ಬೆಂಗಳೂರಲ್ಲಿ ಈಜುಕೊಳ ಪ್ರವೇಶ ದರ ಬೇಕಾಬಿಟ್ಟಿ ಹೆಚ್ಚಳ: ಪೋಷಕರ ಆಕ್ರೋಶ
ಬೆಂಗಳೂರು, ಏಪ್ರಿಲ್ 22: ರಣ ಬಿಸಿಲು ಎಲ್ಲರನ್ನು ಕಾಡುತ್ತಿದೆ. ಮಕ್ಕಳು ಬೇಸಿಗೆ ರಜೆಯಲ್ಲಿದ್ದಾರೆ. ಸ್ವಲ್ಪ ಹೊತ್ತು ತಣ್ಣಗೆ ಈಜಾಡಿಕೊಂಡು ಬರೋಣ ದೇಹಕ್ಕೆ ತಂಪಾಗುತ್ತದೆ, ವ್ಯಾಯಾಮವು ಆಗುತ್ತದೆ ಎಂದು ಕೊಂಡವರಿಗೆ ಈಜುಕೊಳದ ದರ ನಿಗದಿಯು ಶಾಕ್ ನೀಡಿದೆ. ಹೌದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಈಜುಕೊಳದ ಟಿಕೆಟ್ ದರ ಮನಬಂದಂತೆ ಹೆಚ್ಚಿಸಲಾಗಿದೆ. ಬಿಬಿಎಂಪಿ ಎಚ್ಚರಿಕೆ ನಡುವೆಯು ದರ ಏರಿಕೆ ಆಗಿದೆ.
ಸಣ್ಣವರಿಗೆ ಮತ್ತು ದೊಡ್ಡವರಿಗೆ ಈಜುಕೊಳದಲ್ಲಿ ಈ ಮೊದಲು ಕಡಿಮೆ ದರ ಇತ್ತು. ಅರ್ಧದಿಂದ ಒಂದು ಗಂಟೆವರೆಗಿನ ಸಮಯಕ್ಕೆ ಈಜುಕೊಳಕ್ಕೆ ನಿಗಿದಿಪಡಿಸಿದ್ದ ದರವನ್ನು ಇದೀಗ ಬೇಕಾ ಬಿಟ್ಟಿಯಾಗಿ ಹೆಚ್ಚಿಸಲಾಗಿದೆ. ಚಿಕ್ಕವರಿಗೆ 25-30 ರೂಪಾಯಿ ದೊಡ್ಡವರಿಗೆ 50ರೂಪಾಯಿ ಇತ್ತು. ಇದೀಗ ಎಲ್ಲರಿಗೂ ಸಾರಸಗಟಾಗಿ 50 ರೂಪಾಯಿ ಹೆಚ್ಚಿಸಲಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈಜುಕೊಳಕ್ಕೆ ಬರುತ್ತಿದ್ದಾರೆ ಎನ್ನಲಾಗಿದೆ. ಈ ದರ ಏರಿಕೆ ಪೋಷಕರಿಗೆ ಮತ್ತೊಂದು ತಲೆ ನೋವು ತಂದಿದೆ.

ಏಕರೂಪದ ದರ ನಿಗದಿ ಇಲ್ಲ:ಪೋಷಕರ ಆಕ್ರೋಶ
40 ನಿಮಿಷ ಈಜುಕೊಳ ಪ್ರವೇಶಿಸಲು ದರ ಹೆಚ್ಚಿಸಿದ್ದಲ್ಲದೇ, ಈಜುಕೊಳದ ಉಸ್ತುವಾರಿಗಳ ಸಹ ಮನ ಬಂದಂತೆ ಹೆಚ್ಚುವರಿ ಹಣ ಪಡೆದದ್ದು ಕಂಡು ಬಂದಿದೆ. ಒಂದೊಂದು ಕಡೆ ಒಂದೊಂದು ರೀತಿಯ ದರವಿದೆ. ಏಕರೂಪದ ದರ ನಿಗದಿ ಆಗಿಲ್ಲ. ಇದನ್ನು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಹಾಲಕ್ಷ್ಮೀ ಬಡಾವಣೆ, ವಿಜಯಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಈಜುಕೊಳಕ್ಕೆ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಸಿಗೆ ಹಿನ್ನೆಲೆಯಲ್ಲಿ ಮಕ್ಕಳು ಈಜುಕೊಳದಲ್ಲಿ ಆಟವಾಡುವುದನ್ನು ಆನಂದಿಸುತ್ತಿದ್ದಾರೆ. ಆದ್ದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ದರ ಇಳಿಕೆ ಇಲ್ಲವೇ ಏಕ ರೂಪದ ಸೂಕ್ತ ದರ ನಿಗದಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸಮ್ಮರ್ ಕ್ಯಾಂಪ್ ಹಣ ವಸೂಲಿ ಮಾಡುವುದು, ಸಿಕ್ಕ ಅವಕಾಶ ದುರಪಯೋಗ ಪಡಿಸಿಕೊಂಡರೆ ಅಂತವರ ವಿರುದ್ಧ ಪಾಲಿಕೆ ಕ್ರಮ ಜರುಗಿಸಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಚ್ಚರಿಕೆ ನೀಡಿದ್ದಾರೆ. ಮನ ಬಂದಂತೆ ಹಣ ವಸೂಲಿಗೆ ಅವಕಾಶ ಇಲ್ಲ ಎಂದು ಅವರು ಹೇಳಿದ್ದಾರೆ. ಹೀಗಿದ್ದರೂ ಈಜುಕೊಳದ ವಿಚಾರದಲ್ಲಿ ನಿಯಮ ಉಲ್ಲಂಘನೆ ಆಗಿದೆ.
ಈ ವರ್ಷ ಬೆಂಗಳೂರಿನ ಜನರಿಗೆ ದರ ಏರಿಕೆ ಬರೆ ಮೇಲಿಂದ ಮೇಲೆ ಬೀಳುತ್ತಿದೆ. ಬಸ್ ದರ ಏರಿಕೆ, ನಮ್ಮ ಮೆಟ್ರೋ, ಹಾಲು, ವಿದ್ಯುತ್ ಸೇರಿದಂತೆ ಅಗತ್ಯ ಎಲ್ಲ ವಸ್ತುಗಳ ದರ ಹೆಚ್ಚಳವಾಗಿದೆ. ಇದು ಸಾರ್ವಜನಿಕರಿಗೆ ಆರ್ಥಿಕ ಹೊರೆ ಉಂಟು ಮಾಡಿದೆ. ಇದೀಗ ಅಪರೂಪಕ್ಕೊಮ್ಮೆ ತೆರಳುವವರಿಗೂ ಈಜುಕೊಳದ ಬೆಲೆ ಹೆಚ್ಚಳ ಕಿರಿ ಕಿರಿ ಶಾಕ್ ನೀಡಿದೆ.












Click it and Unblock the Notifications