Bengaluru- Pune Expressway: 700 ಕಿಮೀ ಮೆಗಾ ಯೋಜನೆ- ಎಷ್ಟು ವೆಚ್ಚ, ಎಷ್ಟು ಸಮಯ ಉಳಿತಾಯ? ಮಹತ್ವದ ಮಾಹಿತಿ, ಅಂಕಿಅಂಶ
ಬೆಂಗಳೂರು, ಜುಲೈ 25: ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇಗಾಗಿ ಕರ್ನಾಟಕದಲ್ಲಿನ 383 ಎಕರೆ ಅರಣ್ಯ ಭೂಮಿ ಸೇರಿದಂತೆ ಸುಮಾರು 20,000 ಎಕರೆ ಹಸಿರು ಹೊಲಗಳ ಅಗತ್ಯವಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೇಳಿದೆ.
719.26 ಕಿ.ಮೀ ಉದ್ದದ ಟೋಲ್ ರಸ್ತೆಯನ್ನು ಆರು ಪಥಗಳಾಗಿ ಅಭಿವೃದ್ಧಿಪಡಿಸಲಾಗುವುದು. ಎಂಟು ಪಥದ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲು ಹೆಚ್ಚುವರಿ ಸ್ಥಳಾವಕಾಶವಿದೆ ಎಂದು ಎನ್‌ಎಚ್‌ಎಐ ಮಾಹಿತಿ ನೀಡಿದೆ.

ಇದು ಕರ್ನಾಟಕದ ಒಂಬತ್ತು ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, 12,355 ಎಕರೆಗಳಷ್ಟು ಜಾಗ ಬೇಕಾಗುತ್ತದೆ. ಮಹಾರಾಷ್ಟ್ರದ ಮೂರು ಜಿಲ್ಲೆಗಳನ್ನು ಒಳಗೊಳ್ಳಲಿದ್ದು, 7,166 ಎಕರೆಗಳಷ್ಟು ಜಾಗ ಅವಶ್ಯಕತೆ ಇದೆ ಎಂದು ಮಾಹಿತಿಯನ್ನು ಎನ್‌ಎಚ್‌ಎಐ ನೀಡಿದೆ.
ಯೋಜನೆಯ ಪರಿಸರ ಮೌಲ್ಯಮಾಪನ (ಇಐಎ) ಇನ್ನೂ ಅಂತಿಮಗೊಂಡಿಲ್ಲ. ಆದರೆ ಎನ್‌ಎಚ್‌ಎಐ ಅಧಿಕಾರಿಗಳು ಈ ಯೋಜನೆಗೆ 25,000 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಅಂದಾಜಿಸಿದ್ದಾರೆ. ಅದರಲ್ಲಿ 60 ರಷ್ಟು ಮರಗಳು ಕರ್ನಾಟಕದಲ್ಲಿವೆ ಎಂದು ತಿಳಿಸಿದ್ದಾರೆ.
ಹೆದ್ದಾರಿಯು ಎರಡೂ ರಾಜ್ಯಗಳಲ್ಲಿ ಯಾವುದೇ ಸಂರಕ್ಷಿತ ಪ್ರದೇಶ ಅಥವಾ ಅಭಯಾರಣ್ಯದ ಮೂಲಕ ಹಾದು ಹೋಗುವುದಿಲ್ಲ. ಆದರೆ, ಮಹಾರಾಷ್ಟ್ರದ ಕೊಯ್ನಾ ವನ್ಯಜೀವಿ ಅಭಯಾರಣ್ಯದಿಂದ ಕೇವಲ 12 ಕಿಮೀ ದೂರದಲ್ಲಿ ಎಕ್ಸ್‌ಪ್ರೆಸ್ ಹಾದುಹೋಗಲಿದೆ.

ಕರ್ನಾಟಕದಲ್ಲಿ 19 ನದಿಗಳು ಮತ್ತು 53 ಕಾಲುವೆಗಳು ಸೇರಿದಂತೆ 444 ಜಲಮೂಲಗಳ ಮೂಲಕ ಈ ಹೆದ್ದಾರಿ ನಿರ್ಮಾಣಗೊಳ್ಳಲಿದೆ. ಮಹಾರಾಷ್ಟ್ರದಲ್ಲಿ 126 ಜಲಮೂಲಗಳನ್ನು ಒಳಗೊಳ್ಳಲಿದೆ. ಅದರಲ್ಲಿ 9 ನದಿಗಳು ಮತ್ತು 36 ಕಾಲುವೆಗಳು ಸೇರಿವೆ. ಹೆದ್ದಾರಿ ಅಧಿಕಾರಿಗಳು ಹಾನಿಯನ್ನು ತಗ್ಗಿಸಲು ನೂರಾರು ಸೇತುವೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ಎಕ್ಸ್‌ಪ್ರೆಸ್‌ವೇಯು ಹುಲಿಕುಂಟೆ ಬಳಿ ( ಡೊಬ್ಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ) ಪ್ರಾರಂಭವಾಗಿ ಮಹಾರಾಷ್ಟ್ರದ ಶಿವರೆ ಬಳಿ ಕೊನೆಗೊಳ್ಳುತ್ತದೆ.
'ಹೊಸ ಯೋಜನೆಯು ಪ್ರವೇಶ ನಿಯಂತ್ರಿತವಾಗಿದೆ. ಇದರಿಂದ ಎರಡೂ ರಾಜ್ಯಗಳು ಅಭಿವೃದ್ಧಿ ಪ್ರಯೋಜನಗಳನ್ನು ಪಡೆಯಲಿವೆ. ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ' ಎಂದು ಎನ್‌ಎಚ್‌ಎಐ ಹೇಳಿದೆ. ಈ ವಿಚಾರವನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.

ಈ ಯೋಜನೆಗೆ 55,072.54 ಕೋಟಿ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ. ಅಧಿಕಾರಿಗಳು 2.5 ವರ್ಷಗಳ ನಿರ್ಮಾಣ ಅವಧಿಯನ್ನು ಅಂದಾಜಿಸಿದ್ದಾರೆ. ಪರಿಸರ ಮತ್ತು ಅರಣ್ಯ ಅನುಮತಿ ಪಡೆದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ಎರಡು ನಗರಗಳ ನಡುವಿನ ಅಂತರವನ್ನು ಸುಮಾರು 95 ಕಿ.ಮೀಗಳಷ್ಟು ಕಡಿಮೆ ಮಾಡುತ್ತದೆ. ಪ್ರಸ್ತುತ ಬೆಂಗಳೂರಿನಿಂದ ಪುಣೆಗೆ ತೆರಳಲು ಸುಮಾರು 15 ಗಂಟೆಗಳಷ್ಟು ಸಮಯ ಬೇಕಿದೆ. ಆದರೆ, ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ನಂತರ 7 ಗಂಟೆಗಳು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.
ಈ ಎಕ್ಸ್‌ಪ್ರೆಸ್‌ವೇಯು ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುತ್ತದೆ. ಎಕ್ಸ್‌ಪ್ರೆಸ್‌ವೇಯನ್ನು 2028 ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ.

ಇದು ಮಹಾರಾಷ್ಟ್ರದ ಪುಣೆ, ಸತಾರಾ, ಸಾಂಗ್ಲಿ ಜಿಲ್ಲೆಗಳಲ್ಲಿ ಹಾದು ಹೋಗುತ್ತದೆ. ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುತ್ತದೆ.












Click it and Unblock the Notifications