ಜ್ಯೋತಿರ್ಲಿಂಗ ಮತ್ತು ಶಿವಲಿಂಗದ ನಡುವಿನ ವ್ಯತ್ಯಾಸವೇನು? ಎರಡರ ಅಸ್ತಿತ್ವ, ಪೂಜಾ ವಿಧಿ ವಿಧಾನ ಒಂದೇ ರೀತಿಯಾ?
ಅನೇಕ ಭಾರತೀಯ ಮನೆಗಳು ಮತ್ತು ದೇವಾಲಯಗಳಲ್ಲಿ, ಶಿವಲಿಂಗ ಇದ್ದೇ ಇರುತ್ತದೆ. ದೇವರ ಮನೆಯಲ್ಲಿ, ಸಣ್ಣ ಸಣ್ಣ ದೇವರಗುಡಿಗಳಲ್ಲಿ ಮತ್ತು ಭವ್ಯವಾದ ದೇಗುಲಗಳಲ್ಲಿ ಕೂಡಾ ಶಿವಲಿಂಗ ಇರುತ್ತದೆ. ಇದಕ್ಕೆ ನಿತ್ಯ ನೀರು, ಹಾಲು, ಹೂವುಗಳು ಮತ್ತು ಬಿಲ್ವಪತ್ರೆಗಳನ್ನು ಅರ್ಪಿಸಿ ಪೂಜಿಸಲಾಗುತ್ತದೆ. ಆದರೆ ಶಿವಲಿಂಗದ ಜೊತೆಗೆ, ಇನ್ನೊಂದು ಪದವು ಹೆಚ್ಚು ಆಧ್ಯಾತ್ಮಿಕ ಮಹತ್ವದೊಂದಿಗೆ ಕಾಣಿಸಿಕೊಳ್ಳುತ್ತದೆ. ಅದುವೇ ಜ್ಯೋತಿರ್ಲಿಂಗ. ರೂಪದಲ್ಲಿ ಇವು ಎರಡೂ ಒಂದೇ ರೀತಿಯಾಗಿ ಕಾಣಬಹುದು. ಆದರೆ ಅವುಗಳ ಅರ್ಥ ಮತ್ತು ಉದ್ದೇಶಗಳು ಬಹಳ ಭಿನ್ನವಾಗಿವೆ.
ಜ್ಯೋತಿರ್ಲಿಂಗ ಎಂದರೇನು ?:
ಜ್ಯೋತಿರ್ಲಿಂಗ ಎಂದರೆ ಶಿವನ ದೈವಿಕ ಬೆಳಕಿನ ಸಾಕ್ಷಾತ್ ಸ್ವರೂಪ. ಇವು ಮಾನವ ನಿರ್ಮಿತವಲ್ಲ, ಬದಲಿಗೆ ಪ್ರಕೃತಿಯಲ್ಲಿ ತಾವಾಗಿಯೇ ಉದ್ಭವವಾಗಿರುವಂಥದ್ದು. ಆದರೆ ಶಿವಲಿಂಗವು ಭಗವಂತನ ಅನಂತ ಸ್ವರೂಪದ ಸಂಕೇತವಾಗಿದೆ. ಎಲ್ಲಾ ಜ್ಯೋತಿರ್ಲಿಂಗಗಳು ಶಿವಲಿಂಗಗಳೇ, ಆದರೆ ಎಲ್ಲಾ ಶಿವಲಿಂಗಗಳು ಜ್ಯೋತಿರ್ಲಿಂಗಗಳಲ್ಲ. ಈ ಜಗತ್ತಿನಲ್ಲಿ ಒಟ್ಟು 12 ಪವಿತ್ರ ಜ್ಯೋತಿರ್ಲಿಂಗಗಳಿವೆ.

