Bengaluru Rain: ವಾಯುಭಾರ ಕುಸಿತ, ಇಂದು ಮಧ್ಯಾಹ್ನದಿಂದಲೇ ಮಳೆ ಆರ್ಭಟ: ಭಾರೀ ಮಳೆ ಎಚ್ಚರಿಕೆ
ಬೆಂಗಳೂರು, ಆಗಸ್ಟ್ 29: ಉದ್ಯಾನ ನಗರಿಗೆ ಗುರುವಾರ ಮಟ ಮಟ ಮಧ್ಯಾಹ್ನವೇ ಮಳೆರಾಯ ತಂಪೆರೆದಿದ್ದಾನೆ. ನೋಡ ನೋಡುತ್ತಿದ್ದಂತೆ ಮುಂಗಾರು ಮಳೆ ಅಬ್ಬರಿಸಲು ಶುರುವಿಟ್ಟುಕೊಂಡಿತು. ಸುಮಾರು ಒಂದು ಗಂಟೆ ಕಾಲ ನಗರದ ವಿವಿಧ ಕಡೆಗಳಲ್ಲಿ ಜೋರು ಮಳೆ ಆಗಿದ್ದು, ಚಾಮರಾಜಪೇಟೆಯಲ್ಲಿ 20 ಮಿಲಿ ಮೀಟರ್ ಮಳೆ ದಾಖಲಾಯಿತು. ಧಾರಾಕಾರ ಮಳೆಗೆ ವಾಹನ ಸವಾರರು, ವ್ಯಾಪಾರಸ್ಥರು ಪರದಾಡಬೇಕಾಯಿತು.
ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ತುಂತುರು ರೂಪದಲ್ಲಿ ಬರುತ್ತಿದ್ದ ಮಳೆ ಇಂದು ವ್ಯಾಪಕವಾಗಿ ಸುರಿಯಿತು. ಕೋರಮಂಗಲ, ಮಡಿವಾಳ, ಡೈರಿ ವೃತ್ತ, ಹೆಬ್ಬಾಳ, ಸಿಲ್ಕಬೋರ್ಡ್, ಎಚ್‌ಎಸ್‌ಆರ್ ಬಡಾವಣೆ, ಬನಶಂಕರಿ, ಎಚ್‌ಎಎಲ್ ವಿಮಾನ ನಿಲ್ದಾನ, ಮೆಜೆಸ್ಟಿಕ್, ರಾಜಾಜಿನಗರ, ಶೇಷಾದ್ರಿಪುರಂ, ವಿಜಯನಗರ, ಹಂಪಿನಗರ, ಚಾಮರಾಜಪೇಟೆ, ವಿದ್ಯಾರಣ್ಯಪುರ ಸೇರಿದಂತೆ ನಗರದ ಬಹುತೇಕ ಎಲ್ಲ ಕಡೆಗಳಲ್ಲಿ ಜೊರು ಮಳೆ ಆಗಿದೆ.

ಕೇವಲ ಅರ್ಧಗಂಟೆಯಲ್ಲಿ ನಗರದ ಪ್ರಮುಖ ರಸ್ತೆಗಳ ಮೇಲೆ ಮಳೆ ನೀರು ತುಂಬಿ ಹರಿದಿದ್ದು ಕಂಡು ಬಂತು. ಕೆ. ಆರ್.ವೃತ್ತ, ಚಾಣಕ್ಯ ವೃತ್ತ, ಶಿವಾನಂದ ವೃತ್ತ, ಮೆಜೆಸ್ಟಿಕ್ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಜನರು ಗಾಳೀ ಸಹಿತ ಬಂದ ಮಳೆಗೆ ನಿಲ್ದಾಣದಲ್ಲಿ ನಿಲ್ಲಲಾಗದೇ ಪರದಾಡಿದರು.
ರಸ್ತೆಗಳ ಮೇಲೆ ನೀರು, ಸವಾರರ ಪರದಾಟ
ವಾಹನ ಸವಾರರು ಮೆಟ್ರೋ ಪಿಲ್ಲರ್, ರಸ್ತೆ ಬದಿ ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿ ನಿಂತು ಮಳೆಯಿಂದ ತಪ್ಪಿಸಿಕೊಂಡರು. ಕೆಲವು ರಸ್ತೆ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ಕಂಡು ಬಂತು. ರಸ್ತೆ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ತುಂಬಿಕೊಂಡ ಪರಿಣಾಮ ಒಳಚರಂಡಿ ನೀರು ಉಕ್ಕಿ ಹರಿಯಿತು.

ಒಂದಷ್ಟು ಕಡೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಸಿದೆ. ಇಲ್ಲಿನ ನಿವಾಸಿಗಳಿಗೆ ಇಂದು ರಾತ್ರಿವರೆಗೂ ಮಳೆ ಹೀಗೆ ಮುಂದುವರಿದೆ ಹೇಗೆ ಎಂಬ ಚಿಂತೆ ಕಾಡಿತು. ರಾಜಾಜಿನಗರ, ಟೌನ್ ಹಾಲ್, ಕೆ.ಆರ್ ಮಾರುಕಟ್ಟೆ, ನಾಯಂಡಹಳ್ಳಿ, ಹೆಬ್ಬಾಳ ಜಂಕ್ಷನ್, ಕೆ.ಆರ್‌ಪುರಂ ಹಾಗೂ ಒಂದಷ್ಟು ಸರ್ವೀಸ್ ರಸ್ತೆಗಳಲ್ಲಿ ವಾಟರ್ ಲಾಗಿಂಗ್ ಸಮಸ್ಯೆ ಕಂಡು ಬಂತು. ಬಿದ್ದ ಮಳೆ ನೀರು ಸರಾಗವಾಗಿ ಹರಿಯದೇ ಸವಾರರಿಗೆ ಕಿರಿ ಕಿರಿ ಉಂಟು ಮಾಡಿತು.
ಇಂದು ಎಲ್ಲೆಲ್ಲಿ ಎಷ್ಟು ಮಳೆ ದಾಖಲಾಗಿದೆ?
ಸಂಜೆ 04 ಗಂಟೆವರೆಗೆ ನಗರದಲ್ಲಿ ಚಾಮರಾಜಪೇಟೆಯಲ್ಲಿ ಅತ್ಯಧಿಕ ಮಳೆ ಆಗಿದೆ. ಚಾಮರಾಜಪೇಟೆಯಲ್ಲಿ 20 ಮಿಲಿ ಮೀಟರ್, ಮಾರತ್ತಹಳ್ಳಿ 19 ಮಿ.ಮೀ., ಎಚ್‌ಎಎಲ್ ವಿಮಾನ ನಿಲ್ದಾಣ 18.5 ಮಿ.ಮೀ., ಕೋರಮಂಗಲ 18ಮಿ.ಮೀ., ವಿವಿಪುರಂ 18 ಮಿ.ಮೀ., ನಾಗಪುರ 16.5 ಮಿ.ಮೀ., ಕಾಟನ್‌ಪೇಟೆ 16ಮಿ.ಮೀ., ಬಸವೇಶ್ವರ ನಗರ 15ಮಿ.ಮೀ., ಹಂಪಿನಗರ 15ಮಿ.ಮೀ., ಹೆರೋಹಳ್ಳಿ 14 ಮಿ.ಮೀ., ಪೀಣ್ಯ ಕೈಗಾರಿಕೆ ಪ್ರದೇಶ 14.5 ಮಿ.ಮೀ., ಪುಲಕೇಶಿನಗರ 13 ಮಿ.ಮೀ., ಎಚ್‌ಎಸ್ ಆರ್ ಬಡಾವಣೆ 13.5ಮಿ.ಮೀ. ಮಳೆ ದಾಖಲಾಗಿದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಳೆ ವರದಿಯು ತಿಳಿಸಿದೆ.
ಸೆಪ್ಟಂಬರ್ 4ರವರೆಗೂ ನಗರದಲ್ಲಿ ವ್ಯಾಪಕ ಮಳೆ ಮುಂದುವರಿಯಲಿದೆ. ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾದರೆ, ಮತ್ತೆ ಕೆಲವು ಕಡೆಗಳಲ್ಲಿ ಜೋರು ಮಳೆ ಅಬ್ಬರಿಸಲಿದೆ. ನಿತ್ಯ ಮಧ್ಯಾಹ್ನದ ನಂತರ ಮಳೆ ಬರಬಹುದು. ಮಬ್ಬು ವಾತಾವರಣ ಜೊತೆಗೆ ತೇವಾಂಶ ಭರಿತ ಗಾಳೀ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications