Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿಸದವರ ವಿರುದ್ಧ ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡ ಬೆನ್ನಲ್ಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಹಸ್ತಚಾಲಿತ ಡಿಮಾಂಡ್ ಡ್ರಾಫ್ಟ್ (ಡಿಡಿ) ಮೂಲಕ ತೆರಿಗೆ ಸ್ವೀಕರಿಸುತ್ತಿದ್ದವು. ಈ ತೆರಿಗೆ ಸ್ವೀಕಾರ ಅವಧಿಯು ಮಾರ್ಚ್ 31ರಂದು ಕೊನೆಗೊಳ್ಳಲಿದೆ. ಹೀಗಾಗಿ ನಗರ ಪಾಲಿಕೆ ಕಚೇರಿಗಳು ರಾತ್ರಿಯೂ ಕಾರ್ಯ ನಿರ್ವಹಣೆ ಮಾಡಲಿವೆ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ತಿಳಿಸಿದ್ದಾರೆ.
ಹೌದು, ಯಾವುದೇ ನಾಗರಿಕರು ಅಥವಾ ಆಸ್ತಿ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ, ಎಸ್‌ಎಎಸ್ ಆಸ್ತಿ ತೆರಿಗೆ ಐಡಿ ಹೊಂದಿರುವ ಆಸ್ತಿಗಳಿಗಾಗಿ ಕೆಳಗಿನ ಸಂದರ್ಭಗಳಲ್ಲಿ ಎಲ್ಲಾ ನಗರ ಪಾಲಿಕೆಗಳು ಹಸ್ತಚಾಲಿತ ಡಿಮಾಂಡ್ ಡ್ರಾಫ್ಟ್ (Demand Draft) ಮತ್ತು ಭಾಗಶಃ ಪಾವತಿಗಳನ್ನು ಸ್ವೀಕರಿಸಲಿವೆ. ಈ ಅವಧಿ ನಾಳೆಗೆ ಮುಕ್ತಾಯವಾಗಲಿದೆ ಎಂದರು.

ಗಮನಿಸಬೇಕಾದ ಅಂಶಗಳೆಂದರೆ ಹಿಂದಿನ ಪಾವತಿ ಆನ್‌ಲೈನ್ ಆಸ್ತಿ ತೆರಿಗೆ ವ್ಯವಸ್ಥೆಯಲ್ಲಿ ತೋರಿಸದಿದ್ದಲ್ಲಿ, ಮರು ಆನ್‌ಲೈನ್ ಪಾವತಿ ಮಾಡಿದರೆ ಈಗಾಗಲೇ ಪಾವತಿಸಿದ ಮೊತ್ತಕ್ಕೆ ಡಬಲ್ ಪಾವತಿ ಆಗುವ ಸಾಧ್ಯತೆ ಇರುತ್ತದೆ. ತಾಂತ್ರಿಕ ಕಾರಣಗಳಿಂದ ಅನ್ವಯಿಸುವ ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಸಾಧ್ಯವಾಗದಿದ್ದಲ್ಲಿ, ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳು / ಸಾರ್ವಜನಿಕ ವಲಯದ ಘಟಕಗಳು ಈ ಡಿಡಿ ಮೂಲಕ ಹಸ್ತಚಾಲಿತ ತೆರಿಗೆ ಪಾವತಿ ಮಾಡಬಹುದಾಗಿದೆ.
ರಾತ್ರಿ 10 ಗಂಟೆವರೆಗೂ ಕಚೇರಿ ತೆರದಿಡಲು ಸೂಚನೆ
ಬಾಕಿ ಇರುವ ಆಸ್ತಿ ತೆರಿಗೆ ಮಾಲೀಕರು ಸದರಿ ವ್ಯವಸ್ಥೆಯಡಿ ತೆರಿಗೆ ಪಾವತಿಸಬಹುದು. ಮಾರ್ಚ್ 31 ರಂದು ರಾತ್ರಿ 10 ಗಂಟೆಯವರೆಗೆ ಆಸ್ತಿ ತೆರಿಗೆ ಪಾವತಿಗಳನ್ನು ಸ್ವೀಕರಿಸಲು ಎಲ್ಲಾ ನಗರ ಪಾಲಿಕೆ ಕಚೇರಿಗಳು ತೆರೆದಿರಲು ಸೂಚಿಸಲಾಗಿದೆ. ಆನ್‌ಲೈನ್ ಪಾವತಿಗಳನ್ನು ನಾಳೆ ಮಂಗಳವಾರ (ಮಾ.31)ದಂದು ರಾತ್ರಿ 11:59ರವರೆಗೆ ಇಲ್ಲಿನ https://BBMPTax.karnataka.gov.in ಲಿಂಕ್ ಪಾವತಿ ಮಾಡಬಹುದಾಗಿದೆ. ನಿಗದಿತ ಸಯದೊಳಗೆ ಬಾಕಿ ತೆರಿಗೆ ಪಾವತಿಸುವ ಮುಖೇನ ದಂಡ ಹಾಗೂ ಬಡ್ಡಿಯಿಂದ ವಿನಾಯಿತಿ ಪಡೆಯಬಹುದಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾ ಮುನೀಶ್ ಮೌದ್ಗಿಲ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಪಾಲಿಕೆ ಸುಪರ್ದಿಗೆ 51 ಆಸ್ತಿ ಬಾಕಿ ತೆರಿಗೆಯ ಆಸ್ತಿಗಳು
ಬೆಂಗಳೂರು ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಸ್ವತ್ತುಗಳಿಂದ ಸಂಗ್ರಹವಾಗುವ ಆಸ್ತಿ ತೆರಿಗೆಯನ್ನು ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ, ಜನಪರ ಕಲ್ಯಾಣ ಕಾರ್ಯಕ್ರಮಗಳು ಹಾಗೂ ನಿರ್ವಹಣೆಗೆ ಬಳಸಲಾಗುತ್ತದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2025ರ ಅನ್ವಯ, ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸ್ವತ್ತುಗಳ ಮಾಲೀಕರು ಪ್ರತಿ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆಯನ್ನು ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ.
ಆಸ್ತಿ ತೆರಿಗೆ ಪಾವತಿಸದ ಪ್ರಕರಣಗಳಲ್ಲಿ, ಆಸ್ತಿ ತೆರಿಗೆ ನಿರ್ಧರಣೆ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು-2024ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಮಾಲೀಕರಿಗೆ ನೋಟಿಸ್ ನೀಡಿದರು ಆಸ್ತಿ ತೆರಿಗೆ ಪಾವತಿಸಿರಲಿಲ್ಲ. ಹೀಗಾಗಿ ಹಲವು ಆಸ್ತಿಗಳನ್ನು ಹರಾಜು ಹಾಕಲಾಗಿತ್ತು. ಆದರೆ ಹರಾಜಿನಲ್ಲಿ ಮಾರಾಟವಾದ ಆಸ್ತಿಗಳನ್ನು ಪಾಲಿಕೆ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್ ತಿಳಿಸಿದ್ದಾರೆ.












Click it and Unblock the Notifications