Bengaluru Second Airport: ಬೆಂಗಳೂರು 2ನೇ ಏರ್‌ಪೋರ್ಟ್: ಡಿ.ಕೆ ಶಿವಕುಮಾರ್‌ಗೆ ಟಕ್ಕರ್!
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಹಾಗೂ ಡಿ.ಕೆ ಶಿವಕುಮಾರ್ ಅವರಿಗೆ ಟಕ್ಕರ್ ಕೊಡುವುದಕ್ಕೆ ಕಾಂಗ್ರೆಸ್‌ನಿಂದಲೇ ಸಿದ್ಧತೆ ನಡೆದಿದೆ. ಪ್ರಭಾವಿ ದಲಿತ ಸಚಿವರು ಹಾಗೂ 34ಕ್ಕೂ ಹೆಚ್ಚು ಶಾಸಕರು ಈ ವಿಚಾರದಲ್ಲಿ ಒಂದಾಗಿದ್ದಾರೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ವಿಚಾರ ಹೆಚ್ಚು ಚರ್ಚೆಯಾಗುತ್ತಿರುವಾಗಲೇ ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎನ್ನುವ ವಿಚಾರವು ಚರ್ಚೆಯ ಮುನ್ನೆಲೆಗೆ ಬಂದಿದೆ. ಈ ಮೂಲಕ ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲೂ ಡಿ.ಕೆ ಶಿವಕುಮಾರ್ ಅವರನ್ನು ಕಟ್ಟಿಹಾಕುವ ಪ್ರಯತ್ನ ಜೋರಾಗಿದೆ. ಇದು ಯಾಕೆ ಹಾಗೂ ಏನಿದು ಲೆಕ್ಕಾಚಾರ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮೂರು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಆದರೆ ಇದೀಗ ಹೊಸ ಜಾಗದ ಹೆಸರನ್ನು ಚರ್ಚೆಯ ಮುನ್ನಲೆಗೆ ತರುವ ಮೂಲಕ ಡಿ.ಕೆ ಶಿವಕುಮಾರ್ ಅವರನ್ನು ಕಟ್ಟಿಹಾಕುವ ಪ್ರಯತ್ನ ಜೋರಾಗಿದೆ. ಸಚಿವರಾದ ಜಿ. ಪರಮೇಶ್ವರ್ ಅವರು ಹಾಗೂ ಸತೀಶ್ ಜಾರಕಿಹೊಳಿ ಅವರು ಶಿರಾದಲ್ಲಿ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದಕ್ಕೆ 34ಕ್ಕೂ ಹೆಚ್ಚು ಜನ ಪ್ರಭಾವಿ ಶಾಸಕರು ಬೆಂಬಲವನ್ನೂ ಸೂಚಿಸಿದ್ದಾರೆ.

ಡಿ.ಕೆ ಶಿವಕುಮಾರ್ ಅವರು, ಬಿಡದಿ - ಕನಕಪುರ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಮೂಲಕ ಈ ಭಾಗದ ಜನರಿಗೆ ಹಾಗೂ ಈ ಭಾಗದ ಆಸ್ತಿದಾರರಿಗೆ ಲಾಭ ಮಾಡಿಕೊಡಬೇಕು ಎನ್ನುವ ಲೆಕ್ಕಾಚಾರದಲ್ಲಿ ಇದ್ದಾರೆ. ಈಗಾಗಲೇ ಈ ಭಾಗದಲ್ಲಿ ಆಸ್ತಿದಾರರಿಗೆ ಯಾವುದೇ ಕಾರಣಕ್ಕೂ ಭೂಮಿ ಮಾರಾಟ ಮಾಡಬೇಡಿ ಅಂತ ಮನವಿ ಮಾಡಿದ್ದರು. ಶಾರ್ಟ್ ಲಿಸ್ಟ್ ಮಾಡಲಾಗಿರುವ ಜಾಗಗಳು ಕನಕಪುರ ಕೇಂದ್ರದಿಂದ ಸಮೀಪದಲ್ಲೇ ಇದೆ. ಆದರೆ, ಇದಕ್ಕೆ ಇದೀಗ ಅಡೆತಡೆ ಸೃಷ್ಟಿಯಾಗಿದೆ.
ಉಪ ಮುಖ್ಯಮಂತ್ರಿ ಸ್ಥಾನ, ಕೆಪಿಸಿಸಿ ಅಧ್ಯಕ್ಷರ ಸ್ಥಾನ ಹಾಗೂ ಸಿಎಂ ಚರ್ಚೆಗಳ ನಂತರ ಇದೀಗ ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲೂ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗುತ್ತಿದೆ. ಈ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಮೂಲಕ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ನೀಡಬೇಕು ಹಾಗೂ ಕ್ರೆಡಿಟ್ ತೆಗೆದುಕೊಳ್ಳಬೇಕು ಎನ್ನುವ ಡಿ.ಕೆ ಶಿವಕುಮಾರ್ ಅವರ ಆಸೆಗೆ ಹಿನ್ನಡೆಯಾಗುತ್ತಿದೆ.
ಡಿ.ಕೆ ಶಿವಕುಮಾರ್ ಲೆಕ್ಕಾಚಾರ: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಅವರು ರಾಮನಗರ - ಬೆಂಗಳೂರು ದಕ್ಷಿಣ ಭಾಗದ ಲೆಕ್ಕಾಚಾರವನ್ನು ಮಾಡಿಕೊಂಡಿದ್ದಾರೆ. ಆದರೆ, ಈ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಭಾವಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಜಿ. ಪರಮೇಶ್ವರ್ ಅವರು ಟಾಂಗ್ ನೀಡುತ್ತಿದ್ದಾರೆ.
ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು ಸೂಕ್ತ ಎಂದು ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ. ಬಿಡದಿ ಭಾಗದಲ್ಲಿ ಅಷ್ಟೊಂದು ಜಾಗವೇ ಇಲ್ಲ ಅಲ್ಲಿ ವಿಮಾನ ನಿಲ್ದಾಣವನ್ನು ಹೇಗೆ ನಿರ್ಮಾಣ ಮಾಡಲು ಸಾಧ್ಯ, ಹೇಗೆ ಆ ಜಾಗ ಆಯ್ಕೆ ಮಾಡಿಕೊಂಡರೋ ಗೊತ್ತಿಲ್ಲ ಅಂತ ಜಿ ಪರಮೇಶ್ವರ್ ಅವರು ಹೇಳಿದ್ದಾರೆ. ಸತೀಶ್ ಅವರು, ಈಗಾಗಲೇ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಇದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದು ಹೇಳಿದ್ದಾರೆ. 6 ತಿಂಗಳ ಹಿಂದೆಯೇ ಶಿರಾದಲ್ಲಿ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿತ್ತು ಎಂದು ಅವರು ಹೇಳಿದ್ದಾರೆ.
ಪ್ರಭಾವ ತಡೆಯುವ ಕ್ರಮ: ಇನ್ನು ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಅವರ ಪ್ರಭಾವ ತಡೆಯುವ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ. ಕನಕಪುರ ಹಾಗೂ ಬಿಡದಿ ಮಾರ್ಗದಲ್ಲಿ ಏರ್‌ಪೋರ್ಟ್ ನಿರ್ಮಾಣ ಮಾಡುವುದಕ್ಕೆ ಕೆಲವರು ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications