Bengaluru Traffic Issue: ನಾಳೆ ಟ್ರಾಫಿಕ್ ಪೊಲೀಸರಿಂದ 'ನಾಗರಿಕ ಸಂಚಾರ ವೇದಿಕೆ ಸಭೆ', ನೀವು ಭಾಗವಹಿಸಿ
ಬೆಂಗಳೂರು, ಮಾರ್ಚ್ 10: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ನಗರ ಸಂಚಾರ ಪೊಲೀಸ್ ಒಂದು ಹೆಜ್ಜೆ ಮುಂದೇ ಹೋಗಿದ್ದಾರೆ. ಟ್ರಾಫಿಕ್ ಸಂಬಂಧ ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದು ಪೊಲೀಸರೇ ಭೇಟಿ ಮಾಡಿ ಆಲಿಸಲಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸ್ ವಿಶೇಷ ಆಯುಕ್ತ ಸಲೀಂ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಶನಿವಾರ ಮಾರ್ಚ್ 11ರಂದು ರಂದು ನಡೆಯಲಿರುವ ಸಭೆ ಕುರಿತು ನಗರ ಸಂಚಾರ ಪೊಲೀಸ್ ಇಲಾಖೆ ಹೊರಡಿಸಿದ ಸುತ್ತೋಲೆಯನ್ನು ಅವರು ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನ 48 ಟ್ರಾಫಿಕ್ ಪೊಲೀಸ್ ಠಾಣೆಗಳಲ್ಲಿ ಶನಿವಾರ ನಡೆಯಲಿರುವ ನಾಗರಿಕ ಸಂಚಾರ ವೇದಿಕೆ ಸಭೆಯಲ್ಲಿ ಬೆಂಗಳೂರಿನ ಟ್ರಾಫಿಕ್ ಪೊಲೀಸರು ನಿವಾಸಿಗಳನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಕೇಳಲಿದ್ದಾರೆ. ಈ ಸಭೆ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.30ರವರೆಗೆ ಸಭೆ ನಡೆಯಲಿದೆ, ನಗರದಲ್ಲಿ ಹೆಚ್ಚುರುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಯ ನಿವಾರಣೆಗೆ ಪ್ರಯಾಣಿಕರು ಭಾಗವಹಿಸುವಂತೆ ಇಲಾಖೆ ಮನವಿ ಮಾಡಿದೆ.
ಸಂಚಾರ ದಟ್ಟಣೆ ಸೇರಿದಂತೆ ಟ್ರಾಫಿಕ್ ಸಂಬಂಧಿ ಸಮಸ್ಯೆಗಳ ನಿವಾರಣೆಗೆ ಸಾರ್ವಜನಿಕರು/ವಾಹನ ಸವಾರರು/ರಸ್ತೆ ಬಳಕೆದಾರರನ್ನು ತೊಡಗಿಸಿಕೊಳ್ಳಲು ಪ್ರತಿ ತಿಂಗಳು 2ನೇ ಶನಿವಾರ ಈ ಸಭೆ ನಡೆಯುತ್ತದೆ. ಅದರಂತೆ ಈ ಭಾರಿಯು ಎಲ್ಲ 48 ಟ್ರಾಫಿಕ್‌ಗಳಲ್ಲಿ ನಾಗರಿಕ ಸಂಚಾರ ವೇದಿಕೆ ಸಭೆ ಆಯೋಜಿಸಲಾಗಿದೆ ಎಂದು ಸಲೀಂ ಅವರು ತಿಳಿಸಿದ್ದಾರೆ.
ಸಭೆ ವೇಳೆ ಸಾರ್ವಜನಿಕರು ಸಂಚಾರ ಕುರಿತಾದ ತಮಗಾದ ಅನುಭವ, ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಪಟ್ಟಣದಲ್ಲಿ ಸಂಚಾರ ನಿರ್ವಹಣೆ ಸುಧಾರಣೆಗೆ ಸಲಹೆ ನೀಡಬಹುದು. ಈ ಸದಾವಕಾಶವನ್ನು ಎಲ್ಲರೂ ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ನಾಗರಿಕರು ಹತ್ತಿರದ ಟ್ರಾಫಿಕ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಭೆಯಲ್ಲಿ ಭಾಗವಹಿಸಬೇಕು. ಸಮಸ್ಯೆ ವಿವರಿಸಿದ ಬಳಿಕ ಪೊಲೀಸ್ ಸಾಧ್ಯವಾದಲ್ಲಿ ಸಭೆಯಲ್ಲೇ ಕೆಲವು ಪರಿಹಾರಗಳನ್ನು ನೀಡುತ್ತಾರೆ.

ಆದ್ದರಿಂದ ಬೆಂಗಳೂರಿನ ನಿವಾಸಿಗಳು/ನಾಗರಿಕರು ನಿಮ್ಮ ಮನೆ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಸಂವಾದಾತ್ಮಕ ಸಮಾರಂಭದಲ್ಲಿ ಭಾಗವಹಿಸಬೇಕು. ಆ ಮೂಲಕ ನಿಮಗೆ ಸಹಾಯ ಮಾಡಲಿರುವ ಸಂಚಾರ ಪೊಲೀಸರಿಗೆ ನೀವು ಸಹಕರಿಸಬೇಕು.












Click it and Unblock the Notifications