ಬದುಕಿದೆಯಾ ಬಿಬಿಎಂಪಿ?: ಬೆಂಗಳೂರಿನಲ್ಲಿ 3000 ಜನರ ಬದುಕು ಹೀಗಾಗಿದೆ ನೋಡಿ!
ಬೆಂಗಳೂರು, ಸೆಪ್ಟೆಂಬರ್ 05: ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ವರುಣ ದೇವರ ಮುನಿಸಿಗೆ 3000ಕ್ಕೂ ಹೆಚ್ಚು ನಿವಾಸಿಗಳ ಬದುಕು ಬೀದಿಗೆ ಬಂದು ನಿಂತಿದೆ. ಬೆಳೆಗ್ಗೆ ಬಿಸಿಲು, ಮಟಮಟ ಮಧ್ಯಾಹ್ನವೇ ಮಳೆ, ಸಂಜೆ ವೇಳೆಗೆ ಚಳಿ. ರಾಜ್ಯ ರಾಜಧಾನಿ ಮಂದಿಗೆ ಒಂದೇ ದಿನ ತ್ರಿಕಾಲ ದರ್ಶನವಾಗುತ್ತಿದೆ.
ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಾಡಿರುವ ತಪ್ಪುಗಳೇನು ಎಂಬುದನ್ನು ಮಳೆರಾಯ ಹೆಕ್ಕಿ ತೋರಿಸುತ್ತಿದ್ದಾನೆ.
ನಗರದ ಮುನ್ನೆಕೊಳಲು ಮತ್ತು ಬೆಳ್ಳಂದೂರಿನ ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವ ಬಿಬಿಎಂಪಿ ಪೌರಕಾರ್ಮಿಕರು ಮತ್ತು ಚಿಂದಿ ಆಯುವವರ 1570 ಟಿನ್ ಶೆಡ್ ಮನೆಗಳು ಜಲಾವೃತವಾಗಿದ್ದು, 3,000ಕ್ಕೂ ಹೆಚ್ಚು ಜನರು ಸೂರು ಕಳೆದುಕೊಂಡಿದ್ದಾರೆ.
ಮಳೆಯ ಹೊಡೆತಕ್ಕೆ ಬೆಂಗಳೂರಿಗರ ಬದುಕು ಬೆಂಡಾಗಿರುವುದು ಹೇಗೆ?, ಬಿಬಿಎಂಪಿ ಅಧಿಕಾರಿಗಳು, ಶಾಸಕರು ಮತ್ತು ಸಂಸದರ ಮೌನದ ಮಧ್ಯೆ ಸಂತ್ರಸ್ತರ ಪಾಡು ಹೇಗಿದೆ?, ನೆತ್ತಿ ಮೇಲಿನ ಸೂರು ನೆಟ್ಟಗಿಲ್ಲದೇ ಪರಿತಪಿಸುತ್ತಿರುವ ಜನರಿಗೆ ಯಾವ ರೀತಿ ಸಹಾಯಹಸ್ತವನ್ನು ನೀಡಲಾಗುತ್ತಿದೆ ಎಂಬುದರ ಕುರಿತು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಬೆಂಗಳೂರಿನಲ್ಲಿ ಜಲಾವೃತಗೊಂಡ ಕೊಳಗೇರಿ
ರಾಜ್ಯ ರಾಜಧಾನಿಯಲ್ಲಿ ರಾತ್ರಿಯಿಡೀ ಎಡೆಬಿಡದೆ ಸುರಿದ ಮಳೆಯಿಂದಾಗಿ ಕೊಳೆಗೇರಿಗಳು ಜಲಾವೃತಗೊಂಡಿದ್ದು, ಜನರು ತಮ್ಮ ಮನೆಗಳಿಂದ ಹೊರಬಂದಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಮತ್ತು ರಾಜ್ಯ ವಿಪತ್ತು ರಕ್ಷಣಾ ಪಡೆ (ಎಸ್‌ಡಿಆರ್‌ಎಫ್) ಕಾರ್ಯಾಚರಣೆ ಜೋರಾಗಿದೆ. ಮಹದೇವಪುರದ ರಾಜಕಾಲುವೆಗಳ ಕುಳಿತವರು, ಟೆಕ್ ಕಾರಿಡಾರ್ ಮತ್ತು ಮೇಲ್ದರ್ಜೆ ಲೇಔಟ್‌ಗಳಲ್ಲಿನ ಇರುವ ಸಮಸ್ಯೆಗಳ ನಿವಾರಣೆಯಲ್ಲೇ ಈ ಅಧಿಕಾರಿಗಳೆಲ್ಲ ಬ್ಯುಸಿ ಆಗಿ ಬಿಟ್ಟಿದ್ದಾರೆ. ಆದರೆ ಬಡ ಹಾಗೂ ಕೊಳಚೆ ಪ್ರದೇಶದ ಸಂತ್ರಸ್ತರ ಬಗ್ಗೆ ಅಧಿಕಾರಿಗಳು ತೆಲೆ ಕೆಡಿಸಿಕೊಳ್ಳುತ್ತಿಲ್ಲ.

ಬೆಂಗಳೂರಲ್ಲಿ ಬದುಕು ಕೆಡಿಸಿದ ಮಳೆಯ ನೀರು!
ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯು ಬಡ ಜನರ ಬದುಕು ಕೆಡಿಸಿದೆ. ನೆತ್ತಿ ಮೇಲಿನ ಸೂರು ಕಳೆದುಕೊಂಡವರ ಬದುಕು ಬೀದಿಗೆ ಬಂದು ನಿಂತಿದೆ. ಹಸಿವಿನಿಂದ ನರಳುತ್ತಿರುವ ಸಂತ್ರಸ್ತರಿಗೆ ಯಾವುದೇ ಲಾಭದ ಅಪೇಕ್ಷೆಯಿಲ್ಲದೇ ದುಡಿಯುತ್ತಿರುವ ಸಂಘಟನೆಗಳು ನೆರವಿನ ಹಸ್ತ ಚಾಚಿವೆ. ಸಂತ್ರಸ್ತರಿಗಾಗಿ ಆಹಾರವನ್ನು ಸಂಗ್ರಹಿಸುತ್ತಿದ್ದಾರೆ. ವರುಣನ ಮುನಿಸಿಗೆ ಮುನ್ನೆಕೊಳಲು ಮತ್ತು ಬೆಳ್ಳಂದೂರಿನ ಕೊಳಚೆ ಪ್ರದೇಶಗಳಲ್ಲಿ1570 ಮನೆಗಳು ಜಲಾವೃತಗೊಂಡವು. ಮೋಡವೇ ಹರಿದು ಭೂಮಿಗೆ ಬಿದ್ದ ಸಂದರ್ಭದಲ್ಲಿ ನೆತ್ತಿಯ ಮೇಲೆ ಪ್ಲಾಸ್ಟಿಕ್ ಹೊಚ್ಚಿಕೊಂಡು ಕುಳಿತು ಕೊಳಗೇರಿಯ ಜನರು ರಕ್ಷಣೆ ಪಡೆದುಕೊಂಡರು.

ಕೊಳಗೇರಿ ಸಂತ್ರಸ್ತ ನಾಗಪ್ಪನ ಕಥೆ ಕೇಳಿ!
ಬೆಂಗಳೂರಿನ ಮುನ್ನೆಕೊಳಲು ಕೊಳಚೆ ಪ್ರದೇಶದಲ್ಲಿ ಮಳೆಯು ಎಂಥಾ ಅನಾಹುತವನ್ನು ಸೃಷ್ಟಿಸಿತು ಎಂಬುದನ್ನು ಸ್ಥಳೀಯ ನಿವಾಸಿ ನಾಗಪ್ಪ ಎಂಬುವವರು ವಿವರಿಸಿ ಹೇಳಿದ್ದಾರೆ. "ಕಳೆದ ರಾತ್ರಿ 3 ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದಾಗಿ ರಾತ್ರಿ 11 ಗಂಟೆ ಸುಮಾರಿಗೆ ಮನೆಗಳಿಗೆ ನೀರು ನುಗ್ಗುವುದಕ್ಕೆ ಶುರುವಾಯಿತು. ಮನೆಗೆ ನೀರು ನುಗ್ಗುವುದರ ಜೊತೆಗೆ ಹಾವು-ಚೇಳಿನ ಭಯದಲ್ಲೇ ತಮ್ಮ ಮಕ್ಕಳನ್ನು ಹೊತ್ತುಕೊಂಡು ಪೋಷಕರು ಮನೆಗಳಿಂದ ಹೊರ ಬಂದಿದ್ದು, ಅಲ್ಲಿಂದ ಸುರಕ್ಷಿತ ಸ್ಥಳಗಳಿಗೆ ತೆರಳಿದರು.
"ಮಳೆ ನೀರು ಮನೆಗೆ ನುಗ್ಗಿದ್ದರಿಂದ ಎಲ್ಲಾ ಧವಸ-ಧಾನ್ಯ ಮತ್ತು ಆಹಾರ ಪದಾರ್ಥಗಳು ಕೊಚ್ಚಿಕೊಂಡು ಹೋಗಿವೆ. ಕೆಲವೆಡೆ ಬಟ್ಟೆಗಳು ಜಲಾವೃತಗೊಂಡಿವೆ. ಇಷ್ಟೆಲ್ಲಾ ನಡೆದರೂ ಯಾವುದೇ ಇಲಾಖೆಯ ಅಧಿಕಾರಿಗಳನ್ನು ಸ್ಥಳ ಪರಿಶೀಲನೆಗೆ ಕಳುಹಿಸಲಾಗಿಲ್ಲ. ಸಂತ್ರಸ್ತರ ರಕ್ಷಣೆ ಅಥವಾ ಆಹಾರ ಮತ್ತು ಕುಡಿಯುವ ನೀರು ವಿತರಣೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಇಲ್ಲಿನ ಮಕ್ಕಳು ಮತ್ತು ಮಹಿಳೆಯರು ಹಲವು ಗಂಟೆಗಳಿಂದ ಅನ್ನ-ಆಹಾರವಲ್ಲೇ ಕುಡಿಯುವುದಕ್ಕೆ ನೀರು ಸಿಗದೇ ಪರದಾಡುತ್ತಿದ್ದಾರೆ," ಎಂದು ಬಿಬಿಎಂಪಿ ಕಾರ್ಮಿಕರೇ ಆಗಿರುವ ಸಂತ್ರಸ್ತ ನಾಗಪ್ಪ ಹೇಳಿದ್ದಾರೆ.

ದಾಖಲೆ ಮಳೆ ಸುರಿದರೂ, ಕುಡಿಯುವ ನೀರಿಗೆ ಹಾಹಾಕಾರ!
ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಮಳೆಗೆ ಧರೆಯೇ ತತ್ತರಿಸಿ ಹೋಗಿದ್ದು, ನೆರೆ ಪರಿಸ್ಥಿತಿ ಸೃಷ್ಟಿಯಾಗಿದೆ. ಅದಾಗ್ಯೂ, ಸಿಲಿಕಾನ್ ಸಿಟಿ ಮುನ್ನಿಕೊಳಲು ಮತ್ತು ಬೆಳ್ಳಂದೂರಿನ ಕೊಳಚೆ ಪ್ರದೇಶದ ಜನರು ಕುಡಿಯುವ ಹನಿ ನೀರಿಗೂ ಪರಿತಪಿಸುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. "ಮಳೆ ಅವಾಂತರದಿಂದ ಸೂರು ಕಳೆದುಕೊಂಡು ಅನ್ನ-ನೀರು ಇಲ್ಲದೇ ಕಣ್ಣೀರು ಹಾಕುತ್ತಿರುವ ನಮ್ಮ ಮಕ್ಕಳ ಸ್ಥಿತಿಯನ್ನು ನೋಡಿದರೆ, ಕರಳು ಕಿವುಚುತ್ತದೆ," ಎಂದು ಸಂತ್ರಸ್ತ ಮಹಿಳೆ ಲಕ್ಷ್ಮಮ್ಮ ಹೇಳಿದ್ದಾರೆ.












Click it and Unblock the Notifications