Bengaluru Rent: ವರ್ಕ್ ಫ್ರಂ ಹೋಮ್ ಕೊನೆಗೊಂಡಂತೆ ಬೆಂಗಳೂರಿನಲ್ಲಿ ಮುಗಿಲು ಮುಟ್ಟಿದ ಮನೆ ಬಾಡಿಗೆ ದರಗಳು!
ಪುಣೆ ನವೆಂಬರ್ 18: ಐಟಿ ಕೇಂದ್ರಗಳಾದ ಪುಣೆ, ಚೆನ್ನೈ, ಬೆಂಗಳೂರಿನಲ್ಲಿನ ಕಂಪನಿಗಳು ವರ್ಕ್ ಫ್ರಮ್ ಹೋಮ್ ಬದಲಿಗೆ ವರ್ಕ್ ಫ್ರಮ್ ಆಫೀಸ್ ನಿಯಮ ಜಾರಿಗೆ ತರುತ್ತಿದ್ದಂತೆ ಮನೆ ಬಾಡಿಗೆ ಹೆಚ್ಚಳವಾಗಿದೆ. ಇತ್ತೀಚೆಗೆ ಐಟಿ ಮತ್ತು ಇತರ ಕಂಪನಿಗಳು ರಿಮೋಟ್ ವರ್ಕ್ ನೀತಿಗಳನ್ನು ರದ್ದುಗೊಳಿಸುತ್ತಿವೆ. ಪ್ರತಿ ವಾರದ ಕೆಲವು ದಿನಗಳವರೆಗೆ ಕಚೇರಿಯಿಂದಲೇ ಕೆಲಸ ಮಾಡುವಂತೆ ನೌಕರರಿಗೆ ಒತ್ತಾಯಿಸುತ್ತಿವೆ.
ಇದರ ಪರಿಣಾಮವಾಗಿ ಐಟಿ ಹಬ್‌ಗಳು ಮತ್ತು ಬೆಂಗಳೂರು ಸೇರಿದಂತೆ ಚೆನ್ನೈ, ಹೈದರಾಬಾದ್, ಮುಂಬೈ, ಪುಣೆ, ಮತ್ತು ದೆಹಲಿ-ಎನ್‌ಸಿಆರ್‌ನಂತಹ ಪ್ರಮುಖ ನಗರಗಳಲ್ಲಿ ಮನೆ ಬಾಡಿಗೆಗಳು 10ರಿಂದ40% ರಷ್ಟು ಏರಿಕೆ ಆಗಿದೆ.

ರಿಯಲ್ ಎಸ್ಟೇಟ್‌ನ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ಹಣಕಾಸಿನ ನಷ್ಟದಿಂದ ಚೇತರಿಸಿಕೊಳ್ಳಲು ಮನೆ ಮಾಲೀಕರು ಬಾಡಿಗೆಯನ್ನು ಏರಿಕೆ ಮಾಡುತ್ತಿದ್ದಾರೆ. ಮನೆ ಬಾಡಿಗೆಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮನೆ ಮಾಲೀಕರು ಕೂಡ ಬೇಡಿಕೆಗೆ ಅನುಗುಣವಾಗಿ ಬಾಡಿಗೆಯನ್ನು ಹೆಚ್ಚಿಸುತ್ತಿದ್ದಾರೆ.
ಮುಂಬರುವ 2024 ರ ವರ್ಷದಲ್ಲಿ ಹೆಚ್ಚಿನ ಉದ್ಯೋಗಿಗಳು ಮೆಟ್ರೋಪಾಲಿಟನ್ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲಿದ್ದಾರೆ. ಹೀಗಾಗಿ ಮನೆ ಬಾಡಿಗೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬಾಡಿಗೆ ಕೂಡ ಹೆಚ್ಚಾಗಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಕೋವಿಡ್ ಅಲೆಗಳ ನಂತರ ವಸತಿ ಬಾಡಿಗೆಗಳು ಗಮನಾರ್ಹ ಚೇತರಿಕೆ ಕಂಡಿವೆ.
ವಿಶೇಷವಾಗಿ IT/ITES ಉದ್ಯಮಕ್ಕೆ ಪ್ರಮುಖ ಕೇಂದ್ರಗಳಾದ ನಗರಗಳು ಬಾಡಿಗೆ ಮೌಲ್ಯಗಳಲ್ಲಿ ಬೆಳವಣಿಗೆಯನ್ನು ಅನುಭವಿಸಲಿವೆ ಎಂಬುದು ಗಮನಾರ್ಹ. ಇದು ಭಾರತೀಯ ಇನ್ಫೋಟೆಕ್ ವಲಯದ ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯನ್ನು ಎತ್ತಿ ತೋರಿಸುತ್ತದೆ.
ವಿಪ್ರೋ ಮತ್ತು ಟಿಸಿಎಸ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿವೆ. ಯುವ ವೃತ್ತಿಪರರು ಕೆಲಸ ಮತ್ತು ಕುಟುಂಬ ಜೀವನವನ್ನು ಸಮತೋಲನಗೊಳಿಸಲು ತಮ್ಮ ಕೆಲಸದ ಸ್ಥಳಗಳಿಗೆ ಹತ್ತಿರದಲ್ಲಿ ವಾಸಿಸಲು ಬಯಸುವುದರಿಂದ ಇಂಥಹ ಸ್ಥಳಗಳಲ್ಲಿ ಮನೆ ಬಾಡಿಗೆ ಬೇಡಿಕೆ ಹೆಚ್ಚಾಗಲಿದೆ.

ಇಂಥವರನ್ನು ಸೆಳೆಯಲು ಲಿಂಕ್ಡ್‌ಇನ್ ಪ್ರೊಫೈಲ್‌ಗಳಿಗೂ ಸಹ ಭೂಮಾಲೀಕರು ವಿನಂತಿ ಕಳಿಸುತ್ತಿದ್ದಾರೆ. 2-BHK ಮನೆಗಳು 1,000 ಚದರ ಅಡಿ ಜಾಗ ಮತ್ತು 3-BHK ಮನೆಗಳು ವಿಶೇಷವಾಗಿ ಹೈದರಾಬಾದ್‌ನ ಗಚಿಬೌಲಿ, ವೈಟ್‌ಫೀಲ್ಡ್ ಮತ್ತು ಬೆಂಗಳೂರಿನ ಸರ್ಜಾಪುರ ರಸ್ತೆಯಂತಹ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ ಎಂದು ಮಾರುಕಟ್ಟೆ ಡೇಟಾ ತೋರಿಸುತ್ತದೆ.
ಬೆಂಗಳೂರು, ಹೈದರಾಬಾದ್, ಮುಂಬೈ, ಪುಣೆ, ದೆಹಲಿ-ಎನ್‌ಸಿಆರ್, ಮತ್ತು ಚೆನ್ನೈನ ಪ್ರಮುಖ ಆರು ಸೇವಾ ವಲಯದ ಉದ್ಯೋಗ ಕೇಂದ್ರಗಳಲ್ಲಿ ಸರಾಸರಿ ಮನೆ ಬಾಡಿಗೆಗಳು ಅಕ್ಟೋಬರ್ 2022 ಮತ್ತು ಅಕ್ಟೋಬರ್ 2023 ನಡುವೆ 12% ರಿಂದ 24% ವರೆಗೆ ಹೆಚ್ಚಾಗಿವೆ ಎಂದು ರಿಯಲ್ ಎಸ್ಟೇಟ್ ಪ್ಲಾಟ್‌ಫಾರ್ಮ್ NoBroker ನಿಂದ ಡೇಟಾ ಬಹಿರಂಗಪಡಿಸುತ್ತದೆ.
ದೀಪಾವಳಿಯ ನಂತರ ಹಿಂದಿರುಗುವ ಉದ್ಯೋಗಿಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇದರ ಪರಿಣಾಮವಾಗಿ ಬಾಡಿಗೆ ಬೆಲೆಯಲ್ಲಿ ಏರಿಕೆಯಾಗುತ್ತದೆ. ಮನೆಯಿಂದ ಕೆಲಸ ಮಾಡುವ ನೀತಿಯ ಹಠಾತ್ ಬದಲಾವಣೆಯಿಂದ ಮನೆ ಬಾಡಿಗೆಗಳು ಹೆಚ್ಚಾಗತೊಡಗಿವೆ.
ಯಾಕೆಂದರೆ ಮನೆ ಬಾಡಿಗೆಗೆ ಬೇಡಿಕೆಯು ಇತ್ತೀಚೆಗೆ ಮೂರುಪಟ್ಟು ಹೆಚ್ಚಾಗಿದೆ. ಭೂಮಾಲೀಕರು ಈಗ ಸಾಂಕ್ರಾಮಿಕ ಸಮಯದಲ್ಲಿ ಕಳೆದುಹೋದ ಆದಾಯವನ್ನು ಅತಿಯಾದ ಬಾಡಿಗೆ ಶುಲ್ಕವನ್ನು ವಿಧಿಸುವ ಮೂಲಕ ಸರಿದೂಗಿಸಲು ಪ್ರಯತ್ನಿಸುತ್ತಿದ್ದಾರೆ.












Click it and Unblock the Notifications