Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ
ಬೆಂಗಳೂರು: ರಾಜಧಾನಿಯಲ್ಲಿ ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದಂತೆ, ಇತ್ತ ವಿದ್ಯುತ್ ವ್ಯತ್ಯಯದ ಬಿಸಿಯೂ ಗ್ರಾಹಕರಿಗೆ ತಟ್ಟಲಾರಂಭಿಸಿದೆ. ನಗರದಾದ್ಯಂತ ಎಸಿ, ಫ್ಯಾನ್ ಮತ್ತು ಕೂಲರ್‌ಗಳ ಬಳಕೆ ಹೆಚ್ಚಾದ ಪರಿಣಾಮ ಬೆಸ್ಕಾಂ ಇತಿಹಾಸದಲ್ಲೇ ಹಿಂದೆಂದೂ ಕಾಣದಷ್ಟು ವಿದ್ಯುತ್ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಅತಿಯಾದ ಲೋಡ್‌ನಿಂದಾಗಿ ತಾಂತ್ರಿಕ ದೋಷಗಳು ಹೆಚ್ಚಾಗಿ, ಅಘೋಷಿತ ಪವರ್ ಕಟ್‌ಗಳಿಂದಾಗಿ ಜನರು ಹೈರಾಣಾಗಿದ್ದಾರೆ.
ನಗರದ ವಿವಿಧ ಬಡಾವಣೆಗಳಲ್ಲಿ ಇತ್ತೀಚೆಗೆ ಪದೇ ಪದೇ ವಿದ್ಯುತ್ ವ್ಯತ್ಯಯದ ಸಮಸ್ಯೆ ಕಾಡುತ್ತಿದ್ದು, ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ದಕ್ಷಿಣ ಮತ್ತು ಪೂರ್ವ ವಲಯದ ಹಲವು ಪ್ರದೇಶಗಳಲ್ಲಿ ಹಠಾತ್ ಪವರ್ ಕಟ್ ಆಗುತ್ತಿರುವ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ದೂರು ನೀಡುತ್ತಿದ್ದಾರೆ.

ನಗರದ ಕೋರಮಂಗಲ, ಗಾಂಧಿ ಬಜಾರ್, ಬಿಡಿಎಸ್ ನಗರ, ಕೆ. ನಾರಾಯಣಪುರ ಮತ್ತು ಚಿಕ್ಕಲ್ಲಸಂದ್ರ ಸೇರಿದಂತೆ ಹಲವು ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ಕಡೆಗಳಲ್ಲಿ ಕೆಲವೇ ನಿಮಿಷಗಳ ಕಾಲ ವಿದ್ಯುತ್ ಕಡಿತವಾಗುತ್ತಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ಭಾನುವಾರ ಹಲವು ಗಂಟೆಗಳ ಕಾಲ ಪವರ್ ಕಟ್ ವರದಿಯಾಗಿದೆ.
ಸಾರ್ವಜನಿಕರ ದೂರುಗಳಿಗೆ ಕೂಡಲೇ ಸ್ಪಂದಿಸಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ), ತಾಂತ್ರಿಕ ದೋಷಗಳಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದೆ. ದಕ್ಷಿಣ ಮತ್ತು ಪೂರ್ವ ಬೆಂಗಳೂರಿನ ಪೀಡಿತ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ ಚುರುಕಿನಿಂದ ಸಾಗುತ್ತಿದೆ ಎಂದು ಮಾಹಿತಿ ನೀಡಿದೆ. ಮತ್ತೊಂದೆಡೆ ಸಿಸ್ಟಮ್ ಅಪ್‌ಗ್ರೇಡ್‌ನಿಂದಾಗಿ 'ಬೆಸ್ಕಾಂ ಮಿತ್ರ' ಆಪ್ ಕೂಡ ಸ್ಥಗಿತಗೊಂಡಿರುವುದು, ಹಠಾತ್ ವಿದ್ಯುತ್ ವ್ಯತ್ಯಯಗಳು ಉಂಟಾಗಿರುವುದು ಗ್ರಾಹಕರನ್ನು ಸಂಕಷ್ಟಕ್ಕೆ ದೂಡಿದೆ. ದೂರು ನೀಡಲು 1912 ಸಹಾಯವಾಣಿಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ಹೆಚ್ಚಾಗಿದೆ.
ವಿದ್ಯುತ್ ಕಡಿತಕ್ಕೆ ಕಾರಣವೇನು?
