ಬೆಂಗಳೂರಿನಲ್ಲಿ ಮುಂದುವರೆದ ಮಳೆ: ವಾರಾಂತ್ಯದ ಖುಷಿ ಹೆಚ್ಚಳ- ಬಜ್ಜಿ, ಟೀ ಅಂಗಡಿ ಫುಲ್!
ಬೆಂಗಳೂರು ಅಕ್ಟೋಬರ್ 5: ಬೆಂಗಳೂರಿನಲ್ಲಿ ಇಂದೂ ಕೂಡ ಮಳೆ ಮುಂದುವರೆದಿದೆ. ನಗರದಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದ ಜನ ಪ್ರಸ್ತುತ ಮಳೆಯನ್ನೂ ಆನಂದಿಸುತ್ತಿದ್ದಾರೆ. ಹೇಳಿಕೇಳಿ ಇಂದು ವಾರಾಂತ್ಯವಾದ್ದರಿಂದ ಮಳೆ ಕೆಲವರಿಗೆ ಖುಷಿ ತಂದಿದೆ. ಅಲ್ಲದೆ ಬಜ್ಜಿ ಬೊಂಡಾ ಹಾಗೂ ಟೀ ಅಂಗಡಿಗಳ ತುಂಬೆಲ್ಲಾ ಜನ ತುಂಬಿಕೊಂಡಿದ್ದಾರೆ.
ಚುಮು ಚುಮು ಚಳಿಗೆ ಬಿಸಿ ಬಿಸಿ ಟೀ ಅಥವಾ ಕಾಫಿ ಜೊತೆಗೆ ಬಜ್ಜಿ ಬೊಂಡಾ ತಿತ್ತೋದ್ರಲ್ಲಿರೋ ಮಜಾನೇ ಬೇರೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಜೋರಾಗಿದೆ. ಪ್ರತಿದಿನವೂ ನಗರದಲ್ಲಿ ಮಳೆಯಾಗುತ್ತಿದೆ. ಮಧ್ಯಾಹ್ನ ಆವರಿಸುವ ಕಪ್ಪು ಕಾರ್ಮೋಡ ಮಳೆಯನ್ನ ತರಿಸಿ ತಂಪಾಗಿಸಿದೆ.

ಹೀಗಾಗಿ ಅಕ್ಟೋಬರ್ ಆರಂಭದಿಂದಲೂ ಬೆಂಗಳೂರು ವಾತಾವರಣವೇ ಬದಲಾಗಿ ಹೋಗಿದೆ. ಬೆಳಿಗ್ಗೆ ಸುಡು ಬಿಸಿಲು, ಮಧ್ಯಾಹ್ನ ಮಳೆ, ರಾತ್ರಿ ಚಳಿ, ಬೆಳ್ಳಂಬೆಳಿಗ್ಗೆ ಮಂಜು ಆವರಿಸುತ್ತಿದೆ. ಹೀಗಾಗಿ ಬೆಂಗಳೂರು ಹವಮಾನ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಇದರಿಂದಾಗಿ ಟೀ ಕಾಫಿಗೆ ಬೇಡಿಕೆ ಹೆಚ್ಚಾಗಿದೆ.
ಸಣ್ಣಪುಟ್ಟ ಅಂಗಡಿಗಳಲ್ಲಿ ಟೀ ಕಾಫಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನೂ ಬಜ್ಜಿ ಬೋಂಡಾ ಅಂಗಡಿಗಳಲ್ಲಿ ನಾನಾ ಕರಿದ ತಿಂಡಿಗಳನ್ನು ಖರೀದಿಸುತ್ತಿರುವುದು ಕಂಡು ಬರುತ್ತಿದೆ. ಅಲ್ಲಲ್ಲಿ ಜನ ಅಂಗಡಿಗಳ ಮುಂದೆ ನಿಂತು ಮೆಣಸಿನಕಾಯಿ, ಆಲುಗಡ್ಡೆ, ಈರುಳ್ಳಿ, ದೊಡ್ಡ ಮೆಣಸಿನಕಾಯಿ ಬಜ್ಜಿ ಖರೀದಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಬಳ್ಳಾರಿಯಲ್ಲಿ ಮಳೆ
ಬಳ್ಳಾರಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರವಾಗಿ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಅವಾಂತರವನ್ನೇ ಸೃಷ್ಟಿ ಮಾಡಿದೆ. ಮಳೆ ಹಿನ್ನೆಲೆ ನೂರಾರು ಗಣಿ ಲಾರಿಗಳು ಜಲಾವೃತವಾಗಿದೆ. ಸಂಡೂರಿನ ಗಣಿ ಪ್ರದೇಶದಲ್ಲಿ ನೂರಾರು ಗಣಿ ಲಾರಿಗಳು ಭಾಗಶ: ಮುಳುಗಡೆಯಾಗಿದೆ. ಲಾರಿಗಳು ಜಲಾವೃತಗೊಂಡ ಪರಿಣಾಮ ಚಾಲಕರು ಪರದಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಚಾಮರಾಜನಗರದಲ್ಲಿ ಭಾರೀ ಮಳೆ
ಚಾಮರಾಜನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಕೊಳ್ಳೆಗಾಲ ನಗರಸಭೆ ವ್ಯಾಪ್ತಿಯ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದ ಕುಪ್ಪಮ್ಮ ಕಾಲುವೆಯಿಂದ ಹೆಚ್ಚುವರಿ ನೀರು ಹರಿದ ಪರಿಣಾಮ ಕೊಳ್ಳೆಗಾಲ ಇಂದಿರಾ ಕಾಲೋನಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ.
ರಾಜ್ಯದ ವಿವಿದೆಢೆ ಶನಿವಾರದಿಂದ ನಾಲ್ಕು ದಿನಗಳು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು, ಮೈಸೂರು, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ ಜಿಲ್ಲೆಗೆ ಶನಿವಾರ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ವ್ಯಾಪಿಸಿಕೊಳ್ಳುವ ಸಂಭವವಿದ್ದು, ಹನ್ನೊಂದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications