ಮಹಿಳಾ ಸುರಕ್ಷತೆಯಲ್ಲಿ ಬೆಂಗಳೂರು ನಂಬರ್-1: ದಲಿತ ನಾಯಕ ಸಿಎಂ ಕೂಗಿನ ಬಗ್ಗೆ ಪರಮೇಶ್ವರ್ ಹೇಳಿದ್ದೇನು
ಬೆಂಗಳೂರು, ಜನವರಿ 10: ಭಾರತದಲ್ಲಿ ಮಹಿಳೆಯರಿಗಾಗಿ ಅತ್ಯುತ್ತಮ ನಗರಗಳ' ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಮಹಿಳೆಯರ ವಾಸಕ್ಕೆ ದೇಶದ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಮೊದಲನೇ ಸ್ಥಾನದಲ್ಲಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ ಮಾಹಿತಿ ನೀಡಿದರು. ಇದರೊಂದಿಗೆ ಬೂದಿ ಮುಚ್ಚಿದ ಕೆಂಡದಂತಿರುವ ಸಿಎಂ ಬದಲಾವಣೆ ಹಾಗೂ ದಲಿತ ನಾಯಕ ಸಿಎಂ ಆಗಬೇಕೆಂದು ನಡೆದ ಪೂಜೆ ಕುರಿತು ಅವರು ಮಾತನಾಡಿದರು.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರ ಜೊತೆಗೆ ಮಾತನಾಡಿದ ಅವರು, ಸುರಕ್ಷತೆ, ತಂತಜ್ಞಾನ, ಮೂಲಸೌಕರ್ಯ ಸೇರಿದಂತೆ ಕೆಲವು ಮಾನದಂಡಗಳನ್ನು ಇಟ್ಟುಕೊಂಡು ಚೆನ್ನೈ ಮೂಲದ ಅವತಾರ್ ಸಂಸ್ಥೆಯು 'ಭಾರತದಲ್ಲಿ ಮಹಿಳೆಯರಿಗಾಗಿ ಅತ್ಯುತ್ತಮ ನಗರಗಳ' ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಬೆಂಗಳೂರು ನಗರ 53.29 ಅಂಕಗಳನ್ನು ಪಡೆದು, ಮೊದಲನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣಿಭೂತರಾದ ಎಲ್ಲರಿಗೂ ಅಭಿನಂದನೆಗಳನ್ನು ಅವರು ತಿಳಿಸಿದರು.

ಈ ಹಿಂದೆಯೂ ಸಹ ನ್ಯಾಯ ಒದಗಿಸುವುದರಲ್ಲಿ ಕರ್ನಾಟಕ ಪೊಲೀಸ್ ಸಮರ್ಥವಾಗಿ ಕೆಲಸ ಮಾಡಿದೆ ಎಂದು ಮೊದಲ ಸ್ಥಾನ ಬಂದಿತ್ತು. ವಿರೋಧ ಪಕ್ಷದವರು ದಿನನಿತ್ಯ ಬೆಂಗಳೂರಿನ ಬಗ್ಗೆ ಟೀಕೆಗಳನ್ನು ಮಾಡುತ್ತಾರೆ. ಈ ವರದಿಯು ಅವರಿಗೆ ಉತ್ತರವಾಗಲಿದೆ. 2026 ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ, ಯಾರಿಗೂ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಕಮಾಂಡ್ ಸೆಂಟರ್‌ಗೆ ಹೋಗಿ ರಾತ್ರಿ 2 ಗಂಟೆವರೆಗೆ ನೋಡಿದ್ದೇನೆ. ಬೆಂಗಳೂರಿಗೆ ನಿಜವಾಗಿ ಇದು ಹೆಮ್ಮೆಯ ವಿಷಯ ಎಂದು ಹೇಳಿದರು.
ಪರಮೇಶ್ವರ್ ಸಿಎಂ ಆಗಲಿ ಎಂದು ಪೂಜೆ
ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು ಎಂದು ಕೊರಟಗೆರೆಯಲ್ಲಿ ಸರ್ವಧರ್ಮ ಬೆಂಬಲಿಗರಿಂದ ಪೂಜೆ ವಿಚಾರವಾಗಿ ಅವರು ಉತ್ತರಿದರು. ಎಲ್ಲ ರಾಜಕಾರಣಿಗಳಿಗೆ ಇದ್ದಂತೆ, ಪ್ರತಿಯೊಬ್ಬ ರಾಜಕಾರಣಿಗೂ ಅವರನ್ನು ಇಷ್ಟಪಡುವ ಬೆಂಬಲಿಗರು ಮತ್ತು ಅಭಿಮಾನಿಗಳು ಇದ್ದೇ ಇರುತ್ತಾರೆ. ಅವರ ನಾಯಕ ಎತ್ತರಕ್ಕೆ ಹೋಗಬೇಕು ಎಂದು ಬಯಸುತ್ತಾರೆ. ಇದನ್ನು ತಪ್ಪು ಅಂತ ಹೇಳುವುದಿಲ್ಲ ಎಂದರು.
ಬಳ್ಳಾರಿ ಹಾಗೂ ಹುಬ್ಬಳ್ಳಿ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ಆದೇಶವನ್ನು ಹೊರಡಿಸಿದ್ದೇವೆ. ನಾವು ಏನೋ ಮುಚ್ಚಿಡುತ್ತಿದ್ದೇವೆ ಎಂದು ವಿರೋಧ ಪಕ್ಷದವರು ಅನ್ನಿಸುತ್ತಿದೆ. ಇದೇ ಕಾರಣದಿಂದ ಸಿಐಡಿ ತನಿಖೆಗೆ ವಹಿಸಿದ್ದೇವೆ. ತನಿಖೆಯ ನಂತರ ಸತ್ಯ ಏನು ಎಂಬುದು ಅವರಿಗೂ ಗೊತ್ತಾಗುತ್ತೆ. ಸಾರ್ವಜನಿಕರಿಗೂ ತಿಳಿಸುತ್ತೇವೆ ಎಂದು ಹೇಳಿದರು.
ದ್ವೇಷ ಭಾಷಣ ಮಸೂದೆ ನಿರ್ಧಾರ
ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರ ಅಂಕಿತ ಬೀಳದ ವಿಚಾರದ ಕುರಿತು ಮಾತನಾಡಿ, ಮಸೂದೆಯನ್ನು ರಾಜ್ಯಪಾಲರು ಅವರ ಬಳಿಯೇ ಇಟ್ಟುಕೊಂಡಿದ್ದಾರೆ. ಅವರು ಇನ್ನೂ ಅಧ್ಯಯನ ನಡೆಸುತ್ತಾರೆ ಎನ್ನಿಸುತ್ತದೆ. ವಾಪಸ್ ಕಳಿಸಿ, ಸ್ಪಷ್ಟನೆ ಕೇಳಿದರೆ ಕೊಡುತ್ತೇವೆ. ಒಂದು ವೇಳೆ ತಿರಸ್ಕೃತಗೊಳಿಸಿದರೆ ಮುಂದೆ ನಿರ್ಧಾರದ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ರಾಜ್ಯಪಾಲರು ಕೆಲವು ಮಸೂದೆಗಳ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಧ್ವೇಷ ಭಾಷಣ ಮಸೂದೆಯನ್ನು ಅಧ್ಯಯನ ನಡೆಸಿ ಸಹಿ ಹಾಕಬಹುದು ಎಂದು ಅಭಿಪ್ರಾಯಪಟ್ಟರು.
ಗಡಿಯಲ್ಲಿ ದುಡ್ಡುಕೊಟ್ಟು ಅಕ್ರಮ ಬಾಂಗ್ಲಾ ವಲಸಿಗರು ಬರುತ್ತಿದ್ದಾರೆಯೇ? ಪ್ರಶ್ನೆಗೆ ಅವರು, ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ಕಠಿಣವಾಗಿದ್ದೇವೆ. ಕೇಂದ್ರ ಸರ್ಕಾರವು ಗಡಿಯನ್ನು ಬಿಗಿಗೊಳಿಸಬೇಕು. ಹಣಕೊಟ್ಟು ಒಳಗೆ ಬರುತ್ತಾರೆ ಎಂದರೆ ಗಡಿಪ್ರದೇಶದಲದಲಿ ಸರಿಯಾಗಿ ಕೆಲಸ ಆಗುತ್ತಿಲ್ಲ ಅನ್ನಿಸುತ್ತದೆ. ಈ ಬಗ್ಗೆ ರಕ್ಷಣಾ ಇಲಾಖೆ ಕ್ರಮ ತೆಗೆದುಕೊಳ್ಳಬೆಕು.
ಏಜೆಂಟ್‌ಗಳ ಮೂಲಕ ಅಕ್ರಮವಾಗಿ ಒಳಗೆ ಬಂದಿರುವ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡುತ್ತಿದ್ದೇವೆ. ಹೊರ ದೇಶದವರ ದಾಖಲೆಗಳನ್ನು ಪರಿಶೀಲಿಸಬೇಕು. ಅನುಮಾನಿತರು ಕಂಡು ಬಂದರೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಅಧಿಕೃತ ವೀಸಾ ಇಲ್ಲದವರಿಗೆ ಮನೆ ಬಾಡಿಗೆ ನೀಡಬಾರದು ಎಂದು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.












Click it and Unblock the Notifications