Bengaluru Rain: ಇಂದು ಕೂಡ ಬೆಂಗಳೂರಿನಲ್ಲಿ ಭಾರೀ ಮಳೆ: ಎಲ್ಲೆಲ್ಲಿ ತಿಳಿಯಿರಿ
ಆಗಸ್ಟ್‌ನಲ್ಲಿ ಭಾರಿ ಮಳೆ ಕೊರತೆಯ ನಂತರ ಸೆಪ್ಟೆಂಬರ್ ಆರಂಭದಿಂದಲೇ ಬೆಂಗಳೂರು ನಗರದಲ್ಲಿ ಉತ್ತಮ ಮಳೆಯಾಗುತ್ತಿದೆ. ಸೆಪ್ಟೆಂಬರ್ 5 (ಮಂಗಳವಾರ) ರಾಜಧಾನಿಯಲ್ಲಿ ವ್ಯಾಪಕ ಮಳೆಯಾಗಿದೆ. ಬುಧವಾರ ಕೂಡ ನಗರದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಂಗಳವಾರ ಮಧ್ಯಾಹ್ನದಿಂದಲೇ ನಗರದ ಹಲವು ಭಾಗಗಳಲ್ಲಿ ಮಳೆ ಆರಂಭವಾಗಿತ್ತು. ಸಂಜೆ ವೇಳೆಗೆ ಬಿರುಸು ಪಡೆದ ಮಳೆ ಅಬ್ಬರಿಸಲು ಆರಂಭಿಸಿತು. ಸದ್ಯ ಬೆಂಗಳೂರು ಫುಲ್ ಕೂಲ್ ಕೂಲ್ ಆಗಿದೆ. ಬುಧವಾರ ಮುಂಜಾನೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ, ಸಂಜೆ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಯಾದಂತೆ ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ 74.5 ಮಿಮೀ ಮಳೆಯಾಗಿದೆ. ಬೊಮ್ಮಸಂದ್ರ 66.5 ಮಿಮೀ, ನೆರಳೂರು 64.5 ಮಿಮೀ., ಬಿದರಗುಪ್ಪೆ 64, ಮಂಟಪ 59.5 ಮಿಮೀ, ದೊಡ್ಡಜಾಲ 56 ಮಿಮೀ, ಹಂಡೇನಹಳ್ಳಿ 55 ಮಿಮೀ, ಹೆಚ್ ಗೊಲ್ಲಗಳ್ಳಿ 54 ಮಿಮೀ, ಮುತ್ತಾನಲ್ಲೂರು 52.5 ಮಿಮೀ, ಚುಂಚನಕುಪ್ಪೆಯಲ್ಲಿ 59 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ
ಬೆಂಗಳೂರಿಗೆ ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಯಂತೆ 208.3 ಮಿಮೀ ಮಳೆಯಾಗಬೇಕಿದೆ, ಮೊದಲ 5 ದಿನಗಳಲ್ಲೇ ರಾಜ್ಯ ರಾಜಧಾನಿಯಲ್ಲಿ 116.1 ಮಿಮೀ ಮಳೆಯಾಗಿದ್ದು, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಮೊದಲ 5 ದಿನದಲ್ಲೇ ತಿಂಗಳ ವಾಡಿಕೆಯ ಅರ್ಧದಷ್ಟು ಮಳೆಯಾಗಿದೆ.
ಸೆಪ್ಟೆಂಬರ್ 5 ರಂದು ನಗರದಲ್ಲಿ ಸುರಿದ ಮಳೆಯಿಂದಾಗಿ ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದವು. ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಟುವಂತಾಯಿತು. ಸಂಜೆ ಮಳೆಯಾದ ಕಾರಣ ನಗರದಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಕೂಡ ಉಂಟಾಗಿತ್ತು.
ಬುಧವಾರ ಎಲ್ಲೆಲ್ಲಿ ಮಳೆ
ಸೆಪ್ಟೆಂಬರ್ 6ರಂದು ನಗರದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಚಂದಾಪುರ, ಬೊಮ್ಮಸಂದ್ರ, ಬಿದರಗುಪ್ಪೆ, ದೊಡ್ಡಜಾಲ, ಮಂಟಪ, ಹಂದೇನಹಳ್ಳಿ, ಎಚ್ ಗೊಲ್ಲಹಳ್ಳಿ, ವಿದ್ಯಾಪೀಠ, ವೀರಸಂದ್ರ, ಮರಸೂರು, ಬಾಗಲೂರು, ರಾಜರಾಜೇಶ್ವರಿ ನಗರ, ಮಾರೇನಹಳ್ಳಿ, ಕೆಂಗೇರಿ, ಸಾತನೂರು, ಹೆಮ್ಮಿಗೆಪುರ, ಗೊಟ್ಟಿಗೆರೆ, ಹಂಪಿ ನಗರ, ಗಾಳಿಯಾಂಜನೇಯ ದೇವಸ್ಥಾನ ವಾರ್ಡ್, ಬಿಳೇಕಹಳ್ಳಿ, ನಂದಿನಿ ಲೇಔಟ್, ಕೋಣನಕುಂಟೆ, ಅಂಜನಾಪುರ, ಕೊಟ್ಟಿಗೆಪಾಳ್ಯ, ನಾಗಪುರ, ರಾಜಮಹಲ್ ಗುಟ್ಟಹಳ್ಳಿ, ಯಶವಂತಪುರ, ಕೋರಮಂಗಲ, ಅಗರ, ಮೆಜೆಸ್ಟಿಕ್, ಸಂಪಂಗಿರಾಮನಗರ, ಅಗ್ರಹಾರ ದಾಸರಹಳ್ಳಿ, ಸೇರಿದಂತೆ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications