ಬೆಂಗಳೂರಲ್ಲಿ ದಿಢೀರ್ ಭೀಕರ ಟ್ರಾಫಿಕ್ ಜಾಮ್, ಕಿಲೋ ಮೀಟರ್ ಉದ್ದ ನಿಂತಿರುವ ವಾಹನಗಳು... Hosur Road
ನಮ್ಮ ಬೆಂಗಳೂರು ಇಡೀ ಜಗತ್ತಿನಲ್ಲಿ ಹೆಸರು ಮಾಡಿದ್ದರೂ, ಬೆಂಗಳೂರಿಗೆ ಟ್ರಾಫಿಕ್ ಸಮಸ್ಯೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರ್ಕಾರ ಕೂಡ ಫ್ಲೈಓವರ್, ಅಂಡರ್‌ಪಾಸ್ ಸೇರಿ ಹಲವು ಯೋಜನೆ ತಂದು ಟ್ರಾಫಿಕ್ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದರೂ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ. ಅದ್ರಲ್ಲೂ ಹೆದ್ದಾರಿಗಳಲ್ಲಿ ಏನಾದರೂ ಎಡವಟ್ಟು ಆಗಿಹೋದರೆ ಮುಗಿದೇ ಹೋಯ್ತು ಕಥೆ ಅಂತಾ ಹೇಳಬಹುದು. ಇದೇ ರೀತಿಯಾಗಿ ಈಗ ದಿಢೀರ್ ಬೆಂಗಳೂರು ಟು ಹೊಸೂರು ಹೆದ್ದಾರಿ ಭೀಕರ ಟ್ರಾಫಿಕ್ ಸಮಸ್ಯೆಗೆ ಸಿಲುಕಿ ನಲುಗಿ ಹೋಗಿದೆ.
ಬೆಂಗಳೂರು ನಗರವನ್ನ ತಮಿಳುನಾಡಿಗೆ ಸಂಪರ್ಕಿಸುವ, ಹೊರವಲಯ ಅತ್ತಿಬೆಲೆ ಸಮೀಪ ಭೀಕರ ಘಟನೆ ಸಂಭವಿಸಿತ್ತು. ಬೆಂಗಳೂರು-ಹೊಸೂರು ನಡುವೆ ಪ್ರಮುಖ ರಾಷ್ಟ್ರೀಯ ಹೆದ್ದಾರಿಗೆ ಕಂಟಕ ತಂದಿದ್ದ ಕಾಮಗಾರಿ, ಸ್ಥಳೀಯರನ್ನ ದೊಡ್ಡ ಸಂಕಷ್ಟಕ್ಕೆ ನೂಕಿದೆ. ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ವೇಳೆ ಹೆದ್ದಾರಿಯ ಒಂದು ಬದಿಯಲ್ಲಿ ಭಾರಿ ದೊಡ್ಡ ಕುಸಿತ ಉಂಟಾಗಿ, ದೊಡ್ಡದಾಗಿ ಹಳ್ಳ ನಿರ್ಮಾಣ ಆಗಿದೆ. ಈ ಕಾರಣಕ್ಕೆ ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಕಿಲೋ ಮೀಟರ್ ಉದ್ದಕ್ಕೆ ಟ್ರಾಫಿಕ್ ಜಾಮ್ ಆಗಿದೆ. ನಿನ್ನೆ ಕಾಮಗಾರಿ ನಡೆಯುವ ಸಮಯದಲ್ಲಿ ಕುಸಿತ ಆಗಿತ್ತು ಎಂದು ಹೇಳಲಾಗಿದ್ದು, ಇಂದು ಬೆಳಗ್ಗೆಯಿಂದಲೇ ವಿಪರೀತ ಟ್ರಾಫಿಕ್ ಜಾಮ್ ಎದುರಾಗಿತ್ತು.

ಸ್ಕೂಲ್ ಬಸ್, ಆಂಬುಲೆನ್ಸ್ ಪರದಾಟ
ಹೆದ್ದಾರಿಯಲ್ಲಿ ಭೀಕರ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ಸ್ಕೂಲ್ ಬಸ್ ಮತ್ತು ಆಂಬುಲೆನ್ಸ್ ಓಡಾಟಕ್ಕೂ ಸಮಸ್ಯೆ ಎದುರಾಗಿತ್ತು. ಅದರಲ್ಲೂ ಶಾಲೆಗೆ ಹೋಗಬೇಕಿದ್ದ ಮಕ್ಕಳು ಟ್ರಾಫಿಕ್ ಜಾಮ್ ಕಾರಣಕ್ಕೆ ಹೆದ್ದಾರಿಯಲ್ಲೇ ಪರದಾಡುವಂತೆ ಆಗಿತ್ತು. ಇನ್ನು ಆಂಬುಲೆನ್ಸ್ ಪರಿಸ್ಥಿತಿ ಕೂಡ ಇದೇ ರೀತಿ ಆಗಿದ್ದು, ಆಸ್ಪತ್ರೆಗೆ ಹೋಗಲು ರೋಗಿಗಳು ನರಳಾಡುತ್ತಿದ್ದಾರೆ. ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿ ಈ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಕೂಡಲೇ ಈ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಾರ್ಮಿಕರಿಗೂ ಸೂಕ್ತ ರಕ್ಷಣೆ ಇಲ್ಲ?
ಮತ್ತೊಂದು ಕಡೆ ಹೆದ್ದಾರಿಯಲ್ಲಿ ಕಾಮಗಾರಿ ನಡೆಸುತ್ತಿರುವ ಕಾರ್ಮಿಕರಿಗೆ ಸೂಕ್ತವಾದ ರಕ್ಷಣೆ ಇಲ್ಲದೆ ಕೆಲಸ ಮಾಡಿಸಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ. ಈ ಸಂಬಂಧ ಇದೀಗ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿವೆ. ಹಲವು ತಿಂಗಳಿಂದ ಈ ಕಾಮಗಾರಿ ಹಿನ್ನೆಲೆ ಸಾಲು ಸಾಲು ಸಮಸ್ಯೆಗಳು ಎದುರಾಗುತ್ತಿದ್ದು, ಕೂಡಲೇ ಅದನ್ನೆಲ್ಲಾ ಬಗೆಹರಿಸಲು ಅಧಿಕಾರಿ ವರ್ಗ ಮುಂದಾಗಬೇಕು ಎಂದು ಆಗ್ರಹಿಸಲಾಗಿದೆ.












Click it and Unblock the Notifications