ಬೆಂಗಳೂರಿನಲ್ಲಿ ಮಳೆ ಸುರಿದರೆ ಈ 209 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ!
ಬೆಂಗಳೂರು, ಆಗಸ್ಟ್ 11: ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಮಳೆ ಕಾಲದಲ್ಲಿ ಏನೆಲ್ಲಾ ಅವಾಂತರಗಳ ಸೃಷ್ಟಿಯಾಗುತ್ತವೆ ಎಂಬುದನ್ನು ಪ್ರತಿವರ್ಷ ಬೆಂಗಳೂರಿಗರು ನೋಡಿರುತ್ತಾರೆ. ಒಂದೇ ಒಂದು ಸಣ್ಣ ಮಳೆಯಾದರೆ ಸಾಕು ರಾಜಧಾನಿಯಲ್ಲಿ ಎಂಥಾ ಪರಿಸ್ಥಿತಿ ಎದುರಾಗುತ್ತದೆ ಎಂಬುದನ್ನು ಈ ಹಿಂದೆ ಜನರು ಅನುಭವಿಸಿದ್ದಾರೆ. ಬಿಬಿಎಂಪಿಯ ನಿರ್ಲಕ್ಷ್ಯ ಧೋರಣೆಯಿಂದ ಈ ಬಾರಿಯೂ ಅದೇ ಪರಿಸ್ಥಿತಿ ಮುಂದುವರಿಯುವ ಆತಂಕವಿದೆ.
ಒಂದು ಬಾರಿ ಸಣ್ಣದಾಗಿ ಮಳೆ ಸುರಿದರೆ ಸಾಕು ರಾಜಧಾನಿ ರಸ್ತೆಗಳು ನೀರಿನಿಂದ ತುಂಬಿ ಹೋಗುತ್ತವೆ. ಜಲಾವೃತಗೊಂಡ ರಸ್ತೆಗಳಲ್ಲಿ ಸಾರ್ವಜನಿಕರು ಮತ್ತು ವಾಹನಗಳು ಸಂಚರಿಸುವುದಕ್ಕೆ ವ್ಯಥೆ ಪಡುವಂತಾ ಸನ್ನಿವೇಶ ಇಂದಿಗೂ ಇದೆ. ಈ ನಿಟ್ಟಿನಲ್ಲಿ ಅಪಾಯಕಾರಿ ವಲಯಗಳನ್ನು ಗುರುತು ಮಾಡಿಕೊಳ್ಳಲಾಗಿದೆ.
ರಾಜ್ಯದ ಕಂದಾಯ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ಸೋಮವಾರ ಮಹತ್ವದ ಸಭೆ ನಡೆಸಲಾಯಿತು. ಈ ವೇಳೆ ನಗರದಲ್ಲಿ 209 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿಕೊಳ್ಳಲಾಗಿದೆ. ಈ ಪೈಕಿ 58 ಅತಿಸೂಕ್ಷ್ಮ ಪ್ರದೇಶಗಳು ಹಾಗೂ 151 ಮಧ್ಯಮ ಪ್ರಮಾಣದ ಸೂಕ್ಷ್ಮ ಪ್ರದೇಶಗಳು ಎಂದು ಹೇಳಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಚರಂಡಿ ಕಾಮಗಾರಿ ಪರಿಶೀಲನೆ:
ಬೆಂಗಳೂರಿನಲ್ಲಿ ಮುಚ್ಚಿ ಹೋಗಿರುವ ಚರಂಡಿಗಳು ಮತ್ತು ಮಳೆ ನೀರು ಹರಿಯುವ ಚರಂಡಿಗಳ ಮರುಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ಜಲಾವೃತ್ತಗೊಳ್ಳುವ ರಸ್ತೆಗಳ ಬಗ್ಗೆ ಹೆಚ್ಚು ಲಕ್ಷ್ಯ ವಹಿಸುವುದು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ನೀರು ನಿಂತುಕೊಳ್ಳುವ ಪ್ರದೇಶವನ್ನು ಗುರುತಿಸಿಕೊಂಡು ಸೂಕ್ತ ರೀತಿಯಲ್ಲಿ ಕ್ರಮ ತೆಗದುಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಆರ್ ಅಶೋಕ್ ಸೂಚನೆ ನೀಡಿದ್ದಾರೆ.
ವಲಯವಾರು ಸೂಕ್ಷ್ಮ ಪ್ರದೇಶಗಳು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಪ್ರಕಾರ, "ಪೂರ್ವ ವಲಯದಲ್ಲಿ ಅತಿಹೆಚ್ಚು ಸೂಕ್ಷ್ಮ ವಲಯಗಳನ್ನು ಗುರುತಿಸಲಾಗಿದೆ. ಪೂರ್ವ ವಲಯವೊಂದರಲ್ಲೇ 38 ಸೂಕ್ಷ್ಮ ಪ್ರದೇಶಗಳಿದ್ದು, ದಾಸರಹಳ್ಳಿ 37 ಮತ್ತು ರಾಜರಾಜೇಶ್ವರಿ ನಗರ ವಲಯದಲ್ಲಿ 32 ಸೂಕ್ಷ್ಮ ಪ್ರದೇಶಗಳಿವೆ ಎಂದು ತಿಳಿದು ಬಂದಿದೆ. ಬಿಬಿಎಂಪಿ ವಾರ್ಡ್ ಅಧಿಕಾರಿಗಳು ತಮ್ಮ ತಮ್ಮ ವಾರ್ಡ್ ಮಟ್ಟದಲ್ಲಿ ರಸ್ತೆಗಳು, ಒಳಚರಂಡಿ ವ್ಯವಸ್ಥೆ ಹಾಗೂ ನೀರು ನಿಲ್ಲುವ ಪ್ರದೇಶಗಳ ಮೇಲೆ ಹೆಚ್ಚು ಲಕ್ಷ್ಯ ವಹಿಸಬೇಕು. ಅಲ್ಲದೇ ಸಮಸ್ಯೆ ನಿವಾರಿಸುವುದಕ್ಕೆ ಸೂಕ್ತ ರೀತಿಯಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು," ಎಂದು ಬಿಬಿಎಂಪಿ ಮುಖ್ಯಸ್ಥ ಗೌರವ್ ಗುಪ್ತಾ ಹೇಳಿದ್ದಾರೆ.
