Bengaluru Rains: ನಗರದ 44 ವಾರ್ಡ್‌ಗಳಲ್ಲಿ ಮಳೆ ಸಿಂಚನ, ನಾಳೆ ಭರ್ಜರಿ ಮಳೆ ಸಾಧ್ಯತೆ
ಬೆಂಗಳೂರು, ಜುಲೈ 03: ಬೆಂಗಳೂರಲ್ಲಿ ಬುಧವಾರ ಮಧ್ಯಾಹ್ನ ಜುಲೈ ತಿಂಗಳ ಮೊದಲ ಮಳೆಯ ಸಿಂಚನವಾಯಿತು. ಇದರೊಂದಿಗೆ ಬೆಂಗಳೂರು ಬಿಸಿಲಿಗೂ ಸಾಕ್ಷಿ ಆಯಿತು. ನೋಡ ನೋಡುತ್ತಿದ್ದಂತೆ ಬಿಬಿಎಂಪಿ ವ್ಯಾಪ್ತಿಯ ಸುಮಾರು 44 ವಾರ್ಡ್‌ಗಳಲ್ಲಿ ಜಿಟಿ ಜಿಟಿ ಮಳೆ ಆಯಿತು. ನಾಳೆ ಗುರುವಾರ ನಗರದ ವಿವಿಧ ಬಡಾವಣೆಗಳಲ್ಲಿ ಭರ್ಜರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು KSNDMC ಮಾಹಿತಿ ನೀಡಿದೆ.
ರಾಜ್ಯದ ಕರಾವಳಿಗೆ ಹತ್ತಿರದಲ್ಲಿ ಅರಬ್ಬಿ ಸಮುದ್ರದಲ್ಲಿ ವೈಪರಿತ್ಯಗಳು ಉಂಟಾದ ಹಿನ್ನೆಲೆಯಲ್ಲಿ ಮುಂಗಾರು ಚುರುಕುಗೊಂಡಿದೆ. ಕೆಲವು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ, ಬೆಂಗಳೂರು ನಗರದಲ್ಲೂ ಕೃಪೆ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆ ಸುರಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.

ವಿವಿಧ ಬಡಾವಣೆಗಳಲ್ಲಿ ಬಿದ್ದ ಮಳೆ ವಿವರ
ಬುಧವಾರ ಮಧ್ಯಾಹ್ನ ಬೆಂಗಳೂರಿನ ಕೋರಮಂಗಲ, ಕೋಣನಕುಂಟೆ, ಹೆಮ್ಮಿಗೆಪುರ, ಜ್ಞಾನಭಾರತಿ, ಆರ್‌ಆರ್ ನಗರ, ಸುಧಾಮ್‌ನಗರ, ಮಹಾದೇವಪುರ ವಲಯದ ಹಲವು ಬಡಾವಣೆಗಳು, ವರ್ತೂರು, ಬೆಳ್ಳಂದೂರು, ಓಕಳಿಪುರಂ, ರಾಜಕುಮಾರ್ ರಸ್ತೆ, ವಿಜಯನಗರ, ಗಿರಿನಗರ, ದೀಪಾಂಜಲಿ ನಗರ, ಹಂಪಿನಗರ, ನಾಯಂಡಹಳ್ಳಿ, ಚಾಮರಾಜಪೇಟೆ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ದಿಢೀರ್ ಮಳೆ ಬಂತು ಮಳೆ ಬಂದು ನಿಂತ ಕೆಲವೇ ಕ್ಷಣಗಳಲ್ಲಿ ಕಣ್ಣಿಗೆ ಕುಕ್ಕುವಂತಹ ಬಿಸಲಿನ ದರ್ಶನವಾಯಿತು. ನಂತರ ಮೋಡ ಕವಿದ ಮಬ್ಬು ವಾತವರಣ ಮರೆಯಾಗಿ ಎಂದಿನಂತೆ ಸಹಜ ವಾತಾವರಣ ನಿರ್ಮಾಣವಾಯಿತು. ಒಂದಷ್ಟು ಕಡೆಗಳಲ್ಲಿ ಜೋರು ಮಳೆ ದಾಖಲಾಗಿದೆ. ಉಳಿದಂತೆ ಎಲ್ಲಿಯೂ ಹೇಳಿಕೊಳ್ಳುವಂತಹ ದಾಖಲೆಯ ಮಳೆ ಆಗಿಲ್ಲ.
ಆಗಾಗ ಬಂದ ಜಿಟಿ ಜಿಟಿ ಮಳೆಗೆ ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತಿದ್ದ ಬಿಟ್ಟರೆ ಎಲ್ಲಿಯೂ ತೊಂದರೆ ಆಗಿಲ್ಲ. ಇಂದು ತಡರಾತ್ರಿ ಕೆಲವು ಬಡಾವಣೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಉಳಿದಂತೆ ನಾಳೆ ಗುರುವಾರ ಜೋರು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ಮಾಡಿದೆ.
ನಗರದಲ್ಲಿ ಜುಲೈ 09ರವರೆಗೆ ಹಗುರ ಮಳೆ
ಬೆಂಗಳೂರಿನಲ್ಲಿ ಮುಂದಿನ ಜುಲೈ 09ರವರೆಗೆ ಆಗಾಗ ಮಳೆಯ ದರ್ಶನವಾಗಲಿದೆ. ಈ ಪೈಕಿ ನಾಳೆ ಗುರುವಾರ ಜುಲೈ 04ರಂದು ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ. ಇನ್ನೂ ಅವಧಿಯಲ್ಲಿ ನಗರದಲ್ಲಿ ಗರಿಷ್ಠ ತಾಪಮಾನ 30ರಿಂದ 27 ಡಿಗ್ರಿ ಸೆಲ್ಸಿಯಸ್ ಕಂಡು ಬಂದರೆ, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.

ರಾಜ್ಯದ ಕರಾವಳಿಗೆ ಭಾರೀ ಮಳೆ
ಕರ್ನಾಟಕದಲ್ಲಿ ಕರಾವಳಿ ಭಾಗದಲ್ಲಿ ಭಾರೀ ಮಳೆ ಮುನ್ಸೂಚನೆ ಇದೆ. ಮಲೆನಾಡಿನ ಜಿಲ್ಲೆಗಳಲ್ಲಿ ಅಬ್ಬರಿಸುತ್ತಿದ್ದ ಮುಂಗಾರು ಮಳೆಯ ಆರ್ಭಟ ಇಳಿಕೆ ಆಗಿದೆ. ತಕ್ಕ ಮಟ್ಟಿಗೆ ಸಾಧಾರಣ ಮಳೆ ಆಗಲಿದೆ. ಉತ್ತರ ಕರ್ನಾಟಕದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications