Bengaluru Property: ಬೆಂಗಳೂರಿನ ಈ ಆಸ್ತಿಗಳ ಪರಿಶೀಲನೆಗೆ ಟಾಸ್ಕ್ ಫೋರ್ಸ್ ರಚನೆ: ಜಿಬಿಎ
ಬೆಂಗಳೂರು: ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿರುವವರು ಹಾಗೂ ಕೆಲವು ಆಸ್ತಿದಾರರಿಗೆ ಶಾಕ್ ಕೊಡುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ. ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಪ್ರಮುಖ ಅಪ್ಡೇಟ್ಸ್ ಕೊಟ್ಟಿದ್ದಾರೆ.
ಬೆಂಗಳೂರಿನ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ರಸ್ತೆ ಅಗಲೀಕರಣ ಹಾಗೂ ಅನಧಿಕೃತ ಕಟ್ಟಡಗಳ ಮೇಲ್ವಿಚಾರಣೆಗೆ ಪ್ರತ್ಯೇಕ ಟಾಸ್ಕ್ ಫೋರ್ಸ್‌ಗಳನ್ನು ರಚಿಸಲಾಗುವುದು ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿರುವ ಕಾಮಗಾರಿಗಳ ಅನುಷ್ಠಾನ ಸಂದರ್ಭದಲ್ಲಿ ಆಗಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಭೆಯನ್ನು ನಡೆಸಲಾಗಿದ್ದು, ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 5 ನಗರ ಪಾಲಿಕೆಗಳಲ್ಲಿ ರಸ್ತೆ ಅಗಲೀಕರಣ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಉದ್ದೇಶದಿಂದ ಮೇಲ್ವಿಚಾರಣೆಗಾಗಿ ಪ್ರತ್ಯೇಕ ಟಾಸ್ಕ್ ಫೋರ್ಸ್‌ಗಳನ್ನು ರಚಿಸಲು ನಿರ್ಧರಿಸಲಾಗಿದೆ. ಅಲ್ಲದೇ ಈ ನಿಟ್ಟಿನಲ್ಲಿ ಆಯಾ ನಗರ ಪಾಲಿಕೆಗಳಲ್ಲಿ ಕೂಡಲೇ ಟಾಸ್ಕ್ ಫೋರ್ಸ್ ರಚಿಸಿ, ರಸ್ತೆ ಅಗಲೀಕರಣ ಹಾಗೂ ಅನಧಿಕೃತ ಕಟ್ಟಡಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ರೈಲ್ವೆ ಕಾಮಗಾರಿಗಳ ಪಟ್ಟಿ ಸಲ್ಲಿಸಲು ಸೂಚನೆ
ಇನ್ನು ಬೆಂಗಳೂರು ನಗರದಲ್ಲಿ ರೈಲ್ವೆ ಇಲಾಖೆ ವತಿಯಿಂದ ಕೈಗೆತ್ತಿಕೊಂಡಿರುವ ಎಲ್ಲಾ ಕಾಮಗಾರಿಗಳ ವಿವರ ಹಾಗೂ ಪ್ರಗತಿ ಪರಿಶೀಲನೆಗಾಗಿ ಸಮಗ್ರ ಪಟ್ಟಿ ಸಿದ್ಧಪಡಿಸಿ ವರದಿ ಸಲ್ಲಿಸಬೇಕು. ನಂತರ ಜಿಬಿಎ ಹಾಗೂ ರೈಲ್ವೆ ಇಲಾಖೆಯೊಂದಿಗೆ ಸಭೆ ನಡೆಸಿ ಕಾಮಗಾರಿಗಳಿಗೆ ವೇಗ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸೂಚನೆ ನೀಡಿದ್ದಾರೆ.
ಕೆ-100 ರಾಜಕಾಲುವೆಗೆ ಕೊಳಚೆ ನೀರು ಬಾರದಂತೆ ಕ್ರಮ
ಬೆಂಗಳೂರಿನ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದಾಗಿರುವ ಕೆ-100 ರಾಜಕಾಲುವೆ ಯೋಜನೆಗೆ ಸಂಬಂಧಿಸಿದಂತೆಯೂ ಸೂಚನೆ ನೀಡಿದ್ದಾರೆ. ಈ ಕಾಲುವೆಗೆ ಕೊಳಚೆ ನೀರು ಹರಿದು ಬರದಂತೆ ಸಂಪೂರ್ಣ ತಡೆಯಬೇಕು. ಪ್ರಸ್ತುತ ಎಲ್ಲೆಲ್ಲಿ ಕೊಳಚೆ ನೀರು ಸೇರುತ್ತಿದೆ ಎಂಬುದನ್ನು ಪರಿಶೀಲಿಸಿ, ಅದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಡೈಯಿಂಗ್ ಘಟಕಗಳಿಂದ ಬಣ್ಣದ ನೀರು ಹಾಗೂ ಸ್ಲಾಟರ್ ಹೌಸ್‌ಗಳಿಂದ ರಕ್ತ ಮಿಶ್ರಿತ ನೀರು ರಾಜಕಾಲುವೆಗೆ ಹರಿಯುತ್ತಿರುವ ಕುರಿತು ಸ್ಥಳ ಪರಿಶೀಲನೆ ನಡೆಸಿ, ಸಂಬಂಧಿಸಿದವರಿಗೆ ದುಪ್ಪಟ್ಟು ದಂಡ ವಿಧಿಸಿ, ಮತ್ತೆ ನೀರು ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ತಿಳಿಸಲಾಗಿದೆ.
ಹೈಡ್ರಂಟ್ ವ್ಯವಸ್ಥೆ ಕಲ್ಪಿಸಲು ಸೂಚನೆ
ಜಿಬಿಎ ವ್ಯಾಪ್ತಿಯಲ್ಲಿ ಅಗ್ನಿ ಅವಘಡಗಳ ಸಂದರ್ಭದಲ್ಲಿ ತಕ್ಷಣವೇ ಅಗ್ನಿ ಶಮನಕ್ಕೆ ಅಗತ್ಯ ನೀರು ಲಭ್ಯವಾಗುವಂತೆ ಜಲಮಂಡಳಿ ವತಿಯಿಂದ ನಗರಾದ್ಯಂತ ಹೈಡ್ರಂಟ್ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ನಗರದ ಕೆಲ ಭಾಗಗಳಲ್ಲಿ ಐದು ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ಗಳನ್ನು ಸ್ಥಾಪಿಸಲು ಕ್ರಮವಹಿಸಬೇಕು. ಜಿಬಿಎ ಯಲ್ಲಿ ಫೈರ್ ಕಂಟ್ರೋಲ್ ರೂಂ ವ್ಯವಸ್ಥೆ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
Bengaluru Property ರಸ್ತೆ ಅಗಲೀಕರಣಕ್ಕೆ ಯೋಜನೆ
ಬೆಂಗಳೂರಿನ ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಪಣತ್ತೂರು ಸಿಬಿಡಿ ರಸ್ತೆ ಭಾಗಶಃ ಪೂರ್ಣಗೊಂಡಿದ್ದು, ರೈಲ್ವೆ ಮಾರ್ಗದ ಮೇಲೆ ಹಾಗೂ ಅರಣ್ಯ ಇಲಾಖೆಯ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಬೇಕಿದ್ದು, ಯೋಜನೆ ಅನುಷ್ಠಾನ ಸೂಚನೆ ನೀಡಲಾಗಿದೆ. ಬೆಂಗಳೂರಿನ ನಾಗವಾರ ಮುಖ್ಯ ರಸ್ತೆ, ಹೊಸೂರು ರಸ್ತೆ (ಆನೆಪಾಳ್ಯ ಜಂಕ್ಷನ್) ನಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಪರಿಶೀಲಿನೆ ಮಾಡಿ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಬನಶಂಕರಿ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಾರದೊಳಗೆ ಯೋಜನೆ ಸಿದ್ಧಪಡಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ರಸ್ತೆ ಅಭಿವೃದ್ಧಿ ಮಾಡಲು ಟಾಸ್ಕ್ ಪೋರ್ಸ್ ತಂಡದ ವತಿಯಿಂದ ಇತರೆ ಸಿಡಿಪಿ ರಸ್ತೆಗಳ ಅಗಲೀಕರಣ ಕೈಗೊಳ್ಳಲು ಯೋಜನೆ ರೂಪಿಸಿಸುವಂತೆಯೂ ಸೂಚಿಸಿದರು. ಅಲ್ಲದೇ ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಜಲಮಂಡಳಿ ಹಾಗೂ ಬೆಸ್ಕಾಂ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನಂತರ ಸಂಚಾರಿ ಪೊಲೀಸ್ ವಿಭಾಗದಿಂದ ಅನುಮತಿ ಪಡೆದು, ವೈಟ್ ಟಾಪಿಂಗ್ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಸಾರ್ವಜನಿಕರು ಸುರಕ್ಷಿತವಾಗಿ ರಸ್ತೆ ದಾಟುವ ಸಲುವಾಗಿ ಸಂಚಾರಿ ಪೊಲೀಸ್ ವಿಭಾಗವು 101 ಸ್ಥಳಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಪಟ್ಟಿ ನೀಡಿದೆ. ಅದರಂತೆ ಆಯಾ ನಗರ ಪಾಲಿಕೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ಸಾಧ್ಯವಿರುವ ಸ್ಥಳಗಳಲ್ಲಿ ತಕ್ಷಣವೇ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್‌ಗೆ ಸಂಬಂಧಿಸಿದಂತೆ 103 ಕಡೆ ಬಸ್ ತಂಗುದಾಣ ಸ್ಥಳಾಂತರ ಮಾಡುವುದು. 35 ರಸ್ತೆಗಳ ಅಭಿವೃದ್ಧಿ, 137 ವಾಟರ್ ಲಾಗಿಂಗ್ ಪ್ರದೇಶಗಳ ಸಮಸ್ಯೆ ಪರಿಹಾರ, 63 ಕಡೆ ಬಸ್ ಬೇ ವ್ಯವಸ್ಥೆ, 84 ಕಡೆ ರಸ್ತೆ ಹಂಪ್‌ಗಳ ತೆರವು ಕುರಿತು ಸಂಚಾರಿ ವಿಭಾಗ ನೀಡಿರುವ ಪಟ್ಟಿಯನ್ನು ಪರಿಶೀಲನೆಗೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸೂಚನೆ ನೀಡಿದ್ದಾರೆ.












Click it and Unblock the Notifications