Bengaluru Traffic: 5 ಗಂಟೆಯಲ್ಲಿ 12.02 ಲಕ್ಷ ದಂಡ ಸಂಗ್ರಹ ಮಾಡಿದ ಪೊಲೀಸರು!
ಬೆಂಗಳೂರು, ನವೆಂಬರ್ 18: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಕಡಿಮೆ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಲು ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಳ್ಳುತ್ತಾರೆ. ಈಗ ನಡೆಸಿದ ಇಂತಹ ಕಾರ್ಯಾಚರಣೆಯಲ್ಲಿ ಪೊಲೀಸರು 1,507 ಕೇಸುಗಳನ್ನು ದಾಖಲು ಮಾಡಿ, 12.02 ಲಕ್ಷ ರೂ. ದಂಡವನ್ನು ಸಂಗ್ರಹ ಮಾಡಿದ್ದಾರೆ.
ನವೆಂಬರ್ 16ರ ಶನಿವಾರ ಬೆಳಗ್ಗೆ 11 ರಿಂದ 4 ಗಂಟೆಯ ತನಕ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಈ 5 ಗಂಟೆಯ ಕಾರ್ಯಾಚರಣೆಯಲ್ಲಿ 12 ಲಕ್ಷ ದಂಡವನ್ನು ಸಂಗ್ರಹ ಮಾಡಿದ್ದಾರೆ. ಕೆಲವು ಪ್ರಮುಖ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಯಾವ-ಯಾವ ಪ್ರಕರಣಗಳು?; ಈ ವಿಶೇಷ ಕಾರ್ಯಾಚರಣೆಯ ವೇಳೆ 127 ಅನಧಿಕೃತ ಪಾರ್ಕಿಂಗ್‌ನಿಂದ 64,500 ರೂ. ದಂಡವನ್ನು ಸಂಗ್ರಹಿಸಲಾಗಿದೆ. 722 ನೋ ಎಂಟ್ರಿ ಪ್ರಕರಣ ದಾಖಲಾಗಿದ್ದು, 3,66,500 ರೂ. ದಂಡ ಸಂಗ್ರಹವಾಗಿದೆ. ಫುಟ್‌ಪಾತ್ ಮೇಲಿನ ಸಂಚಾರದ 68 ಪ್ರಕರಣದಿಂದ 34,000 ರೂ., 590 ಒನ್ ವೇಯಲ್ಲಿ ಚಾಲನೆ ಪ್ರಕರಣದಿಂದ 2,97,000 ರೂ. ದಂಡವನ್ನು ಸಂಗ್ರಹಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಇ-ಕಾಮರ್ಸ್ ಉದ್ಯಮ ಬಹಳ ಚೇತರಿಕೆ ಕಂಡಿದೆ. ಡೆಲಿವರಿ ಬಾಯ್ಸ್ ಸಂಚಾರಿ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಶುಕ್ರವಾರ ಈ ಕುರಿತು ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು 4,293 ಪ್ರಕರಣ ದಾಖಲು ಮಾಡಿಕೊಂಡು ಒಂದೇ ದಿನ 22.13 ಲಕ್ಷ ದಂಡವನ್ನು ಸಂಗ್ರಹ ಮಾಡಿದ್ದಾರೆ.
ಸಿಗ್ನಲ್ ಜಂಪ್, ಏಕಮುಖ ಸಂಚಾರ ಸೇರಿದಂತೆ ಹಲವು ನಿಯಮಗಳನ್ನು ಡೆಲಿವರಿ ಮಾಡುವವರು ಪಾಲನೆ ಮಾಡುತ್ತಿಲ್ಲ. ಹೆಲ್ಮೆಟ್ ಇಲ್ಲದ 1,344 ಪ್ರಕರಣ ದಾಖಲು ಮಾಡಿ, 6,48,100 ರೂ. ದಂಡ ಕಟ್ಟಿಸಿಕೊಂಡಿದ್ದಾರೆ. ಹಿಂಬದಿ ಸವಾರರು ಹೆಲ್ಮೆಟ್ ಧರಿಸದ 976 ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಪೂರ್ವ ವಿಭಾಗದ ಸಂಚಾರಿ ಪೊಲೀಸರು ಶುಕ್ರವಾರ ಒನ್ ವೇಯಲ್ಲಿ ಸಂಚಾರ, ನೋ ಎಂಟ್ರಿ ರಸ್ತೆಯಲ್ಲಿ ಸಂಚಾರ, ನೋ ಪಾರ್ಕಿಂಗ್, ಫುಟ್‌ಪಾತ್ ಪಾರ್ಕಿಂಗ್, ಹೆಲ್ಮೆಟ್ ಇಲ್ಲದೆ ಪ್ರಯಾಣ, ಮೂವರ ಪ್ರಯಾಣ ಮುಂತಾದ ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ 603 ಕೇಸು ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿವೆ. ರಸ್ತೆ ಅಪಘಾತಗಳ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಅಕ್ಟೋಬರ್ ತಿಂಗಳಿನಲ್ಲಿ ನಗರದಲ್ಲಿ 3,969 ರಸ್ತೆ ಅಪಘಾತಗಳು ನಡೆದಿದ್ದು, 723 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ.
ಈ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆಗಳ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರನ್ನು ಹಿಡಿಯುವ ಜೊತೆಗೆ, ಜನರಲ್ಲಿ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಲು ಸಹ ಪ್ರಯತ್ನವನ್ನು ನಡೆಸುತ್ತಿದ್ದಾರೆ.
ಸಂಚಾರಿ ಪೊಲೀಸರು ಕೆಲವು ದಿನಗಳ ಕಾಲ ನಗರದಲ್ಲಿ ರಸ್ತೆ ರಸ್ತೆಯಲ್ಲಿ ವಾಹನ ಸವಾರರನ್ನು ಹಿಡಿದು ದಂಡ ವಿಧಿಸುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರು. ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಅವರ ಮನೆಗೆ ನೋಟಿಸ್ ಬರುತ್ತಿತ್ತು. ಆದರೆ ಈಗ ಮತ್ತೆ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಈ ಮೂಲಕ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ.












Click it and Unblock the Notifications