ಮಕ್ಕಳ ಜ್ಞಾನಾರ್ಜನೆ ಮುಖ್ಯ, ಅನಿರ್ಧಿಷ್ಟಾವಧಿ ಧರಣಿ ಕೈಬಿಡಿ; ಸೋಮಣ್ಣ ಮನವಿ
ಬೆಂಗಳೂರು, ಅ.11: ಬೆಂಗಳೂರು ವಿಶ್ವವಿದ್ಯಾನಿಯಲದ ವಿದ್ಯಾರ್ಥಿನಿ ಅಪಘಾತ ಪ್ರಕರಣ ಸಂಬಂಧ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಅನಿರ್ಧಿಷ್ಟಾವಧಿ ಧರಣಿ ಕುಳಿತಿದ್ದ ವಿದ್ಯಾರ್ಥಿಗಳನ್ನು ವಸತಿ ಹಾಗೂ ಮೂಲಸೌಲಭ್ಯ ಸಚಿವ ವಿ.ಸೋಮಣ್ಣ ಭೇಟಿಯಾಗಿದ್ದಾರೆ.
ಬಸ್ ಇಳಿಯುವಾಗ ಆಯತಪ್ಪಿ ಬಿದ್ದ ಬೆಂಗಳೂರು ವಿಶ್ವವಿದ್ಯಾನಿಯಲದ ವಿದ್ಯಾರ್ಥಿನಿ ಶಿಲ್ಪಶ್ರೀ (22) ಎಂಬುವವರ ಮೇಲೆ ಬಿಎಂಟಿಸಿ ಬಸ್ ಹರಿದ ಪರಿಣಾಮ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ತೀವ್ರ ರಕ್ತಸ್ರಾವವಾಗಿದೆ. ಈಗಾಗಲೇ ಎರಡು ಶಸ್ತ್ರಚಿಕಿತ್ಸೆ ನೀಡಿರುವ ವೈದ್ಯರು ಇನ್ನೂ ಎರಡರಿಂದ ಮೂರು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದಾರೆ. ಹೀಗಾಗಿ ಗಂಭೀರ ಸ್ಥಿತಿಯಲ್ಲಿರುವ ವಿದ್ಯಾರ್ಥಿನಿಗೆ 1.5ಕೋಟಿ ರೂ. ಪರಿಹಾರ ನೀಡಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಬಂದ ಸಚಿವ ಸೋಮಣ್ಣ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ "ಕೋಲಾರದ ಹೆಣ್ಣುಮಗಳು ಶಿಲ್ಪಾ ಬಸ್ ಅಪಘಾದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿದು ಬಹಳ ದುಃಖವಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನನಗೆ ಎಲ್ಲಾ ಮಾಹಿತಿ ಸಿಕ್ಕಿದೆ. ಈ ರಸ್ತೆ ಬಂದ್ ಮಾಡಬೇಕು ಎಂದು ಒತ್ತಾಯ ಮಾಡಿದವರಲ್ಲಿ ನಾನು ಮೊದಲಿಗ" ಎಂದರು.

"ನಾನು ಕೂಡ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೇನೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೂ ಖಾಸಗಿ ವಾಹನಗಳು ಹೆಚ್ಚಾಗಿ ಓಡಾಡುತ್ತಿರುವ ವಿಚಾರ ಗೊತ್ತಿದೆ. ವಿಶ್ವವಿದ್ಯಾಲಯ ಅಂದರೆ ಜ್ಞಾನದೇಗುಲ, ಮಕ್ಕಳ ಜ್ಞಾನಾರ್ಜನೆ ಮುಖ್ಯ ಹೀಗಾಗಿ ಪ್ರತಿಭಟನೆ ಕೈಬಿಬೇಕು" ಎಂದು ಮನವಿ ಮಾಡಿದರು.
"ಈ ವಿಚಾರ ವಿದ್ಯಾರ್ಥಿಗಳ ಬೇಡಿಕೆಯಲ್ಲ, ಅವಶ್ಯಕತೆ. ಅಕ್ಟೋಬರ್ 13 ರ ವರೆಗೆ ಮುಖ್ಯಮಂತ್ರಿಗಳು ಪ್ರವಾಸದಲ್ಲಿದ್ದಾರೆ. ಹೀಗಾಗಿ ಅವರು ಬಂದ ಕೂಡಲೇ ಬೇಡಿಕೆ ಈಡೇರಿಸುವ ಕುರಿತು ಅವರ ಜೊತೆ ಚರ್ಚಿಸಿ ಸಮಂಜಸವಾದ ತೀರ್ಮಾನವನ್ನು ಕೈಗೊಳ್ಳಲಾಗುವುದು. ಆದಷ್ಟು ಬೇಗ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ" ಎಂದು ಭರವಸೆ ನೀಡಿದರು.












Click it and Unblock the Notifications