನೀರಿಲ್ಲ....ಬೆಂಗಳೂರಿನಲ್ಲಿ ನೀರಿಲ್ಲ, ಮೋರಿಲಿರೋ ನೀರು ನೀರಲ್ಲ...ಕುಡಿಯೋಕು ತೊಳಕೊಳ್ಳೋಕು ನೀರಿಲ್ಲ...ಬರ್ತಿಲ್ಲ...ಬರ್ತಿಲ್ಲ...ಕಾವೇರಿ ನೀರು ಬರ್ತಿಲ್ಲ, ತಮಿಳುನಾಡಿಗೆ ಕಾವೇರಿ ನೀರು ಮಾರಿಬಿಟ್ರಲ್ಲ, ನಮಗೆ ಕುಡಿಯೋಕೆ ನೀರೆ ಇಲ್ಲ, ನೀರಿಲ್ಲ...ನೀರಿಲ್ಲ...ಬೋರ್‌ವೆಲ್ ನಲ್ಲಿಯೂ ನೀರಿಲ್ಲ....ಕಾವೇರಿ ನೀರು ಮೊದಲೇ ಇಲ್ಲ....'' ಎಂದು ಹಾಡಿದ್ದಾರೆ. ಅವರು ತಲೆ ಮೇಲೆ ಕೈ ಹೊತ್ತು ಕೊಳಾಯಿ ಮುಂದೆ ಕುಳಿತ ದೃಶ್ಯಗಳು ವಿಡಿಯೋದಲ್ಲಿವೆ.

ವಿಡಿಯೋದಲ್ಲಿ ನೀರಿನ ಪರದಾಟ
ಈ ಹಾಡಿನ ಜೊತೆಗೆ ಇಂದಿನ ಬರಗಾದಲ್ಲಿ ನಗರದಲ್ಲಿ ಹೆಣ್ಣು ಮಕ್ಕಳು ನೀರಿಲ್ಲದೇ ಪದಾಡುವುದನ್ನು, ಕೊಳಾಯಿ ಮುಂದೆ ಕೆಲವೆಲ್ಲಾ ಬಿಟ್ಟು ಬಿಂದಿಗೆ ಹಿಡಿದು ನಿಲ್ಲುವ ಮಹಿಳೆಯರು, ನೀರಿಗಾಗಿ ಜಗಳ, ಯಾವಾಗ ನೀರು ಬರುತ್ತೋ ಎಂದು ಕಾಯುವ ಸ್ಥಿತಿ ಎಲ್ಲವನ್ನು ವಿಡಿಯೋ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕಠಿಣ?
ಬರಗಾಲದ ಮಧ್ಯದಲ್ಲಿದ್ದು, ಈಗಲೇ ಬೆಂಗಳೂರಿಗೆ ನೀರಲ್ಲದಾಗಿದೆ. ಮಳೆಗಾಲ ಆರಂಭಕ್ಕೆ ಇನ್ನೂ ತಿಂಗಳುಗಳು ಇವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನು ಬಿಗುಡಾಯಿಸುವ ಸಂಭವವಿದೆ. ಸರ್ಕಾರ ಮಾತ್ರ 'ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದರು' ಎಂಬ ಮಾತಿನಂತೆ ಪರಿಸ್ಥಿತಿ ಹದಗೆಟ್ಟ ಮೇಲೆ ಅಲರ್ಟ್ ಆಗಿದೆ. ಟ್ಯಾಂಕರ್ ಮಾಫೀಯಾ ಶುರುವಾದ ಬಳಿಕ ನಿಯಂತ್ರಣಕ್ಕೆ ಮುಂದಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸದ್ಯ ನೀರಿನ ರಕ್ಷಣೆಗೆ ಸೂಚಿಸಿರುವ ಸರ್ಕಾರ ಟ್ಯಾಂಕರ್ ಮಾಫಿಯಾ ತಡೆಗೆ ದರ ನಿಗದಿ ಮಾಡಿ ಆದೇಶಿಸಿದೆ. ಅಲ್ಲದೇ ಕಾರು, ಬೈಕ್ ಇನ್ನಿತರ ಕಾರಣಗಳಿಗೆ ಅನಗತ್ಯವಾಗಿ ನೀರು ಬಳಸಿದರೆ 5000 ರೂ.ವರೆಗೆ ದಂಡ ವಿಧಿಸುವುದಾಗಿ ತಿಳಿಸಿದೆ. ಕೆಲವೆಡೆ ಬೋರ್‌ವೆಲ್ ಕೊರೆಯಲು, ಟ್ಯಾಂಕರ್ ಬಾಡಿಗೆ ಪಡೆದು ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ನಿರತವಾಗಿದೆ.
ಪ್ರತಿ ಬಾರಿ ಬೇಸಿಗೆಯಲ್ಲೂ ಇದೇ ರೀತಿ ಕುಡಿಯುವ ನೀರಿಗೆ ನಗರದಲ್ಲಿ ಸಮಸ್ಯೆ ಕಂಡು ಬರುತ್ತಿದೆ. ಸರ್ಕಾರ ಈ ಬಗ್ಗೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಪೂರ್ವದಲ್ಲಿಯೇ ಸರ್ಕಾರ ಸಿದ್ಧವಾಗಬೇಕು ಎಂದು ಜನರು ದೂರಿದ್ದಾರೆ.












Click it and Unblock the Notifications