ಬೆಂಗಳೂರು ಮಳೆ ಅವಾಂತರ: ನೀರಿನಲ್ಲಿ ಮುಳುಗಿದ ಬೈಕ್ - ಸವಾರ, ಮುಂದೇನಾಯ್ತು
ಬೆಂಗಳೂರಲ್ಲಿ ಮಳೆ ನಿಂತರೂ ಮಳೆ ಅವಾಂತರ ನಿಂತಿಲ್ಲ. ಬೆಂಗಳೂರಲ್ಲಿ ಕಾಮಗಾರಿಗಳು ನಡೆಯುವ ಪ್ರದೇಶದಲ್ಲಿ ನೀರು ನಿಂತಿದ್ದು, ಕೃತಕ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮಳೆಯಲ್ಲಿ ವ್ಯಕ್ತಿ ಹಾಗೂ ಬೈಕ್ ಮುಳುಗಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಬೆಂಗಳೂರಿನಲ್ಲಿ ಸೋಮವಾರದಿಂದ ಸುರಿದಿರುವ ಮಳೆ ಸೃಷ್ಟಿಸುವ ಅನಾಹುತಗಳು ಒಂದೆರಡಲ್ಲ. ಮೊದಲ ಎರಡು ದಿನ ಸುರಿದ ಸಾಮಾನ್ಯ ಮಳೆಗೆ ಬೆಂಗಳೂರಲ್ಲಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಗುರುವಾರದಿಂದ ಬೆಂಗಳೂರಲ್ಲಿ ಮಳೆ ತುಸು ಬಿಡುವು ಕೊಟ್ಟಿರುವುದೇನೋ ನಿಜ. ಆದರೆ, ಮೂರು ದಿನದ ಬಿಟ್ಟು ಬಿಟ್ಟು ಸುರಿದಿರುವ ಮಳೆಗೆ ಬೆಂಗಳೂರು ಅಕ್ಷರಶಃ ನಲುಗಿದೆ. ಮಹದೇವಪುರ ಹಾಗೂ ಸರ್ಜಾಪುರ, ಯಲಹಂಕದ ಕೆಲವು ಭಾಗಗಳಂತೂ ದ್ವೀಪದಂತೆ ಬದಲಾಗಿವೆ.

ನೀರಿನಲ್ಲಿ ಮುಳುಗಿದ ಬೈಕ್: ಇನ್ನು ಮಹದೇವಪುರದಲ್ಲಿ ಭಾರೀ ಮಳೆಯಿಂದಾಗಿ ಬೈಕ್‌ವೊಂದು ನೀರಿನಲ್ಲಿ ಮುಳುಗಿದೆ. ಬೈಕ್ ಸವಾರ ಅಲ್ಪದರಲ್ಲೇ ನೀರಿನಲ್ಲಿ ಮುಳುಗುವುದರಿಂದ ತಪ್ಪಿಸಿಕೊಂಡಿದ್ದಾನೆ. ಬೈಕ್ ಸವಾರ ಹಾಗೂ ಸ್ಥಳೀಯರು ನೀರಿನಲ್ಲಿ ಮುಳುಗಿರುವ ಬೈಕ್ ಅನ್ನು ಮೇಲಕ್ಕೆ ಎತ್ತುವುದಕ್ಕೆ ಹರಸಾಹಸ ಪಟ್ಟಿರುವ ದೃಶ್ಯದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ನೀರಿನಲ್ಲಿ ಮುಳುಗಿದ ಬೈಕ್ ಹೊರತೆಗೆಯಲು ಆ ವ್ಯಕ್ತಿ ನೀರಿನಲ್ಲಿ ಮುಳುಗಿ ಹಗ್ಗಕಟ್ಟಿದ್ದಾನೆ. ಆ ಮೇಲೆ ಸ್ಥಳೀಯರ ನೆರವಿನಿಂದ ಬೈಕ್ ಮೇಲಕ್ಕೆ ಎತ್ತಲಾಗಿದೆ.
ಪಾರ್ಟ್ ಟೈಂ ಬೆಂಗಳೂರು ಅಭಿವೃದ್ಧಿ ಮಂತ್ರಿ: ಮಹಾದೇವಪುರದಲ್ಲಿ ನೀರಿನಲ್ಲಿ ಮುಳುಗಿರುವ ಬೈಕ್ ಎತ್ತುತ್ತಿರುವ ದೃಶ್ಯ ವೈರಲ್ ಆಗಿದೆ. ಇದೀಗ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು,ಪಾರ್ಟ್ ಟೈಂ ಬೆಂಗಳೂರು ಅಭಿವೃದ್ಧಿ ಮಂತ್ರಿ ಡಿ.ಕೆ ಶಿವಕುಮಾರ್ ಅವರ ರಸ್ತೆಗುಂಡಿ ಮುಚ್ಚಿಸುವ ಕೆಲಸ ಬೆಂಗಳೂರಿನಲ್ಲಿ ಒಂದೇ ಮಳೆಗೆ ಬಯಲಾಗಿದೆ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಹೇಗೆ ಅಧೋಗತಿ ತಲುಪಿದೆ ಎನ್ನುವುದಕ್ಕೆ ಮಹದೇವಪುರದಲ್ಲಿ ನೀರಿನಲ್ಲಿ ಮುಳುಗಿರುವ ಬೈಕ್ ಎತ್ತುತ್ತಿರುವುದೇ ಸಾಕ್ಷಿ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ರಸ್ತೆಗುಂಡಿ ಮುಚ್ಚುಲು ಅಧಿಕಾರಿಗಳಿಗೆ ಆದೇಶ ಕೊಟ್ಟರೆ ಸಾಕೇ. ಆದೇಶ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಒಂದೆರಡು ಫೋಟೋ, ವಿಡಿಯೋ ಹಾಕಿಬಿಟ್ಟರೆ ರಸ್ತೆ ಗುಂಡಿ ಸಮಸ್ಯೆ ಬಗೆಹರಿದು ಬಿಡುತ್ತಾ ಅಂತ ಪ್ರಶ್ನೆ ಮಾಡಿದ್ದಾರೆ.
ಜವಾಬ್ದಾರಿ ಸ್ಥಾನದಲ್ಲಿ ಇರುವ ಸಚಿವರು ರಸ್ತೆ ಗುಂಡಿ ಮುಚ್ಚುವ ಕೆಲಸ ಸರಿಯಾಗಿ ಆಗಿದೆಯೋ ಇಲ್ಲವೋ ಎನ್ನುವುದನ್ನು ಸ್ಥಳಕ್ಕೆ ಭೇಟಿ ನೀಡಿ ನೋಡಬೇಕು. ಅದರ ಮೇಲ್ವಿಚಾರಣೆ ಮಾಡಬೇಕು. ಅದನ್ನು ಬಿಟ್ಟು ನಾಮಕಾವಸ್ತೆ ಸುಮ್ಮನೆ ಆದೇಶ ನೀಡಿ, ವಾರಗಟ್ಟಲೆ ವಿದೇಶ ಪ್ರವಾಸಕ್ಕೆ ಹೊರಟುಬಿಟ್ಟರೆ, ಇಲ್ಲಿ ರಸ್ತೆಗುಂಡಿ ಸಮಸ್ಯೆ ಹೇಗೆ ಬಗೆಹರಿಯುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಪಾರ್ಟ್ ಟೈಂ ಬೆಂಗಳೂರು ಅಭಿವೃದ್ಧಿ ಮಂತ್ರಿ @DKShivakumar ಅವರ ರಸ್ತೆಗುಂಡಿ ಮುಚ್ಚಿಸುವ ಮಹತ್ಕಾರ್ಯದ ಕಾರ್ಯವೈಖರಿ ಒಂದೇ ಮಳೆಗೆ ಬಟಾ ಬಯಲಾಗಿದೆ.
— R. Ashoka (@RAshokaBJP) October 17, 2024
ಮಹಾದೇವಪುರದಲ್ಲಿ ನೀರಿನಲ್ಲಿ ಮುಳುಗಿರುವ ಬೈಕ್ ಎತ್ತುತ್ತಿರುವ ಈ ದೃಶ್ಯ, @INCKarnataka ಸರ್ಕಾರದಲ್ಲಿ ಬೆಂಗಳೂರಿನ ಪರಿಸ್ಥಿತಿ ಯಾವ ಅಧೋಗತಿಗೆ ತಲುಪಿದೆ ಎನ್ನುವುದಕ್ಕೆ ಕನ್ನಡಿ… pic.twitter.com/gUcbUAaF4b
ಬೀದಿ ನಾಟಕ ಬಿಡ್ರಿ: ಬೀದಿ ನಾಟಕ ಬಿಡ್ರಿ ಎಂದು ಆರ್. ಅಶೋಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಬೀದಿನಾಟಕ ಮಾಡುತ್ತೀರಲ್ಲ. ರಾಜ್ಯದ ಜಿಎಸ್ ಡಿಪಿಗೆ ಶೇಕಡ 35-40ರಷ್ಟು ಕೊಡುಗೆ ನೀಡುವ ಬೆಂಗಳೂರಿನ ಜನತೆಗೆ ಕನಿಷ್ಠ ಗುಂಡಿ ಮುಕ್ತ ರಸ್ತೆಯನ್ನಾದರೂ ಕೊಡಬೇಕಲ್ಲವೇ ಎಂದು ಅವರು ಕೇಳಿದ್ದಾರೆ.
ವಿರೋಧ ಪಕ್ಷಗಳು ಟೀಕಿಸಿದರೆ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದರೆ, ಬೆಂಗಳೂರಿನ ಮರ್ಯಾದೆ ತೆಗೆಯಬೇಡಿ ಎಂದು ಜವಾಬ್ದಾರಿಯಿಂದ ಜಾರಿಕೊಳ್ಳುವ ಪ್ರಯತ್ನ ಮಾಡ್ತೀರಿ. ಬೆಂಗಳೂರಿನ ಜನರಿಗೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದ್ದರೂ, ಸಮಸ್ಯೆ ಆಗಿದ್ದರೂ ವಿರೋಧ ಪಕ್ಷಗಳು ಸುಮ್ಮನೆ ಇರಬೇಕಾ ಅಥವಾ ನಿಮಗೆ ಬಹುಪರಾಕ್ ಹೇಳಬೇಕಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಇನ್ನಾದರೂ ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಈ ತೇಪೆ ಹಾಕುವ ಕೆಲಸ ನಿಲ್ಲಿಸಿ. ಹೊಸದಾಗಿ ಗುಣಮಟ್ಟದ ರಸ್ತೆ ನಿರ್ಮಿಸುವ ಮೂಲಕ ಬೆಂಗಳೂರಿನ ಜನತೆ ಕಟ್ಟುವ ತೆರಿಗೆಗೆ ಋಣ ತೀರಿಸಿ ಎಂದು ಅಶೋಕ್ ಚಾಟಿ ಬೀಸಿದ್ದಾರೆ.












Click it and Unblock the Notifications