'Bengaluru Toll Relief: ಬೆಂಗಳೂರು ಹತ್ತಿರದ ಟೋಲ್‌ಗಳಲ್ಲಿ ಶುಲ್ಕ ವಿನಾಯಿತಿಗೆ ಆಗ್ರಹ'
ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಿವಾಸಿಗಳು ಕೆಲಸ, ಶಿಕ್ಷಣ, ಆರೋಗ್ಯ ಮತ್ತು ವ್ಯಾಪಾರ ಉದ್ದೇಶಕ್ಕಾಗಿ ಪ್ರತಿದಿನ ನಗರಕ್ಕೆ ಸಂಚರಿಸುತ್ತಾರೆ. ಈ ಸಂದರ್ಭಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಹೆಚ್ಚಿನ ಹೆದ್ದಾರಿ ಟೋಲ್ ಶುಲ್ಕವನ್ನು ಪಾವತಿಸಬೇಕಾದ ಅನಿವಾರ್ಯತೆ ಇದೆ. ಈ ಸಂಬಂಧ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ (ರಿ) ಆಗ್ರಹಿಸಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ (ರಿ) ಅಧ್ಯಕ್ಷರಾದ ಕೆ.ರಾಧಾಕೃಷ್ಣ ಹೊಳ್ಳ ಅವರು ಟೋಲ್ ಶುಲ್ಕದಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದಾರೆ.

ನಗರದ ಎಂಟ್ರಿಯಲ್ಲೇ ಟೋಲ್ ವಸೂಲಿ ನ್ಯಾಯವೇ?
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಘೋಷಣೆಯ ನಂತರ ನಗರ ವ್ಯಾಪ್ತಿ ಗಣನೀಯವಾಗಿ ವಿಸ್ತರಿಸಿದೆ. ಇದರ ಪರಿಣಾಮವಾಗಿ, ಕೆಲ ಟೋಲ್ ಪ್ಲಾಜಾಗಳು ನಗರ ಗಡಿಯಿಂದ ಕೇವಲ 10 ಕಿಲೋ ಮೀಟರ್ ಒಳಗೆ ಇರುವ ಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯ ನಿಯಮಗಳ ಪ್ರಕಾರ ನಗರ ಪ್ರದೇಶದ ಸುತ್ತಮುತ್ತ 20 ಕಿಲೋ ಮೀಟರ್ ವರೆಗೆ ಟೋಲ್ ವಿನಾಯಿತಿ ಅನ್ವಯವಾಗಬೇಕು. ಈ ನಿಯಮ ಪರಿಗಣಿಸುವದಾದರೆ ನಗರದ ಪ್ರವೇಶ ಬಾಗಿಲಲ್ಲೇ ಟೋಲ್ ವಸೂಲಿ ಮಾಡುವುದು ನ್ಯಾಯಸಮ್ಮತವೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಬೆಂಗಳೂರು ಪ್ರದೇಶದಲ್ಲಿ ಸುಮಾರು 236 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 13 ಟೋಲ್ ಪ್ಲಾಜಾಗಳು ಕಾರ್ಯ ನಿರ್ವಹಿಸುತ್ತಿವೆ. ಇದು ರಾಜ್ಯದಲ್ಲೇ ಅತೀ ಹೆಚ್ಚು ಟೋಲ್ ಪ್ಲಾಜಾ ಸಾಂದ್ರತೆ ಆಗಿದೆ. ಇದಕ್ಕೆ ಹೋಲಿಸಿದರೆ ಬೆಳಗಾವಿ, ಚಿತ್ರದುರ್ಗ, ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿಯೂ ದೀರ್ಘ ಟೋಲ್ ರಸ್ತೆಗಳು ಇದ್ದರೂ, ಅಲ್ಲಿ ಟೋಲ್ ಪ್ಲಾಜಾಗಳ ಸಂಖ್ಯೆ ಕಡಿಮೆ ಇದೆ. ಇದರಿಂದ ಪ್ರಯಾಣಿಕರಿಗೆ ಕಡಿಮೆ ಬಾರಿ ಟೋಲ್ ಪಾವತಿ ಮಾಡುವ ಪರಿಸ್ಥಿತಿ ಇದೆ ಎಂದು ಅವರು ವಿವರಿಸಿದ್ದಾರೆ.