ಬೇಸಿಗೆಯ ಬಿಸಿಲು ಏರುತ್ತಿದ್ದಂತೆ ವಿದ್ಯುತ್ ಬಳಕೆಯೂ ಹೊಸ ದಾಖಲೆ ಬರೆಯುತ್ತಿದೆ. ಬಿಸಿಲಿನ ಧಗೆಯಿಂದ ಪಾರಾಗಲು ಫ್ಯಾನ್, ಫ್ರಿಡ್ಜ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ವಿಪರೀತವಾಗಿದೆ. ಹೀಗಾಗಿ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ. ಸಾಮಾನ್ಯವಾಗಿ ನಗರದ ಗರಿಷ್ಠ ಬೇಡಿಕೆ 7,800 ಮೆಗಾವಾಟ್ ಆಸುಪಾಸಿನಲ್ಲಿರುತ್ತಿತ್ತು. ಆದರೆ ಈ ಬಾರಿ ತಾಪಮಾನ ಏರಿಕೆಯಿಂದಾಗಿ ಎಸಿ, ಫ್ಯಾನ್ ಮತ್ತು ಕೂಲರ್‌ಗಳ ಬಳಕೆ ಹೆಚ್ಚಾಗಿದ್ದು, ಬೇಡಿಕೆ ಗಣನೀಯವಾಗಿ ಏರಿದೆ.
ನಗರದ ಹಲವೆಡೆ ಹಠಾತ್ ವಿದ್ಯುತ್ ಕಡಿತವಾಗುತ್ತಿರುವುದಕ್ಕೆ ಬೆಸ್ಕಾಂ ಅಧಿಕಾರಿಗಳು ತಾಂತ್ರಿಕ ಕಾರಣಗಳನ್ನು ನೀಡಿದ್ದಾರೆ. ಲೈನ್‌ಗಳ ಮೇಲೆ ಅತಿಯಾದ ಲೋಡ್‌ನಿಂದಾಗಿ ಪದೇ ಪದೇ ಟ್ರಿಪ್ಪಿಂಗ್ ಸಮಸ್ಯೆ ಎದುರಾಗುತ್ತಿದೆ. ಟ್ರಾನ್ಸ್‌ಫಾರ್ಮರ್ ಮತ್ತು ಫೀಡರ್‌ಗಳ ಮೇಲೆ ಒತ್ತಡ ಹೆಚ್ಚಾದಾಗ, ಅನಾಹುತಗಳನ್ನು ತಪ್ಪಿಸಲು ಸುರಕ್ಷತಾ ದೃಷ್ಟಿಯಿಂದ ಲೈನ್‌ಗಳನ್ನು ಬದಲಾಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ವಿದ್ಯುತ್ ಕೊರತೆ ಇಲ್ಲ
ರಾಜ್ಯದಲ್ಲಿ ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ಬೇಡಿಕೆ ಹೆಚ್ಚಾಗಿರುವುದು ನಿಜ, ಆದರೆ ಪೂರೈಕೆಗೆ ಯಾವುದೇ ತೊಂದರೆಯಿಲ್ಲ. ಕಂಡುಬರುತ್ತಿರುವ ವ್ಯತ್ಯಯಗಳು ಕೇವಲ ತಾಂತ್ರಿಕ ಕಾರಣಗಳಿಂದಾದ ತಾತ್ಕಾಲಿಕ ಸಮಸ್ಯೆಗಳಾಗಿವೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಫೆಬ್ರವರಿಯಿಂದ ಏಪ್ರಿಲ್ ಅಂತ್ಯದವರೆಗೆ ಯಾವುದೇ 'ಯೋಜಿತ ವಿದ್ಯುತ್ ಕಡಿತ' ಮಾಡದಂತೆ ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿದೆ. ಹೀಗಾಗಿ ನಿರ್ವಹಣಾ ಕಾರ್ಯಗಳ ಹೆಸರಿನಲ್ಲಿ ದೀರ್ಘಕಾಲ ವಿದ್ಯುತ್ ಸ್ಥಗಿತಗೊಳಿಸುವುದನ್ನು ನಿಷೇಧಿಸಲಾಗಿದೆ. ಆದರೆ, ಮೇ ತಿಂಗಳಿನಲ್ಲಿ ವಿದ್ಯುತ್ ನಿರ್ವಹಣೆ ಹೇಗಿರಲಿದೆ ಎಂಬುದರ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ತಿಳಿದುಬಂದಿದೆ.












Click it and Unblock the Notifications