ಬೆಂಗಳೂರಿನ ಕಸ ಗುಡಿಸಲು ದಿನಕ್ಕೆ 24,00,000 ರೂಪಾಯಿ ಖರ್ಚು, ಏನಿದು ವಿಪಕ್ಷಗಳ ಆರೋಪ?
ಬೆಂಗಳೂರಿಗೆ 46 ಕಸ ಗುಡಿಸುವ ಯಂತ್ರಗಳನ್ನು ಬಾಡಿಗೆಗೆ ನೀಡುವ 613 ಕೋಟಿ ರೂಪಾಯಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಆದರೆ ಈ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಗಂಭೀರ ಆರೋಪ ಮಾಡಿವೆ. ಕಸ ಗುಡಿಸುವ ಯಂತ್ರಗಳ ಹೆಸರಿನಲ್ಲಿ ಕನ್ನಡಿಗರ ತೆರಿಗೆ ಹಣವನ್ನು ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡುತ್ತಿದೆ ಎಂದು ಆರೋಪಿಸಿವೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದಿನಕ್ಕೊಂದು ಲೂಟಿ ನಡೆಯುತ್ತಲೇ ಇದೆ. ಅದೇ ಪಟ್ಟಿಗೆ ಇದೀಗ ಕಸ ಗುಡಿಸುವ ಮಷಿನ್ ಕೂ ಸೇರಿದೆ ಎಂದು ಬಿಜೆಪಿ ಆರೋಪ ಹೊರಿಸಿದೆ.
ಕನ್ನಡಿಗರ ತೆರಿಗೆ ಹಣವನ್ನು ಕಸ ಗುಡಿಸುವ ಮಷಿನ್ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ. ಈ ಯಂತ್ರದ ಮಾರುಕಟ್ಟೆ ಬೆಲೆ 115 ಕೋಟಿ ರೂಪಾಯಿ, ಕಾಂಗ್ರೆಸ್ ಹೇಳಿರುವ ಗುತ್ತಿಗೆ ಬೆಲೆ 613 ಕೋಟಿ ರೂಪಾಯಿ. ಈ ಎರಡರ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ ಎಂದು ಅನುಮಾನ ವ್ಯಕ್ತಪಡಿಸಿದೆ. ಇವರ ಲೆಕ್ಕ ನೋಡಿದರೆ ಬೆಂಗಳೂರಿನ ಕಸ ಗುಡಿಸಲು ಒಂದು ದಿನದ ಖರ್ಚು ₹24 ಲಕ್ಷ ತಗುಲುತ್ತದೆ. ಕೋಟಿ ಕೋಟಿ ಲೂಟಿ ಹೊಡೆಯುತ್ತಿರುವ ಈ ಭ್ರಷ್ಟ ಸರ್ಕಾರಕ್ಕೆ ಜನ ಬುದ್ಧಿ ಕಲಿಸುವುದು ಖಚಿತ, ನಿಶ್ಚಿತ ಎಂದು ಬಿಜೆಪಿ ಎಚ್ಚರಿಸಿದೆ.

ಬಾಡಿಗೆಗೆ ಬದಲು ಖರೀದಿಗೆ ಕಡಿಮೆ ವೆಚ್ಚ
ಬೆಂಗಳೂರಿನಲ್ಲಿ ಬಿಬಿಎಂಪಿ ಯಾರ್ಡ್‌ಗಳಲ್ಲಿ 26 ಕಸ ಗುಡಿಸುವ ಯಂತ್ರಗಳು ಬಳಕೆಯಾಗದೆ ಬಿದ್ದಿವೆ. ಆದರೆ ನಮ್ಮ ಹಣಕಾಸು ಪ್ರಿಯ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈಗ ₹613 ಕೋಟಿ ಖರ್ಚು ಮಾಡಿ, ಪ್ರತಿ ಯಂತ್ರಕ್ಕೆ ₹1.9 ಕೋಟಿಯಂತೆ 46 ಹೆಚ್ಚುವರಿ ಬಾಡಿಗೆ ನೀಡಲು ಬಯಸಿದೆ. ಅದೇ ಯಂತ್ರಗಳನ್ನು ಸಂಪೂರ್ಣವಾಗಿ ಖರೀದಿಸಲು ಕೇವಲ ₹1.3-3 ಕೋಟಿ ವೆಚ್ಚವಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇದು ತಪ್ಪು ಲೆಕ್ಕಾಚಾರವಲ್ಲ. ಇದು ಗಣಿತವನ್ನು ಮಧ್ಯಾಹ್ನದ ಬೆಳಕಲ್ಲೇ ಕೊಂದು, ಹೂತು, ದಹನ ಮಾಡಿದಂತದ್ದು. ತಜ್ಞರ ಸಮಿತಿಯು ಈ ಯಂತ್ರಗಳನ್ನು ಖರೀದಿಸಲು ಶಿಫಾರಸು ಮಾಡಿತು. ಆದರೆ ಬಿಸಿಜಿ ಕಾರ್ಯಕ್ಷಮತೆಗಾಗಿ ಪಾವತಿ ಮಾದರಿಯನ್ನು ಪ್ರತಿಪಾದಿಸಿತು. ಆದರೂ ಡಿಸಿಎಂ ಅವರ ತಂಡವು ಅತ್ಯಂತ ದುಬಾರಿ ಆಯ್ಕೆಯನ್ನು ಆರಿಸಿ, ಅದನ್ನು ಆಡಳಿತ ಎಂದು ಲೇಬಲ್ ಮಾಡಿ ಹೊಸ ಆರ್ಥಿಕ ಸಿದ್ಧಾಂತವನ್ನು ರಚಿಸಿತು ಎಂದು ದೂರಿದ್ದಾರೆ.
ಬಹುಶಃ ವೆಚ್ಚ, ಕಾರ್ಯಕ್ಷಮತೆ ಮತ್ತು ಹೊಣೆಗಾರಿಕೆಯ ನಿಜವಾದ ಅರ್ಥವನ್ನು ತಿಳಿದಿರುವ ಕಿರಣ್ ಮಜುಂದಾರ್ ಶಾ ಹಾಗೂ ಟಿ.ವಿ. ಮೋಹನದಾಸ್ ಪೈ ಸರ್ ಅವರಂತಹ ಕಾರ್ಪೊರೇಟ್ ನಾಯಕರು ಈ ಸರ್ಕಾರಕ್ಕೆ ಒಂದು ಕ್ರ್ಯಾಶ್ ಕೋರ್ಸ್ ಮೂಲಭೂತ ಗಣಿತದಲ್ಲೇ ಉತ್ತರ ಕೊಡಬೇಕಾದ ಸಮಯ ಬಂದಿದೆ. ಇಲ್ಲದಿದ್ದರೆ ಇನ್ನೊಂದು ₹600 ಕೋಟಿ ಇದೇ ರೀತಿ ಕಾಣೆಯಾಗಬಹುದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications