Bengaluru Second Airport: ಕನಕಪುರ ರಸ್ತೆಯಲ್ಲೇ ಬೆಂಗಳೂರು 2ನೇ ವಿಮಾನ ನಿಲ್ದಾಣ ಫಿಕ್ಸ್: ಎರಡೂ ಜಾಗ ವಿಲೀನಗೊಳಿಸಲು ನಿರ್ಧಾರ
ಬೆಂಗಳೂರಿನ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯತ್ತ ಹೆಚ್ಚಿನ ಒಲವು ತೋರುತ್ತಿದೆ. ಈ ಯೋಜನೆಗಾಗಿ ಕನಕಪುರ ರಸ್ತೆಯಲ್ಲಿ ಶಾರ್ಟ್‌ಲಿಸ್ಟ್ ಮಾಡಲಾದ ಚೂಡಹಳ್ಳಿ ಮತ್ತು ಸೋಮನಹಳ್ಳಿ ಎಂಬ ಎರಡು ಪ್ರತ್ಯೇಕ ಭೂಭಾಗಗಳನ್ನು ವಿಲೀನಗೊಳಿಸಿ, ವಿಮಾನ ನಿಲ್ದಾಣದ ಅವಶ್ಯಕತೆಗೆ ತಕ್ಕಂತೆ ಒಂದು ಬೃಹತ್ ಮತ್ತು ಪರಿಪೂರ್ಣ ಜಾಗವನ್ನಾಗಿ ರೂಪಿಸಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ದಕ್ಷಿಣ ಬೆಂಗಳೂರೇ ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳ ಎಂದು ಹಲವು ಬಾರಿ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಅಧಿಕಾರಿಗಳ ಮಟ್ಟದಲ್ಲೂ ಇದೇ ಸ್ಥಳಕ್ಕೆ ಆದ್ಯತೆ ನೀಡಲಾಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಸಾರ್ವಜನಿಕವಾಗಿ ವ್ಯಕ್ತಪಡಿಸಿರುವಂತೆ, ಸರ್ಕಾರದ ಆದ್ಯತೆ ದಕ್ಷಿಣ ಬೆಂಗಳೂರಿನತ್ತಲೇ ಇದೆ. ಕನಕಪುರ ರಸ್ತೆಯಲ್ಲಿ ಶಾರ್ಟ್‌ಲಿಸ್ಟ್ ಮಾಡಲಾದ ಎರಡು ಸ್ಥಳಗಳನ್ನು ಒಗ್ಗೂಡಿಸುವುದರಿಂದ ವಿಮಾನಗಳ ಹಾರಾಟಕ್ಕೆ (Airspace) ಇರುವ ನಿರ್ಬಂಧಗಳು ಕಡಿಮೆಯಾಗಲಿವೆ ಮತ್ತು ಉತ್ತಮ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಿಂಗಪೂರ್ ಕಂಪನಿಗೆ ಜವಾಬ್ದಾರಿ
ಮೂಲಸೌಕರ್ಯ ಅಭಿವೃದ್ಧಿ ಇಲಾಖೆ (IDD), ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಮತ್ತು ಕೆಐಎಡಿಬಿ (KIADB) ಅಧಿಕಾರಿಗಳ ಪ್ರಕಾರ, ಶಾರ್ಟ್‌ಲಿಸ್ಟ್ ಮಾಡಲಾದ ಒಟ್ಟು ಮೂರು ಸ್ಥಳಗಳ ಕಾರ್ಯಸಾಧ್ಯತೆಯ ಅಧ್ಯಯನ ನಡೆಸಲು ಸಿಂಗಪೂರ್ ಮೂಲದ ಕಂಪನಿಯನ್ನು ಸರ್ಕಾರ ಆಯ್ಕೆ ಮಾಡಿದೆ. ಎರಡು ಸೈಟ್‌ಗಳನ್ನು ವಿಲೀನಗೊಳಿಸುವುದರಿಂದ ವಿಮಾನಗಳ ಸುಗಮ ಸಂಚಾರಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ.
ದಕ್ಷಿಣ ಬೆಂಗಳೂರು ಮತ್ತು ತಮಿಳುನಾಡಿನ ಗಡಿ ಭಾಗದ ಜನರಿಗೆ ಇದು ಹೆಚ್ಚಿನ ಅನುಕೂಲ ಒದಗಿಸಲಿದೆ. ವಿಮಾನ ನಿಲ್ದಾಣಕ್ಕೆ ಬೇಕಾದ ಬೃಹತ್ ವಿಸ್ತೀರ್ಣದ ಜಾಗ ಒಂದೇ ಕಡೆ ಲಭ್ಯವಾಗಲಿದೆ. ಪ್ರಸ್ತುತ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಈ ಎರಡನೇ ವಿಮಾನ ನಿಲ್ದಾಣದ ನಿರ್ಮಾಣ ಅತ್ಯಗತ್ಯವಾಗಿದ್ದು, ಕನಕಪುರ ರಸ್ತೆಯ ಈ ಜಾಗವು ತಾಂತ್ರಿಕವಾಗಿ ಹೆಚ್ಚು ಸೂಕ್ತವೆಂದು ಕಂಡುಬರುತ್ತಿದೆ.
ಕನಕಪುರ ರಸ್ತೆಯೇ ಯಾಕೆ ಬೆಸ್ಟ್?
ಪ್ರಸ್ತುತ ಸರ್ಕಾರದ ಮುಂದೆ ಕನಕಪುರ ರಸ್ತೆಯಲ್ಲಿರುವ ಎರಡು ಸೈಟ್‌ಗಳು ಹಾಗೂ ತುಮಕೂರು ರಸ್ತೆಯ ನೆಲಮಂಗಲ ಮತ್ತು ಕುಣಿಗಲ್ ನಡುವೆ ಇರುವ ಮತ್ತೊಂದು ಜಾಗ ಸೇರಿದಂತೆ ಒಟ್ಟು ಮೂರು ಆಯ್ಕೆಗಳಿವೆ. ಕನಕಪುರ ರಸ್ತೆಯ ಎರಡು ಸೈಟ್‌ಗಳು ಕ್ರಮವಾಗಿ 4,800 ಮತ್ತು 5,000 ಎಕರೆ ವಿಸ್ತೀರ್ಣ ಹೊಂದಿದ್ದರೆ, ನೆಲಮಂಗಲದ ಸೈಟ್ 5,200 ಎಕರೆ ವಿಸ್ತೀರ್ಣದಲ್ಲಿದೆ. ಆದರೆ, ಕೆಐಎಡಿಬಿ ಅಧಿಕಾರಿಗಳ ಪ್ರಕಾರ ನೆಲಮಂಗಲಕ್ಕೆ ಹೋಲಿಸಿದರೆ ಕನಕಪುರ ರಸ್ತೆಯ ಭಾಗದಲ್ಲಿ ಸರ್ಕಾರಕ್ಕೆ ಭೂಸ್ವಾಧೀನ ಪ್ರಕ್ರಿಯೆ ಸುಲಭವಾಗಲಿದೆ. ಅಲ್ಲದೆ, ಇಲ್ಲಿನ ಎರಡು ಜಾಗಗಳು ಅಕ್ಕಪಕ್ಕದಲ್ಲೇ ಇರುವುದರಿಂದ ಇವೆರಡನ್ನೂ ಒಗ್ಗೂಡಿಸಿ ಸುಮಾರು 4,500 ರಿಂದ 5,000 ಎಕರೆ ಜಾಗವನ್ನು ವಿಮಾನ ನಿಲ್ದಾಣಕ್ಕೆ ಬೇಕಾದ ವಾಯುಪ್ರದೇಶದ ನಿಯಮಗಳಿಗೆ ತಕ್ಕಂತೆ ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ನೆಲಮಂಗಲ ಭಾಗಕ್ಕಿಂತ ಕನಕಪುರ ರಸ್ತೆಯನ್ನೇ ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಪ್ರಮುಖ ಕಾರಣವೆಂದರೆ ಪರಿಸರ ಮತ್ತು ಬೇಡಿಕೆ. ನೆಲಮಂಗಲದ ಜಾಗದಲ್ಲಿ ಹಸಿರು ಹೊದಿಕೆ ಹಾಗೂ ಮರಗಿಡಗಳು ಹೆಚ್ಚಾಗಿವೆ. ಇದು ಪರಿಸರ ಅನುಮತಿ ಪಡೆಯುವಲ್ಲಿ ಸವಾಲಾಗಬಹುದು. ಮತ್ತೊಂದೆಡೆ ದಕ್ಷಿಣ ಬೆಂಗಳೂರು ಭಾಗದಲ್ಲಿ ವಿಮಾನ ನಿಲ್ದಾಣದ ಅಗತ್ಯ ಮತ್ತು ಬೇಡಿಕೆ ಹೆಚ್ಚಾಗಿದ್ದು, ಇದು ತಮಿಳುನಾಡಿನ ಹೊಸೂರು ಮತ್ತು ಸುತ್ತಮುತ್ತಲ ಕೈಗಾರಿಕಾ ಪ್ರದೇಶಗಳಿಗೂ ಉತ್ತಮ ಸಂಪರ್ಕ ಒದಗಿಸಲಿದೆ. ನೆಲಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗುತ್ತದೆ ಎಂಬ ವಾದವಿದ್ದರೂ, ತಾಂತ್ರಿಕವಾಗಿ ದಕ್ಷಿಣ ಭಾಗವೇ ಹೆಚ್ಚು ಲಾಭದಾಯಕ ಎಂದು ವಿಶ್ಲೇಷಿಸಲಾಗಿದೆ.
ಈ ಯೋಜನೆಯ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಸರ್ಕಾರವು ಸಿಂಗಾಪುರ ಮೂಲದ ಮೈನ್ಹಾರ್ಡ್ ಇಪಿಸಿಎಂ ಎಂಬ ಸಲಹಾ ಸಂಸ್ಥೆಗೆ 4.96 ಕೋಟಿ ರೂಪಾಯಿಗಳ ಗುತ್ತಿಗೆ ನೀಡಿದೆ. ಈ ಸಂಸ್ಥೆಯು ಮುಂದಿನ ಐದು ತಿಂಗಳಲ್ಲಿ ಮೂರೂ ಸ್ಥಳಗಳ ತಾಂತ್ರಿಕ ಸವಾಲುಗಳು, ವಾಯುಪ್ರದೇಶದ ನಿರ್ಬಂಧಗಳು ಮತ್ತು ಭವಿಷ್ಯದ ಪ್ರಯಾಣಿಕರ ದಟ್ಟಣೆಯ ಬಗ್ಗೆ ಸಮಗ್ರ ವರದಿ ನೀಡಲಿದೆ. ತಾಂತ್ರಿಕ ವರದಿ ಬಂದ ನಂತರವೇ ಅಂತಿಮ ನಿರ್ಧಾರ ಪ್ರಕಟವಾಗಲಿದ್ದರೂ, ಸರ್ಕಾರದ ಪ್ರಸ್ತುತ ತಯಾರಿಗಳನ್ನು ಗಮನಿಸಿದರೆ ಕನಕಪುರ ರಸ್ತೆಯಲ್ಲೇ ಎರಡನೇ ವಿಮಾನ ನಿಲ್ದಾಣ ತಲೆಯೆತ್ತುವ ಸಾಧ್ಯತೆಗಳು ದಟ್ಟವಾಗಿವೆ.













Click it and Unblock the Notifications