ಮಧ್ಯಮ ವರ್ಗದವರಿಗೆ ಇದು ಆರ್ಥಿಕ ಭಾರ
ಪ್ರತಿದಿನ ಬೆಂಗಳೂರಿಗೆ ಸಂಚರಿಸುವ ಕಾರ್ಮಿಕರು ಮತ್ತು ಮಧ್ಯಮ ವರ್ಗದ ಕುಟುಂಬಗಳು ಈಗಾಗಲೇ ಟ್ರಾಫಿಕ್ ದಟ್ಟಣೆ, ಹೆಚ್ಚಿನ ಇಂಧನ ವೆಚ್ಚ ಮತ್ತು ಸಮಯ ನಷ್ಟದಿಂದ ತೀವ್ರ ಒತ್ತಡದಲ್ಲಿದ್ದಾರೆ. ಇದರ ಮೇಲಾಗಿ ಮರು ಟೋಲ್ ಪಾವತಿ ಮಾಡಬೇಕಾಗುವುದು ಅವರ ಆರ್ಥಿಕ ಭಾರವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬೆಂಗಳೂರು ನಗರ ವಿಸ್ತರಿಸಿದೆ. ಆಡಳಿತಾತ್ಮಕ ವ್ಯವಸ್ಥೆಯಲ್ಲೂ ಬದಲಾವಣೆ ಆಗಿದೆ. ಗ್ರೇಟರ್ ಬೆಂಗಳೂರು ಇಂದು ವಾಸ್ತವವಾಗಿದೆ. ಆದ್ದರಿಂದ ಟೋಲ್ ನೀತಿಯೂ ಈ ಹೊಸ ನಗರ ವಾಸ್ತವಕ್ಕೆ ಅನುಗುಣವಾಗಿ ಪರಿಷ್ಕರಣೆಯಾಗಬೇಕಿದೆ ಎಂದು ಅದರ ಅಗತ್ಯತೆಯನ್ನು ತಿಳಿಸಿ ಹೇಳಿದ್ದಾರೆ.
ಪರಿಹಾರ ಸ್ಪಷ್ಟವಾಗಿದೆ: ನಗರ ಗಡಿಯ ಸಮೀಪ ಇರುವ ಟೋಲ್ ಪ್ಲಾಜಾಗಳನ್ನು ನಗರ ವ್ಯಾಪ್ತಿಯಿಂದ ಇನ್ನಷ್ಟು ದೂರಕ್ಕೆ ಸ್ಥಳಾಂತರಿಸಬೇಕು. ಹಾಗಾದರೆ ದಿನನಿತ್ಯ ನಗರಕ್ಕೆ ಪ್ರವೇಶಿಸುವ ಸಾರ್ವಜನಿಕರಿಗೆ ಅನ್ಯಾಯವಾಗುವುದನ್ನು ತಪ್ಪಿಸಬಹುದು. ಆದ್ದರಿಂದ, ಬೆಂಗಳೂರು ಸುತ್ತಮುತ್ತಲಿನ ಪ್ರಸ್ತುತ ಟೋಲ್ ಪ್ಲಾಜಾಗಳ ಸ್ಥಳಾವಕಾಶವನ್ನು ಮರು ಪರಿಶೀಲಿಸಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳುವಂತೆ ತಮ್ಮ ದಯಾಳು ಹಸ್ತಕ್ಷೇಪವನ್ನು ವಿನಮ್ರವಾಗಿ ಕೋರುತ್ತೇವೆ ಎಂದಿದ್ದಾರೆ.
ವಿನಾಯಿತಿಯಿಂದ ಯಾರಿಗೆಲ್ಲ ಅನುಕೂಲ
ಸರ್ಕಾರ ಈ ಮನವಿ ಪುರಸ್ಕರಿಸಿದರೆ ಬೆಂಗಳೂರಿಗೆ ಹೊಂದಿಕೊಂಡಿರುವ ಅತ್ತಿಬೆಲೆ ಟೋಲ್ ಪ್ಲಾಜಾ, ಎಲೆಕ್ಟ್ರಾನಿಕ್ ಸಿಟಿ ಟೋಲ್, ಸಾದನಹಳ್ಳಿ/ದೇವನಹಳ್ಳಿ, ನೆಲಮಂಗಲ ಟೋಲ್, ಬಿಡದಿ, ಸೋಮನಹಳ್ಳಿ ಸೇರಿದಂತೆ ಒಟ್ಟು ಹದಿಮೂರು ಟೋಲ್ ಪ್ಲಾಜಾಗಳಲ್ಲಿ ನಿತ್ಯ ನಗರಕ್ಕೆ ಓಡಾಡುವ ಗ್ರಾಮೀಣ ಭಾಗದ ವಾಹನಗಳು (ರೈತರು, ತರಕಾರಿ ಸೇರಿ ಕೃಷಿ ಉತ್ಪನ್ನ ಸಾಗಿಸುವ ವಾಹನಗಳು, ಶಿಕ್ಷಣ, ವ್ಯಾಪಾರ, ವ್ಯವಹಾರಕ್ಕೆ ಬರುವವರು, ಇತ್ಯಾದಿ ವಾಹನಗಳು) ಟೋಲ್ ಶುಲ್ಕದಿಂದ ಮುಕ್ತಗೊಳ್ಳಲಿವೆ. ಶುಲ್ಕದಿಂದ ವಿನಾಯಿತಿ ಪಡೆಯುವ ಸಾಧ್ಯತೆ ಇದೆ.












Click it and Unblock the Notifications