ನಾನೂ ಒಬ್ಬ ತಂದೆ-ಅಣ್ಣಾ... ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ: ಸಂದೇಶ ವೈರಲ್
ಬೆಂಗಳೂರು, ಡಿಸೆಂಬರ್ 13: ಇತ್ತೀಚೆಗೆ ರಾಜ್ಯದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿದೆ. ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಮರಳುವ ಮಹಿಳೆಯರಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚಾಗಿದೆ. ಸುರಕ್ಷಿತವಾಗಿ ಮನೆಗೆ ತಲುಪಲು ಸಾಧ್ಯವೆ ಎಂದು ಮಹಿಳೆಯರು ಭಯದಿಂದ ದಿನಗಳನ್ನ ಕಳೆಯುವಂತಾಗಿದೆ.
ಕೆಲಸ ಮುಗಿಸಿ ಮನೆಗೆ ತೆರಳುವಾಗ ನಡೆದುಕೊಂಡು ಹೋಗುವಾಗ ಅಥವಾ ಆಟೋ, ಟ್ಯಾಕ್ಸಿ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವ ಹಲವು ಉದಾಹರಣೆಗಳು ಕಂಡುಬರುತ್ತಿವೆ. ಇಂತಹ ಆತಂಕದ ನಡುವೆ ಬೆಂಗಳೂರಿನ ಒರ್ವ ಆಟೋ ಚಾಲಕನ ನಡೆ ಸದ್ಯ ಎಲ್ಲರ ಗಮನ ಸೆಳೆದಿದೆ. ರಾತ್ರಿ ವೇಳೆ ಯುವತಿ ಆಟೋದಲ್ಲಿ ಹೋಗುವಾಗ ಆ ಆಟೋ ಚಾಲಕನ ಸೀಟಿನ ಹಿಂದಿನ ಭಾಗದಲ್ಲಿ 'ನಾನೂ ಒಬ್ಬ ಅಣ್ಣ/ತಂದೆ. ನಿಮ್ಮ ಸುರಕ್ಷತೆಯೇ ನನಗೆ ಮುಖ್ಯ ಆರಾಮವಾಗಿ ಕುಳಿತುಕೊಳ್ಳಿ' ಎಂಬ ಬರಹವನ್ನು ಬರೆದು ಆಟೋ ಚಾಲಕರೊಬ್ಬರು ಪ್ರಯಾಣಿಕರಿಗೆ ಧೈರ್ಯ ತುಂಬಿದ್ದಾರೆ.

ಇನ್ನೂ ಆಟೋದಲ್ಲಿ ಬರೆದ ಈ ಬರಹವನ್ನು ಗಮನಿಸಿದ ಯುವತಿಯೊಬ್ಬರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾತ್ರಿ 12 ಗಂಟೆಗೆ ರಾಪಿಡೊ ಆಟೊದಲ್ಲಿ ಪ್ರಯಾಣಿಸುತ್ತಿದ್ದೆ. ಆಟೊದಲ್ಲಿ ಕುಳಿತ ತಕ್ಷಣ ಈ ಬರಹ ಓದಿದೆ. ಆಗ ನನಗೆ ನಿಜವಾಗಿಯೂ ಸುರಕ್ಷಿತ ಭಾವನೆ ಮೂಡಿತು ಎಂದು ಬರೆದುಕೊಂಡಿದ್ದಾರೆ. ಆದರೆ, ಆ ಆಟೊ ಚಾಲಕನ ಹೆಸರು ಅಥವಾ ವಿವರಗಳನ್ನು ಅವರು ಹಂಚಿಕೊಂಡಿಲ್ಲ.
ಇನ್ನೂ ಈ ಆಟೊ ಚಾಲಕನ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಇತ್ತ ಬೆಂಗಳೂರು ನಗರ ಪೊಲೀಸರುಕೇವಲ ಕಾನೂನು ಸುವ್ಯವಸ್ಥೆ ಪಾಲನೆಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿರುವ ಬೆಂಗಳೂರು ಪೊಲೀಸರು, ನಾಗರಿಕರ ಉತ್ತಮ ಕಾರ್ಯಗಳನ್ನು ಗುರುತಿಸಿ, ಅವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸವನ್ನು ಸಹ ಮಾಡುತ್ತಿದ್ದಾರೆ. ಅಂತಹ ಸಕಾರಾತ್ಮಕ ಘಟನೆಯೊಂದು ಈಗ ಮತ್ತೊಮ್ಮೆ ನಡೆದಿದೆ. ಯುವತಿಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬೆಂಗಳೂರು ಪೊಲೀಸರು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡು, ಒಂದು ಸಣ್ಣ ಸಂದೇಶ ಒಂದು ದೊಡ್ಡ ಸೂಚಕ. ಬೆಂಗಳೂರಿಗರೇ ಆತನನ್ನು ತಲುಪಲು ಸಹಕರಿಸಿ. ಆತನ ಬಗ್ಗೆ ಏನಾದರು ಮಾಹಿತಿ ಸಿಕ್ಕಲ್ಲಿ ನಮ್ಮನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.












Click it and Unblock the Notifications