BWSSB: ಬೆಂಗಳೂರು ಜಲಮಂಡಳಿ ಈ ಕಾರ್ಯಕ್ಕೆ ಒಲಿದ 103 ಕೋಟಿ ರೂ.ಬಹುಮಾನ
ಬೆಂಗಳೂರು, ಮಾರ್ಚ್ 16: ಬೆಂಗಳೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 30 ಎಸ್‌ಟಿಪಿಗಳ ಗುಣಮಟ್ಟದ ಬಗ್ಗೆ ಕೇಂದ್ರ ಸರ್ಕಾರ 'ಜಲ್ ಹಿ ಅಮೃತ್' ಯೋಜನೆ ಅಡಿಯಲ್ಲಿ ಶ್ಲಾಘಿಸಿದೆ. 23 ಎಸ್‌ಟಿಪಿಗಳಿಗೆ ಕ್ಲೀನ್ ವಾಟರ್ ಕ್ರೆಡಿಟ್ ನ ಅಡಿಯಲ್ಲಿ 5 ಸ್ಟಾರ್ ರೇಟಿಂಗ್ ನೀಡಿದ್ದು ಪ್ರೋತ್ಸಾಹ ಧನವಾಗಿ 103 ಕೋಟಿ ರೂಪಾಯಿಗಳನ್ನು ನೀಡಿದೆ. ಮೂಲಕ ಬೆಂಗಳೂರು ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (BWSSB) ಮತ್ತೊಂದು ಹೆಗ್ಗಳಿಕೆ ದೊರೆತಿದೆ.
ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಡಿಯಲ್ಲಿ ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ 1450 ಎಂ.ಎಲ್.ಡಿ ಯಷ್ಟು ನೀರನ್ನು ಸಂಸ್ಕರಿಸಲಾಗುತ್ತದೆ. ಇದಕ್ಕಾಗಿ ನಗರದ ವಿವಿಧ ಭಾಗಗಳಲ್ಲಿ 34 ಎಸ್‌ಟಿಪಿಗಳನ್ನು ನಿರ್ಮಿಸಲಾಗಿದೆ. ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಏಷ್ಯಾ ಖಂಡದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಎಸ್‌ಟಿಪಿಗಳಿಂದ ಸಂಸ್ಕರಿಸಲಾಗುವ ನೀರನ್ನು ಬೆಂಗಳೂರು ಕೆರೆಗಳಿಗೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಕೆರೆಗಳಿಗೆ ತುಂಬಿಸಲಾಗುತ್ತಿದೆ.

ಕೇಂದ್ರ ಸರ್ಕಾರ ಜಲ್ ಹಿ ಅಮೃತ್ ಯೋಜನೆಯ ಅಡಿಯಲ್ಲಿ ದೇಶದ ನಗರಗಳಲ್ಲಿನ ಎಸ್‌ಟಿಪಿಗಳ ಗುಣಮಟ್ಟ ಪರಿಶೀಲನೆಗೆ ಅರ್ಜಿ ಸಲ್ಲಿಸಲು ಕೇಂದ್ರ ಸರಕಾರ ಅವಕಾಶ ನೀಡಿತ್ತು. ಉತ್ತಮ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ನೀರಿನ ಸಂಸ್ಕರಣೆ ಮಾಡುವಂತಹ ಎಸ್‌ಟಿಪಿಗಳಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಇದಾಗಿದೆ. ಇದರಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ಜಲಮಂಡಳಿಗೆ ಅತಿಹೆಚ್ಚು ಸ್ಟಾರ್ ರೇಟಿಂಗ್ ದೊರೆತಿದೆ. ಈ ಮೂಲಕ ಜಲಮಂಡಳಿ ಕೇಂದ್ರ ಸರ್ಕಾರದ 103 ಕೋಟಿ ರೂಪಾಯಿ ಪ್ರೋತ್ಸಾಹ ಧನ ಪಡೆದುಕೊಂಡಿದೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಜಲಮಂಡಳಿಗೆ ಕೇಂದ್ರ ಸರ್ಕಾರ ಮೆಚ್ಚುಗೆ
ಬೆಂಗಳೂರು ಜಲಮಂಡಳಿ ತನ್ನ ಎಸ್‌ಟಿಪಿಗಳನ್ನು ಕೊಳಚೆ ನೀರನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಅಳವಡಿಸಿಕೊಂಡಿರುವಂತಹ ಮಾನದಂಡಗಳ ಬಗ್ಗೆ ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯ ಶ್ಲಾಘಿಸಿದೆ. ನಮ್ಮ 23 ಎಸ್‌ಟಿಪಿಗಳಿಗೆ ಫೈವ್ ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಒಟ್ಟು 6 ಪ್ಲಾಂಟ್‌ಗಳು 4 ಸ್ಟಾರ್ ಹಾಗೂ 1 ಪ್ಲಾಂಟ್ 3 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ದೇಶದಲ್ಲಿ ಗುಜರಾತ್, ಮಹರಾಷ್ಟ್ರ ಹೊರತುಪಡಿಸಿದರೆ ನಮ್ಮ ಬೆಂಗಳೂರು ಜಲಮಂಡಳಿ ಅತಿಹೆಚ್ಚು ಪ್ರೋತ್ಸಾಹ ಧನವನ್ನು ಪಡೆದುಕೊಂಡಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದರು.

ಡಿಕೆ ಶಿವಕುಮಾರ್ ಹೇಳಿದ್ದೇನು?
ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಮಾತನಾಡಿ, ಬೆಂಗಳೂರು ನಗರವನ್ನು ಇನ್ನಷ್ಟು ಸುಂದರಗೊಳಿಸುವ ಹಾಗೂ ಸುಸ್ಥಿರ ಯೋಜನೆಗಳನ್ನು ಅಳವಡಿಸಿಕೊಳ್ಳುವುದು ಬ್ರಾಂಡ್ ಬೆಂಗಳೂರು ಯೋಜನೆಯ ಪ್ರಮುಖ ಉದ್ದೇಶ. ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಉತ್ತಮ ಗುಣಮಟ್ಟದ ತಂತ್ರಜ್ಞಾನವನ್ನು ಬಳಸಿ ಸಂಸ್ಕರಿಸುವುದು ನಮ್ಮ ಆದ್ಯತೆಯಾಗಿದೆ. ಇದನ್ನು ಪುರಸ್ಕರಿಸಿ ಕೇಂದ್ರ ಸರ್ಕಾರದ ವತಿಯಿಂದ ಪ್ರೋತ್ಸಾಹ ದೊರೆತಿರುವುದು ಬಹಳ ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಬೆಂಗಳೂರು ಜಲಮಂಡಳಿ ಕೊಳಚೆ ನೀರನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಮಾನದಂಡಗಳನ್ನು ಅಳವಡಿಸಿಕೊಂಡಿದೆ. ಸಂಸ್ಕರಿಸಿದ ನೀರಿನ ಬಳಕೆಯಲ್ಲಿ ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿರುವ ನಾವು, ಸನ್ಮಾನ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕಳೆದ 8 ತಿಂಗಳಿನಿಂದ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೇವೆ. ಪ್ರೋತ್ಸಾಹ ಧನವನ್ನು ಈ ಎಸ್‌ಟಿಪಿಗಳನ್ನು ಇನ್ನಷ್ಟು ಆಧುನಿಕರಿಸಲು ಬಳಸಲಿದ್ದೇವೆ ಎಂದು ಹೇಳಿದರು.












Click it and Unblock the Notifications