Bengaluru Second airport: ವಿಮಾನ ನಿಲ್ದಾಣ ಚರ್ಚೆ ನಡುವೆ: ಬೆಂಗಳೂರಿನ ಮಹತ್ವ ಯೋಜನೆ ರದ್ದು!
Bengaluru Second Airport: ಬೆಂಗಳೂರಿನಲ್ಲಿ ಹೊಸ ಹೊಸ ಯೋಜನೆಗಳು ಜಾರಿಯಾಗುತ್ತಿವೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಕೆಲವೊಂದು ಪ್ರಮುಖ ಯೋಜನೆಗಳನ್ನು ಕೈ ಬಿಟ್ಟರುವುದು ಸಹ ಇದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚರ್ಚೆಯ ನಡುವೆಯೇ ಪ್ರಮುಖ ಯೋಜನೆಯೊಂದನ್ನು ಕೈಬಿಡಲಾಗಿದೆ. ಇದರಿಂದ ಬೆಂಗಳೂರಿನ ಹೊರ ವಲಯದಲ್ಲಿ ಭೂಮಿ ಬೆಲೆ ಇಳಿಕೆಯಾಗುವ ಸಾಧ್ಯತೆಯೂ ಇದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಇದೀಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಯೋಜನೆಯನ್ನು ಕೈಬಿಡಲಾಗಿದೆ. ಇದರಿಂದ ಈ ಭಾಗದ ಆಸ್ತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇಷ್ಟಕ್ಕೂ ಬೆಂಗಳೂರಿನ ಯಾವ ಪ್ರಮುಖ ಯೋಜನೆಯನ್ನು ಕೈಬಿಡಲಾಗಿದೆ ಹಾಗೂ ಇದಕ್ಕೆ ಕಾರಣವೇನು ಎನ್ನುವ ಸಂಪೂರ್ಣ ನೋಡೋಣ.

ದೇವನಹಳ್ಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಗೆ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಆದರೆ ಇದೀಗ ಮಹತ್ವದ ಯೋಜನೆಯೊಂದನ್ನು ಕೈಬಿಡಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಮತ್ತು ಬೆಂಗಳೂರು ನಗರ ನಡುವೆ ಸಂಪರ್ಕ ಕಲ್ಪಿಸುವ ಕಿರು ರೈಲು ಯೋಜನೆಯ ಪ್ರಸ್ತಾವನೆಯನ್ನು ಕೈಬಿಡಲಾಗಿದೆ. ಈ ಬಗ್ಗೆ ದಿ ಹಿಂದೂ ವರದಿ ಮಾಡಿದೆ.
ಈಚೆಗೆ ನಡೆದ ಮಹತ್ವದ ಸಭೆಯಲ್ಲಿ ವಿಮಾನ ನಿಲ್ದಾಣವು ಮೆಟ್ರೋ ಮತ್ತು ಉಪನಗರ ರೈಲು ಜಾಲಗಳಿಂದ ಸಮರ್ಪಕವಾಗಿ ಸೇವೆ ಸಲ್ಲಿಸುತ್ತದೆ. ಅಂದರೆ ಈಗಾಗಲೇ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಇದೆ. ಅಲ್ಲದೇ ಈ ಭಾಗದಲ್ಲಿ ಮೆಟ್ರೋ ಮಾರ್ಗವನ್ನೂ ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ಹೀಗಾಗಿ, ಕಿರು ರೈಲು ಮಾರ್ಗ ಯೋಜನೆಯನ್ನು ಕೈಬಿಡಲು ನಿರ್ಧರಿಸಲಾಗಿದೆ. ಅಲ್ಲದೇ ಈಗಾಗಲೇ ರೈಲು ಹಾಗೂ ಮೆಟ್ರೋ ಮಾರ್ಗ ಇರುವುದರಿಂದ ಹೊಸ ಅಥವಾ ಹೆಚ್ಚುವರಿ ಕಿರು ರೈಲು ಮಾರ್ಗದ ಅವಶ್ಯಕತೆ ಇಲ್ಲ ಎಂದು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಈ ವರ್ಷದ ಆರಂಭದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ದೊಡ್ಡಜಾಲದಿಂದ ವಿಮಾನ ನಿಲ್ದಾಣಕ್ಕೆ 7.9 ಕಿ.ಮೀ. ಸಂಪರ್ಕ ಕಲ್ಪಿಸುವ ಯೋಜನೆಯನ್ನು ಘೋಷಣೆ ಮಾಡಿದ್ದರು. ವಿಮಾನ ನಿಲ್ದಾಣ ರೈಲು ಕಾರಿಡಾರ್ ಯೋಜನೆಯು ಜನಪ್ರಿಯತೆ ಗಳಿಸಿತ್ತು. ಫ್ಲೈಓವರ್ ಮತ್ತು ಬಹು ನಿಲ್ದಾಣಗಳನ್ನು ಒಳಗೊಂಡ ಈ ಯೋಜನೆಯಿಂದಾಗಿ ಬೆಂಗಳೂರಿನ ನಿರ್ದಿಷ್ಟ ಭಾಗದಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಮತ್ತು ಬೆಂಗಳೂರು ನಗರದ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಯೋಜನೆ ಹಾಗೂ ಪ್ರಸ್ತಾವಿತ ರೈಲ್ವೆ ಸಂಪರ್ಕ ಯೋಜನೆಯನ್ನು ರದ್ದು ಮಾಡಲಾಗಿದೆ. ಮೆಟ್ರೋ ಮತ್ತು ಉಪನಗರ ರೈಲು ಸಂಪರ್ಕವನ್ನೇ ಅಭಿವೃದ್ಧಿಪಡಿಸಿಕೊಳ್ಳು ಹಾಗೂ ಬಳಸಿಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ಅಭಿವೃದ್ಧಿ ಯೋಜನೆಗಳು ಜಾರಿಯಲ್ಲಿರುವುದು ಹಾಗೂ ಮೆಟ್ರೋ ಅಭಿವೃದ್ಧಿ ಯೋಜನೆಯಿಂದ ಟ್ರಾಫಿಕ್ ಜಾಮ್ ಸಹ ಕಂಟ್ರೋಲ್ ಆಗುತ್ತಿರುವ ಕಾರಣಕ್ಕೆ ಇದನ್ನೇ ಮುಂದುವರಿಸುವುಕ್ಕೆ ನಿರ್ಧರಿಸಲಾಗಿದೆ.
ಇನ್ನು ಇದೇ ಸಂದರ್ಭದಲ್ಲಿ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ಕೇಂದ್ರ ಸರ್ಕಾರವು ಸಕಾರಾತ್ಮಕ ಸ್ಪಂದನೆ ನೀಡುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಸ್ತಾವನೆ ಮಾಡಲಾಗಿರುವ ಮೂರು ಪ್ರದೇಶಗಳಲ್ಲೂ ಕೇಂದ್ರ ತಂಡವು ಬಂದು ಪರಿಶೀಲನೆ ಮಾಡಿದೆ. ಆದರೆ ಪರಿಶೀಲನೆ ಮಾಡಿದ ನಂತರವೂ ಯಾವುದೇ ವರದಿಯನ್ನು ನೀಡಿಲ್ಲ. ಅಲ್ಲದೇ ತಮಿಳುನಾಡು ಈ ವಿಚಾರದಲ್ಲಿ ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಈ ಮೂಲಕ ಬೆಂಗಳೂರಿನಲ್ಲಿ ಈಗಾಗಲೇ ಇರುವ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆಗೆ ಹಿನ್ನಡೆ ಆಗುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications