5 ವರ್ಷಗಳಲ್ಲಿ 89% ಹೆಚ್ಚಾದ ಬೆಂಗಳೂರಿನ ವಾರ್ಷಿಕ ಮಳೆಯ ಪ್ರಮಾಣ
ಬೆಂಗಳೂರು, ಮೇ 29: ಭಾರತೀಯ ಹವಾಮಾನ ಇಲಾಖೆ (IMD) ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳ ಹಿಂದೆ ಸುರಿದ ಮಳೆಗೆ ಹೋಲಿಸಿದರೆ 2022 ರಲ್ಲಿ ಬೆಂಗಳೂರು ತನ್ನ ವಾರ್ಷಿಕ ಮಳೆಯಲ್ಲಿ 89 ಪ್ರತಿಶತದಷ್ಟು ಏರಿಕೆ ಕಂಡಿದೆ ಎಂದು ತಿಳಿದು ಬಂದಿದೆ.
ಈ ಪ್ರಮಾಣದ ಏರಿಕೆಯು ವಾರ್ಷಿಕ ಮಳೆಯಲ್ಲಿ ಮಾತ್ರವಲ್ಲದೆ ಬೇಸಿಗೆಯ ತಾಪಮಾನದಲ್ಲಿಯೂ ಸಹ ಹವಾಮಾನ ಬದಲಾವಣೆಯ ಪ್ರಭಾವದ ಕಾರಣದಿಂದಾಗಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಗಳೂರು 2018 ರಲ್ಲಿ 1,033.2 mm ಮಳೆಯನ್ನು ಪಡೆದರೆ, ಅದೇ 2022 ರ ವೇಳೆಗೆ 1,956.7 mm ಗೆ ಹೆಚ್ಚಳವಾಗಿರುವುದು ಡಿಎಚ್ ವರದಿಯಿಂದ ತಿಳಿದು ಬಂದಿದೆ.

ಇದೇ ಜೂನ್‌ನಲ್ಲಿ 126.9 ಶೇಕಡಾ, ಜುಲೈನಲ್ಲಿ 128.18 ಶೇಕಡಾ ಮತ್ತು ಆಗಸ್ಟ್‌ನಲ್ಲಿ ಶೇಕಡಾ 169.23 ರಷ್ಟು ಮಾನ್ಸೂನ್ ಸಮಯದಲ್ಲಿ ಮಳೆಯು ಏರಿಕೆಯಾಗಿದೆ. ಮುಂಗಾರು ಪೂರ್ವ ಮತ್ತು ಮುಂಗಾರು ನಂತರದ ಮಳೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ ಎಂದು ಐಎಂಡಿ ಅಂಕಿಅಂಶಗಳಿಂದ ತಿಳಿದು ಬಂದಿದೆ.
ಬದಲಾಗುತ್ತಿರುವ ಮಳೆಯ ಮಾದರಿಯು ಹವಾಮಾನ ಬದಲಾವಣೆಗೆ ಸಂಪೂರ್ಣವಾಗಿ ಕಾರಣವಾಗದಿದ್ದರೂ, ಇದು ನೀಡುವ ಎಚ್ಚರಿಕೆಯ ಚಿಹ್ನೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎನ್ನುತ್ತಾರೆ ಹವಾಮಾನ ತಜ್ಞರು.
ಹೆಚ್ಚುತ್ತಿರುವ ಮಳೆಯ ಪ್ರಮಾಣವು ಹವಾಮಾನ ವೈಪರೀತ್ಯಕ್ಕೆ ಸಹ ಕಾರಣವೆಂದು ಹೇಳಬಹುದು. ಆದಾಗ್ಯೂ, ಬೆಂಗಳೂರು ಜಾಗತಿಕ ತಾಪಮಾನದ ಅಪಾಯವನ್ನು ಎದುರಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಹೆಚ್ಚುತ್ತಿರುವ ಮಳೆಯು ಹವಾಮಾನ ಬದಲಾವಣೆಗೆ ಸಂಪೂರ್ಣವಾಗಿ ಕಾರಣವೆಂದು ಹೇಳಲಾಗದಿದ್ದರೂ, ಅಲ್ಪಾವಧಿಯಲ್ಲಿ ಭಾರೀ ಮಳೆಯು ಖಂಡಿತವಾಗಿಯೂ ಹವಾಮಾನ ಬದಲಾವಣೆಯ ಸಂಕೇತವಾಗಿದೆ ಎಂದು ಬೆಂಗಳೂರಿನ IMD ಯ ಹಿರಿಯ ವಿಜ್ಞಾನಿ ಎ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಹವಾಮಾನ ಬದಲಾವಣೆಗಾಗಿ ದಿವೇಚಾ ಕೇಂದ್ರದ ವಿಶಿಷ್ಟ ವಿಜ್ಞಾನಿ ಪ್ರೊಫೆಸರ್ ಜೆ ಶ್ರೀನಿವಾಸನ್ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯು ಪೆಸಿಫಿಕ್ ಸಾಗರದ ಲಾ ನಿನಾಗೆ ಸಂಬಂಧಿಸಿರಬಹುದು. ಲಾ ನಿನಾದಿಂದಾಗಿ ಜಾಗತಿಕವಾಗಿ ಮಳೆಯ ಮಾದರಿಗಳು ಬದಲಾಗಿವೆ. ಕಾಂಕ್ರೀಟೀಕರಣ ಮತ್ತು ಹಸಿರು ಹೊದಿಕೆಯ ನಷ್ಟವನ್ನು ಉಲ್ಲೇಖೀಸಿ ಬೆಂಗಳೂರಿನ ಸ್ಥಿತಿಯನ್ನು ವಿವರಿಸಿದರು.
ಕಳೆದ 40 ವರ್ಷಗಳಲ್ಲಿ ಬೆಂಗಳೂರು ಬೃಹದ್ಧಾಕಾರವಾಗಿ ಬೆಳೆದಿದೆ. ಕಾಂಕ್ರಿಟೀಕರಣ ಮತ್ತು ಹಸಿರು ಪ್ರದೇಶದ ಕುಸಿತವು ಹಾನಿ ಮಾಡಿದೆ. ವಾತಾವರಣ ಮತ್ತಷ್ಟು ಬಿಸಿಯಾಗುವುದನ್ನು ತಡೆಯಲು ಮತ್ತು ಇತರ ನಗರಗಳನ್ನು ಅಭಿವೃದ್ಧಿಪಡಿಸಲು ನಾವು ಬೆಂಗಳೂರಿನ ಬೆಳವಣಿಗೆಯನ್ನು ಮಿತಿಗೊಳಿಸಬೇಕು. ಬೆಂಗಳೂರಿನಲ್ಲಿ ಹೆಚ್ಚಿನ ಉದ್ಯಾನವನಗಳು ಮತ್ತು ಕೆರೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಅಂತಹ ಕ್ರಮಗಳು ಮಾತ್ರ ಮತ್ತಷ್ಟು ತಾಪಮಾನವನ್ನು ಮಿತಿಗೊಳಿಸಬಹುದು ಎಂದು ಪ್ರೊಫೆಸರ್ ಶ್ರೀನಿವಾಸನ್ ಹೇಳಿದರು.
ನೀತಿ ಮಟ್ಟದ ಬದಲಾವಣೆಗಳಿಂದ ತ್ಯಾಜ್ಯ ವಿಂಗಡಣೆಯಂತಹ ಸರಳ ಕಾರ್ಯಗಳವರೆಗೆ ನಾವು ಪ್ರತಿಯೊಬ್ಬರೂ ನಮ್ಮ ಪ್ರಯತ್ನವನ್ನು ಮಾಡಬೇಕು. ಹಸಿರು ಶಕ್ತಿಯ ಬಳಕೆ, ಸಸಿಗಳನ್ನು ನೆಡುವುದು, ನೀರನ್ನು ಸಂರಕ್ಷಿಸುವುದು ಮತ್ತು ಮಳೆನೀರು ಕೊಯ್ಲು ಅಳವಡಿಸುವುದು ಮುಂದಿನ ಸಮಸ್ಯೆಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಆದಾಗ್ಯೂ, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಿರ್ಧರಿಸಲು ಕಳೆದ ಎರಡು ದಶಕಗಳಲ್ಲಿನ ಬದಲಾವಣೆಗಳನ್ನು ವಿವರವಾಗಿ ಅಧ್ಯಯನ ಮಾಡಬೇಕಾಗಿದೆ ಎಂದು ತಜ್ಞರು ವಿವರಿಸಿದರು.












Click it and Unblock the Notifications