ಶಿವಲಿಂಗ ಹೇಗೆ ಭಿನ್ನ ?:
ಶಿವಲಿಂಗವು ಭಗವಾನ್ ಶಿವನ ಸಂಕೇತಾತ್ಮಕ ರೂಪವಾಗಿದೆ. ಇಲ್ಲಿ ಶಿವನನ್ನು ಮಾನವ ರೂಪದಲ್ಲಿ ಚಿತ್ರಿಸುವುದಿಲ್ಲ. ಬದಲಾಗಿ ಶಿವನನ್ನು ಶುದ್ಧ ಬ್ರಹ್ಮಾಂಡೀಯ ಶಕ್ತಿಯಾಗಿ, ನಿರಾಕಾರವಾಗಿ, ಶಾಶ್ವತವಾಗಿ ಮತ್ತು ಭೌತಿಕ ಆಕಾರವನ್ನು ಮೀರಿದವರಾಗಿ ಪ್ರತಿನಿಧಿಸುತ್ತದೆ. ನಯವಾದ, ಸ್ತಂಭದಂತಿರುವ ರಚನೆಯು ಸೃಷ್ಟಿಯ ಹಿಂದೆ ಇರುವ ಅಚಲ ಸತ್ಯವನ್ನು ಸೂಚಿಸುತ್ತದೆ. ಶಿವಲಿಂಗಕ್ಕೆ ಆಧಾರವಾಗಿರುವ ವ್ರತ್ತಾಕಾರದ ಯೋನಿಯು ಶಕ್ತಿ ಎಂಬ ಸೃಜನಾತ್ಮಕ ಸ್ತ್ರೀ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇವೆರಡೂ ಸೇರಿ, ಸ್ಥಿರತೆ ಮತ್ತು ಚಲನೆ, ಚೈತನ್ಯ ಮತ್ತು ಸೃಷ್ಟಿ ನಡುವಿನ ಸಮತೋಲನವನ್ನು ತೋರಿಸುತ್ತವೆ.
ದೇವಾಲಯ, ಮನೆ, ಹಳ್ಳಿಯ ದೇವರಗುಡಿ, ಮರದ ಕೆಳಗೆ ಹೀಗೆ ಶಿವಲಿಂಗವನ್ನು ಎಲ್ಲಿ ಬೇಕಾದರೂ ಪ್ರತಿಷ್ಠಾಪಿಸಬಹುದು. ಅದರ ಶಕ್ತಿ ಭೌಗೋಳಿಕ ಸ್ಥಾನ ಅಥವಾ ಪೌರಾಣಿಕ ಮೂಲದಿಂದ ಬರುವುದಿಲ್ಲ.ಬದಲಾಗಿ ಭಕ್ತರ ಭಕ್ತಿಯಿಂದ ಬರುತ್ತದೆ. ಯಾರೇ ಆಗಲಿ ಶಿವಲಿಂಗಕ್ಕೆ ಪ್ರಾರ್ಥಿಸಿ, ಪೂಜೆ ಸಲ್ಲಿಸುವಾಗ ಯಾವುದೇ ಒಂದು ಕಥೆ, ಸ್ಥಳ ಅಥವಾ ರೂಪಕ್ಕೆ ಸೀಮಿತವಾಗಿರದ ಶಿವನ ಸರ್ವವ್ಯಾಪಕ ಸಾನ್ನಿಧ್ಯದೊಂದಿಗೆ ಸಂಪರ್ಕ ಹೊಂದುತ್ತಾರೆ. ಈ ಕಾರಣದಿಂದಲೇ ಭಾರತದೆಲ್ಲೆಡೆಯ ಲಕ್ಷಾಂತರ ಜನರು ಪ್ರತಿದಿನ ಶಿವಲಿಂಗಗಳಿಗೆ ಅಭಿಷೇಕ ಮಾಡುತ್ತಾರೆ. ನೀರು, ಹಾಲು, ಜೇನುತುಪ್ಪ ಮತ್ತು ಬಿಲ್ವ ಪತ್ರೆ, ಎಕ್ಕದ ಹೂವುಗಳನ್ನು ಅರ್ಪಿಸುತ್ತಾರೆ.
ಜ್ಯೋತಿರ್ಲಿಂಗವನ್ನು ವಿಭಿನ್ನವಾಗಿಸುವ ಅಂಶ:
ಜ್ಯೋತಿರ್ಲಿಂಗವು ಕೇವಲ ಒಂದು ಸಂಕೇತಾತ್ಮಕ ಶಿವಲಿಂಗವಲ್ಲ. ಶಿವನು ದಿವ್ಯ ಪ್ರಕಾಶದ ಸ್ತಂಭವಾಗಿ, ಅಂದರೆ ಜ್ಯೋತಿಯಾಗಿ, ಪ್ರಕಟವಾದ ಸ್ಥಳ ಇದಾಗಿದೆ. ಪ್ರಾಚೀನ ಶೈವ ಗ್ರಂಥಗಳ ಪ್ರಕಾರ, ಒಮ್ಮೆ ಶಿವನು ಸ್ವರ್ಗ ಮತ್ತು ಭೂಮಿಯನ್ನು ಮೀರಿದ ಅನಂತ ಪ್ರಕಾಶಮಯ ಸ್ತಂಭವಾಗಿ ತನ್ನನ್ನು ತಾನೇ ಅನಾವರಣಗೊಳಿಸಿದನು. ಆ ದಿವ್ಯ ಜ್ಯೋತಿ ಭೂಮಿಯನ್ನು ಸ್ಪರ್ಶಿಸಿದ ಸ್ಥಳಗಳಲ್ಲಿಯೇ ಜ್ಯೋತಿರ್ಲಿಂಗ ಉದ್ಬವವಾಯಿತು ಎನ್ನಲಾಗಿದೆ. ಪರಂಪರೆಯ ಪ್ರಕಾರ, ಭಾರತದೆಲ್ಲೆಡೆ ಹನ್ನೆರಡು ಜ್ಯೋತಿರ್ಲಿಂಗಗಳಿವೆ. ಕಾಶಿ ವಿಶ್ವನಾಥ, ಸೋಮನಾಥ, ಕೇದಾರನಾಥ, ಮಹಾಕಾಳೇಶ್ವರ ಮತ್ತು ರಾಮೇಶ್ವರಂ, ಶ್ರೀಶೈಲಂ ಮೊದಲಾದ ಪ್ರಸಿದ್ಧ ದೇವಾಲಯಗಳು ಅವುಗಳಲ್ಲಿ ಸೇರಿವೆ.
ಇಲ್ಲಿ ಪ್ರತಿ ಜ್ಯೋತಿರ್ಲಿಂಗವೂ ಶಿವನು ತನ್ನ ಪ್ರಕಾಶಮಯ ರೂಪದಲ್ಲಿ ಪ್ರಕಟಗೊಂಡು ಸಂಘರ್ಷವನ್ನು ಪರಿಹರಿಸಿದ, ಅಹಂಕಾರವನ್ನು ಸೋಲಿಸಿದ ಅಥವಾ ಸಮತೋಲನವನ್ನು ಪುನಃ ಸ್ಥಾಪಿಸಿದ ನಿರ್ದಿಷ್ಟ ಕಥೆಯೊಂದಿಗೆ ಸಂಬಂಧ ಹೊಂದಿದೆ. ಮೊದಲೇ ಹೇಳಿದ ಹಾಗೆ ಈ ಜ್ಯೋತಿರ್ಲಿಂಗವು ಸ್ವಯಂಪ್ರಕಟವಾಗಿರುವಂಥದ್ದು, ಅಂದರೆ ಸ್ವಯಂಭೂ ಎನ್ನುವುದು ನಂಬಿಕೆ. ಶಿವನು ತನ್ನ ಸ್ವಂತ ಇಚ್ಛೆಯಿಂದ ಪ್ರತ್ಯಕ್ಷವಾಗಿ ರೂಪುಗೊಂಡಿರುವ ಲಿಂಗಗಳು ಇವು. ಶಿವಲಿಂಗವು ಶಿವನ ಸಾನ್ನಿಧ್ಯದ ಸಂಕೇತ. ಜ್ಯೋತಿರ್ಲಿಂಗವು ಆ ಸಾನ್ನಿಧ್ಯದ ಮೂಲಬಿಂದು ಎಂದು ನಂಬಲಾಗಿದೆ.
ಭಕ್ತಿ ಇರುವ ಎಲ್ಲೆಡೆ ಶಿವಲಿಂಗ ಅಸ್ತಿತ್ವದಲ್ಲಿರಬಹುದು. ಜ್ಯೋತಿರ್ಲಿಂಗವು ಮಾತ್ರ ಅತ್ಯಂತ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದೆ. ಜ್ಯೋತಿರ್ಲಿಂಗ ದೇವಾಲಯಗಳನ್ನು ವಿಶೇಷವಾಗಿ ಶಕ್ತಿಶಾಲಿ ಯಾತ್ರಾಸ್ಥಳಗಳೆಂದು ಪರಿಗಣಿಸಲಾಗುತ್ತದೆ.
ಆರಾಧನೆಯಲ್ಲಿನ ವ್ಯತ್ಯಾಸ:
ಹಾಗೆ ನೋಡಿದರೆ, ಶಿವಲಿಂಗದಲ್ಲಿ ನಡೆಯುವ ವಿಧಿವಿಧಾನಗಳು ಮತ್ತು ಜ್ಯೋತಿರ್ಲಿಂಗದಲ್ಲಿ ಆಚರಿಸಲ್ಪಡುವ ಪೂಜಾ ವಿಧಾನಗಳು ಬಹಳ ಹೋಲಿಕೆಯನ್ನು ಹೊಂದಿವೆ. ಇವೆರಡರಲ್ಲೂ ಸಾಮಾನ್ಯವಾಗಿ ನೀರಿನ ಬಳಕೆ, ಹೂವಿನ ಅಲಂಕಾರ ಮತ್ತು ಪ್ರಾರ್ಥನೆಗಳು ಹಾಗೂ ಮಂತ್ರಗಳ ಪಠಣ ಒಳಗೊಂಡಿರುತ್ತವೆ. ಆದರೆ, ಈ ಸಾಮ್ಯತೆಗಳ ಹೊರತಾಗಿಯೂ, ಅವುಗಳ ಹಿಂದಿರುವ ಉದ್ದೇಶಗಳು ಗಮನಾರ್ಹವಾಗಿ ಭಿನ್ನವಾಗಿವೆ. ಜನರು ಶಿವಲಿಂಗವನ್ನು ಆರಾಧಿಸುವಾಗ, ಅವರು ಸರ್ವವ್ಯಾಪಕವಾದ ಶಿವತತ್ವವನ್ನು ಗೌರವಿಸುತ್ತಾರೆ. ಮತ್ತೊಂದೆಡೆ, ಭಕ್ತರು ಜ್ಯೋತಿರ್ಲಿಂಗಕ್ಕೆ ಯಾತ್ರೆ ಮಾಡುವಾಗ, ಅವರು ವಿಶೇಷವಾದ ಆಧ್ಯಾತ್ಮಿಕ ಕೇಂದ್ರದೊಂದಿಗೆ ಆಳವಾದ ಸಂಪರ್ಕವನ್ನು ಹೊಂದುತ್ತಾರೆ. ಜ್ಯೋತಿರ್ಲಿಂಗ ದರ್ಶನವಾದರೆ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆಯೂ ಇದೆ. ಇದೇ ಕಾರಣಕ್ಕಾಗಿ ಅನೇಕ ಭಕ್ತರು ತಮ್ಮ ಜೀವನದಲ್ಲಿ ಎಲ್ಲಾ ಹನ್ನೆರಡು ಜ್ಯೋತಿರ್ಲಿಂಗಗಳಿಗೂ ಭೇಟಿ ನೀಡಲು ಪ್ರಯತ್ನಿಸುತ್ತಾರೆ.
ಎರಡು ರೂಪಗಳು, ಒಂದು ಸತ್ಯ:
ಶಿವಲಿಂಗ ಮತ್ತು ಜ್ಯೋತಿರ್ಲಿಂಗ ಪರಸ್ಪರ ಸ್ಪರ್ಧಿಗಳಲ್ಲ. ಒಂದು ಶಿವನನ್ನು ಎಲ್ಲೆಡೆ ಪ್ರತಿನಿಧಿಸುತ್ತದೆ. ಮತ್ತೊಂದು ಶಿವನನ್ನು ನಿರ್ದಿಷ್ಟ ಪವಿತ್ರ ಸ್ಥಳಗಳು ಮತ್ತು ಕಾಲಬಿಂದುಗಳಲ್ಲಿ ಪ್ರತಿನಿಧಿಸುತ್ತದೆ. ಇವೆರಡೂ ಸೇರಿ, ಭಾರತೀಯ ಆಧ್ಯಾತ್ಮಿಕತೆಯು ಒಂದೇ ಸಮಯದಲ್ಲಿ ಎರಡು ಕಲ್ಪನೆಗಳನ್ನು ಹೇಗೆ ಅಳವಡಿಸಿಕೊಳ್ಳುತ್ತದೆ ಎಂಬುದನ್ನು ತೋರಿಸುತ್ತವೆ .ದೈವತ್ವವು ಸರ್ವವ್ಯಾಪಿಯಾಗಿದ್ದು, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಅತ್ಯಂತ ಶಕ್ತಿಯುತ ರೀತಿಯಲ್ಲಿ ತನ್ನನ್ನು ತಾನೇ ಪ್ರಕಟಿಸಿಕೊಳ್ಳಬಹುದು. ಒಂದು ಭಕ್ತಿಯ ದೃಶ್ಯರೂಪ. ಮತ್ತೊಂದು ದೈವತ್ವದ ಪ್ರತ್ಯಕ್ಷ ಅಭಿವ್ಯಕ್ತಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications