Bengaluru rain: ಸೋಮವಾರವು ವಿವಿಧೆಡೆ ಜೋರು ಮಳೆ ದಾಖಲು: 'ಹಳದಿ' ಎಚ್ಚರಿಕೆ ಘೋಷಣೆ
ಬೆಂಗಳೂರು, ಅಕ್ಟೋಬರ್ 09: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಭಾನುವಾ ರಾತ್ರಿಯಿಂದ ಸುರಿದ ಮಳೆ ಸೋಮವಾರವು ಮುಂದುವರಿದಿದೆ. ಹವಾಮಾನದಲ್ಲಿನ ವೈಪರಿತ್ಯಗಳ ಕಾರಣದಿಂದ ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಮುಂದುವರಿಯಲಿದ್ದು, ನಗರಕ್ಕೆ 'ಹಳದಿ ಎಚ್ಚರಿಕೆ' ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆ ಸೋಮವಾರ ಮಧ್ಯಾಹ್ನವೇ ಬಿರುಸಾಗಿ ಸುರಿದಿದೆ. ಅನೇಕ ಕಡೆಗಳಲ್ಲಿ ಉತ್ತಮ ಮಳೆ ದಾಖಲಾಗಿದೆ. ವಿವಿಧ ಬಡಾವಣೆಗಳಲ್ಲಿ ಸುರಿದ ಮಳೆಗೆ ಸಂಚಾರ ಅಸ್ತವೆಸ್ತವಾಯಿತು. ಈ ಮಳೆ ತಡರಾತ್ರಿವರೆಗೂ ಮುಂದುವರಿಯುವ ಸಾಧ್ಯತೆಗಳು ಇವೆ.

ನೆರೆ ರಾಜ್ಯ ಆಂಧ್ರ ಪ್ರದೇಶದ ರಾಯಲ್ ಸೀಮಾ ಭಾಗದಿಂದ ತಮಿಳುನಾಡು ಮಾರ್ಗವಾಗಿ ಕನ್ಯಾಕುಮಾರಿ 1.5 ಕಿ.ಮೀ ಮೇಲ್ಮೈ ಸುಳಿಗಾಳಿ (ಸ್ಟ್ರಫ್) ಹಾದು ಹೋಗಿದೆ. ಇದರ ಪ್ರಭಾವದಿಂದ ಕರ್ನಾಟಕದ ದಕ್ಷಿಣ ಒಳನಾಡಿನ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಭಾರಿ ಮಳೆ ಆಗಲಿದೆ. ಈ ಸಂಬಂಧ ಬೆಂಗಳೂರಿಗೆ ಬುಧವಾರ (ಅ.11ರಂದು) ಹಳದಿ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ತಜ್ಞ ಡಾ.ಪ್ರಸಾದ್ ತಿಳಿಸಿದರು.
ಸೋಮವಾರ ಅಧಿಕ ಮಳೆ ದಾಖಲು: ಎಲ್ಲೆಲ್ಲಿ?
ಇಂದು ಸಂಜೆ 6.30ರ ಹೊತ್ತಿಗೆ ಬೆಂಗಳೂರಿನ ಎಚ್ ಗೊಲ್ಲಹಳ್ಳಿಯಲ್ಲಿ 45 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇನ್ನೂ ಕೊಟ್ಟಿಗೆಪಾಳ್ಯದಲ್ಲಿ 33 ಮಿಲಿ ಮೀಟರ್, ನಾಗಪುರ 31 ಮಿ.ಮೀ, ಕೆಂಗೇರಿಯಲ್ಲಿ 30 ಮಿ.ಮೀ, ರಾಜರಾಜೇಶ್ವರಿ ನಗರದಲ್ಲಿ 28ಮಿ.ಮೀ, ರಾಜಮಹಲ್ ಗುಟ್ಟಹಳ್ಳಿಯಲ್ಲಿ 27 ಮಿಲಿ ಮೀಟರ್, ನಾಯಂಡಹಳ್ಳಿಯಲ್ಲಿ 19, ಮಿ.ಮೀ, ವಿದ್ಯಾಪೀಠದಲ್ಲಿ 16.5 ಮಿ.ಮೀ, ಸಿಂಗಸಂದ್ರದಲ್ಲಿ 16 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದ ಹಲವೆಡೆ ಜಿಟಿ ಜಿಟಿ ಮಳೆ ಮುಂದುವರಿದಿದೆ.

ಜೋರಾಗಿ ಸುರಿದ ಮಳೆಗೆ ಕೆ.ಆರ್ ಮಾರುಕಟ್ಟೆ, ಬಿಜಿಎಸ್ ಮೇಲ್ಸೇತುವೆ, ಲಾಲ್ ಬಾಗ್ ಸಮೀಪ ಮುಖ್ಯ ರಸ್ತೆ, ಟೌನ್ ಹಾಲ್, ಕೆಂಗೇರಿ, ರಾಜಾಜಿನಗರ ಸೇರಿದಂತೆ ವಿವಿಧೆಡೆ ರಸ್ತೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮಳೆಯಿಂದ ಸಂಚಾರ, ವ್ಯಾಪಾರಕ್ಕೆ ತೊಂದರೆ
ಹಂಪಿನಗರ, ವಿಜಯನಗರ, ಮೆಜೆಸ್ಟಿಕ್ ಸುತ್ತಮುತ್ತ, ಹೆಬ್ಬಾಳ, ಕೋರಮಂಗಲ, ಟಿನ್ ಫ್ಯಾಕ್ಟರಿ, ಮಹಾದೇವಪುರ ವ್ಯಾಪ್ತಿಯ ವಿವಿಧೆಡೆ, ವಿದ್ಯಾರಣ್ಯಪುರ, ನಾಯಂಡಹಳ್ಳಿ, ಚಾಮರಾಜಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಸಂಚಾರ ಅಸ್ತವೆಸ್ತವಾಯಿತು. ಜಿಟಿ ಜಿಟಿ ಮಳೆಯಿಂದ ವ್ಯಾಪಾರಕ್ಕೆ ತೊಂದರೆ ಆಯಿತು.
ಈ ಮಳೆ ತಡರಾತ್ರಿವರೆಗೂ ಮುಂದುವರಿಯುವ ನಿರೀಕ್ಷೆಗಳು ಇದೆ. ಮುಂದಿನ ಮೂರು ದಿನ ಮಳೆ ಪ್ರಯುಕ್ತ ನಗರದಲ್ಲಿ ತುಂಪು ವಾತಾವರಣ ಕಂಡು ಬರಲಿದ್ದು, ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಡಾ.ಪ್ರಸಾದ್ ತಿಳಿಸಿದರು.












Click it and Unblock the Notifications