ವಲಯವಾರು ಸೂಕ್ಷ್ಮ ಪ್ರದೇಶಗಳ ಪಟ್ಟಿ:
ವಲಯ - ಅತಿಸೂಕ್ಷ್ಮ ಪ್ರದೇಶ - ಮಧ್ಯಮ ಸೂಕ್ಷ್ಮ ಪ್ರದೇಶ - ಒಟ್ಟು ಸೂಕ್ಷ್ಮ ಪ್ರದೇಶಗಳ ಸಂಖ್ಯೆ
ದಕ್ಷಿಣ - 5 - 15 - 20
ಪೂರ್ವ - 5 - 33 - 38
ಪಶ್ಚಿಮ - 3 - 7 - 10
ಮಹದೇವಪುರ - 10 - 19 - 29
ಬೊಮ್ಮನಹಳ್ಳಿ - 4 - 7 - 11
ಆರ್ ಆರ್ ನಗರ - 11 - 21 - 32
ಯಲಹಂಕ - 12 - 7 - 19
ದಾಸರಹಳ್ಳಿ - 8 - 29 - 37
ಕೇಂದ್ರ - 13 - 00 - 13
ಮಾನ್ಸೂನ್ ಡ್ಯೂಟಿ:
ಬೆಂಗಳೂರಿನಲ್ಲಿ ಮುಂಗಾರು ಮಳೆಯಿಂದ ಸೃಷ್ಟಿಯಾಗುವ ಸಮಸ್ಯೆಗಳ ನಿವಾರಣೆ ಮತ್ತು ನಿರ್ವಹಣೆಗಾಗಿ ಕಾರ್ಯ ಪಡೆಯನ್ನು ರಚಿಸಲಾಗಿದೆ. ಪ್ರವಾಹ ಪೀಡಿತ ಮತ್ತು ನೀರು ನಿಲ್ಲುವ ಸ್ಥಳಗಳಲ್ಲಿ ಈ ಕಾರ್ಯಪಡೆ ತಂಡಗಳು ನಿರಂತರವಾಗಿ ಕಾರ್ಯ ನಿರ್ವಹಿಸಲಿವೆ. ಎಲ್ಲ ಅಧಿಕಾರಿಗಳು ಕ್ಷೇತ್ರಗಳ ವ್ಯಾಪ್ತಿಯಲ್ಲೇ ಕಾರ್ಯ ನಿರ್ವಹಿಸಲಿದ್ದು, ಬೆಂಗಳೂರಿಗರಿಗೆ ಅಗತ್ಯ ಮಾಹಿತಿ ಮತ್ತು ಮುನ್ನೆಚ್ಚರಿಕೆಯನ್ನು ಸೂಕ್ತ ಸಮಯದಲ್ಲಿ ನೀಡುವುದಕ್ಕೆ ಸೂಚಿಸಲಾಗಿದೆ.
ಮಳೆಗಾಲದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಜೀವಕ್ಕೆ ಯಾವುದೇ ಅಪಾಯವಾಗಬಾರದು ಎಂಬ ಉದ್ದೇಶದಿಂದ ಅಸ್ಥಿರಗೊಂಡ ಮರಗಳನ್ನು ಕಡಿದು ಹಾಕುವಂತೆ ಸೂಚಿಸಲಾಗಿದೆ. "ಮಳೆಗಾಲದಲ್ಲಿ ರಸ್ತೆಗಳ ಮಧ್ಯೆ ನೀರು ನಿಂತುಕೊಳ್ಳುವಂತಾ ಸಮಸ್ಯೆಗಳ ನಿರ್ವಹಣೆಗೆ ತಂಡಗಳನ್ನು ರಚಿಸಲಾಗಿದೆ. ಒಂದು ವೇಳೆ ರಸ್ತೆಗಳಲ್ಲೇ ನೀರು ನಿಂತುಕೊಳ್ಳುವಂತಾ ಪರಿಸ್ಥಿತಿ ಸೃಷ್ಟಿಯಾದರೆ ರಸ್ತೆ ನೀರು ತೆಗೆಯುವುದಕ್ಕೆ ಪಂಪ್ ಅನ್ನು ಬಳಸಲಾಗುತ್ತದೆ. ಇದರ ಜೊತೆಗೆ ಮಳೆಗಾಲದಲ್ಲಿ ಮರಗಳ ಧರೆಗುರುಳುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ," ಎಂದು ಗೌರವ್ ಗುಪ್ತಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಳೆ ನಿರೀಕ್ಷೆ:
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ನಿರೀಕ್ಷೆ ಇದೆ. 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್‌ಎಎಲ್‌ನಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 31.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ 21.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.












Click it and Unblock the Notifications