Bengaluru Rain: ಸೆಪ್ಟಂಬರ್ 6ರ ವರೆಗೆ ಮಳೆ ಪಕ್ಕಾ, 7ದಿನ ತಾಪಮಾನ ವರದಿ ಹೀಗಿದೆ
ಬೆಂಗಳೂರು, ಆಗಸ್ಟ್ 30: ರಾಜಧಾನಿ ಬೆಂಗಳೂರು ಆಗಸ್ಟ್‌ನಲ್ಲಿ ಅತ್ಯಧಿಕ ತಾಪಮಾನ ದಾಖಲಾತಿಗೆ ಸಾಕ್ಷಿಯಾಗಿದೆ. ಇತ್ತೀಚಿನ ದಿನಗಳಲ್ಲಿ ನಿತ್ಯ ನಗರದ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಈ ಬಿರು ಬಿಸಿಲಿಗೆ ನಗರವಾಸಿಗಳು ತತ್ತರಿಸಿದ್ದಾರೆ. ಇದೀಗ ಅವರಿಗೆಲ್ಲ ಸಿಹಿ ಸುದ್ದಿ ಲಭಿಸಿದ್ದು, ಆಗಸ್ಟ್ 31 ರಿಂದ ಸೆಪ್ಟಂಬರ್ 6ರವರೆಗೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಾಳೆ ಗುರುವಾರದಿಂದ ಎರಡು ದಿನ ಬೆಂಗಳೂರಿನಲ್ಲಿ ಮುಂಗಾರು ಹೆಚ್ಚು ಸಕ್ರಿಯವಾಗಿರಲಿದೆ. ಕೆಲವೆಡೆ ಲಘು- ತುಂತುರು ಮಳೆಯಾದರೆ ಅನೇಕ ಕಡೆಗಳಲ್ಲಿ ಧಾರಾಕಾರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಸ್ಟ್ ತಿಂಗಳಲ್ಲಿ ತಾಪಮಾನವು 32.6 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಈ ಮೂಲಕ ತಂಪಾಗಿರಬೇಕಿದ್ದ ನಗರ ತಾಪಮಾನಕ್ಕೆ ಬಳಲುತ್ತಿದೆ. ಇನ್ನೂ ನೆನ್ನೆ ಮಂಗಳವಾರ ಆಗಸ್ಟ್ 29ರಂದು ಅತ್ಯಧಿಕ ತಾಪಮಾನ ದಾಖಲಾತಿಗೆ ಬೆಂಗಳೂರಿಗೂ ಸಾಕ್ಷಿಯಾಗಿದ್ದಾರೆ. ನಗರದಲ್ಲಿ ಈ ಹಿಂದೆ 2015 ರ ಆಗಸ್ಟ್ 19ರಂದು 32.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಅದಾಗಿ ಎಂಟು ವರ್ಷಗಳ ನಂತರ ನೆನ್ನೆ ದಾಖಲಾಗಿದೆ.
ಬೆಂಗಳೂರು ಸಾರ್ವಕಾಲಿಕ ತಾಪಮಾನ ಎಷ್ಟಿದೆ?
ಈ ತಿಂಗಳಲ್ಲಿ ಭರ್ಜರಿ ಮಳೆ ಕಾಣಬೇಕಿದ್ದ ಸಿಲಿಕಾನ್ ಕಳೆದ ಒಂದು ವಾರದಿಂದ 30 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅತ್ಯಧಿಕ ಬಿಸಿಲನ್ನು ಕಾಣುತ್ತಿದೆ. ಬೆಂಗಳೂರಿನ ಮಟ್ಟಿಗೆ 1899ರ ಆಗಸ್ಟ್ 6 ರಂದು ದಾಖಲಾಗಿದ್ದ 33.3 ಡಿಗ್ರಿ ಸೆಲ್ಸಿಯಸ್ ತಾಪಮಾನವೇ ಸಾರ್ವಕಾಲಿಕ ದಾಖಲೆಗೆ ತಾಪಮಾನ ಆಗಿದೆ ಎಂದು ಐಎಂಡಿ ವರದಿಗಳು ಮಾಹಿತಿ ನೀಡಿವೆ.

ಈ ಭಾರಿ ಬೆಂಗಳೂರು ಸದರಿ ತಿಂಗಳಲ್ಲಿ ಶೇ.90ರಷ್ಟು ಮಳೆ ಕೊರತೆ ಕಂಡಿದ್ದು ಕೇವಲ 12.2ಮಿಮೀ ಮಳೆ ಆಗಿದೆ. ಈ ಕಾರಣದಿಂದ ಉಷ್ಣಾಂಶದ ಪ್ರಮಾಣ ಏರಿಕೆ ಆಗುತ್ತಿದೆ. ಹೀಗಾಗಿ ಈ ತಿಂಗಳು ಶುಷ್ಕ ಮುಂಗಾರು ತಿಂಗಳು ಎನ್ನಲಾಗುತ್ತಿದೆ.
2022ರ ಆಗಸ್ಟ್‌ನಲ್ಲಿ ಇದೇ ತಿಂಗಳು ಆಗಸ್ಟ್‌ನಲ್ಲಿ ಬೆಂಗಳೂರು ಭರ್ಜರಿ 364.2 ಮಿ.ಮೀ ಮಳೆ ದಾಖಲಿಸಿತ್ತು. ಆದರೆ ಈ ಬಾರಿ ಮಳೆ ತಡವಾಗಿ ಅರಂಭವಾಗಿದ್ದಲ್ಲದೇ ನಿರೀಕ್ಷಿತ ಮಳೆ ಸುರಿದಿಲ್ಲ. ಪ್ರಸಕ್ತ ವರ್ಷ ಜೂನ್ 1 ರಿಂದ ಬೆಂಗಳೂರಿನಲ್ಲಿ ಕೇವಲ 226 ಮಿಮೀ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಾಪಮಾನ ಇಳಿಕೆ ನಿರೀಕ್ಷೆ
ಸದ್ಯ ದೊರೆತಿರುವ ಮಳೆ ಮುನ್ಸೂಚನೆ ನೊಡಿದರೆ ಆಗಸ್ಟ್ 31 ರಿಂದ ಬೆಂಗಳೂರಿನಲ್ಲಿ ತಾಪಮಾನ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿವೆ. ನಾಳೆ ಗುರುವಾರದಿಂದ ಎರಡು ದಿನ ನಗರದಲ್ಲಿ ಜೋರು ಮಳೆ ಆಗಲಿದೆ. ನಂತರ ನಾಲ್ಕರಿಂದ ಐದು ದಿನ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಮುಂದಿನ ಒಂದು ವಾರ ನಗರದಲ್ಲಿ ಗರಿಷ್ಠ 31-30 ಡಿಗ್ರ ಸೆಲ್ಸಿಯಸ್ ತಾಪಮಾನ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ.












Click it and Unblock the Notifications