ಬೆಂಗಳೂರು: ಪೊಲೀಸರ ವಿರುದ್ಧವೇ ಸಾಲು ಸಾಲು ಆರೋಪ: ಕೆಂಡವಾದ ಪ್ರತಾಪ್ ರೆಡ್ಡಿ ತನಿಖೆಗೆ ಆದೇಶ, ವಿವರ
ಬೆಂಗಳೂರು, ಏಪ್ರಿಲ್ 16:ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೇ ಆರಂಭವಾಗಿದೆ. ಚುನಾವಣೆ ಪಾರದರ್ಶಕತೆಗಾಗಿ, ಜನರ ಒಳಿತಿಗಾಗಿ ಬದ್ಧತೆಯಿಂದ ಕೆಲಸ ಮಾಡಬೇಕಾದ ಪೊಲೀಸರೇ ಇದೀಗ ಕಾರ್ಯಲೋಪದಿಂದ ಸಾಲು ಸಾಲು ಆರೋಪಗಳನ್ನು ಎದುರಿಸುವಂತಾಗಿದೆ. ತನಿಖೆಯನ್ನು ಎದುರಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಳೆದು ಒಂದು ತಿಂಗಳಿನಿಂದ ಪೊಲೀಸ್ ಕಾರ್ಯವೈಖರಿ ಇನ್ನಿತರ ಲೋಪಗಳು ಕುರಿತು ಪೊಲೀಸರ ವಿರುದ್ಧ ದೂರು ಬಂದಿವೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಫುಲ್ ಗರಂ ಆಗಿದ್ದಾರೆ. ದೂರುಗಳಿಗೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಅವರು ಆದೇಶಿಸಿದ್ದಾರೆ.

ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಪೊಲೀಸರ ವಿರುದ್ಧವೇ ದೂರು ಕೇಳಿ ಬರುತ್ತಿವೆ. ಈ ಹಿಂದಿನ ಒಂದೇ ತಿಂಗಳಲ್ಲಿ ಲಂಚ ಪಡೆಯುವುದು, ಸಾರ್ವಜನಿಕ ಜೊತೆ ಅನುಚಿತ ವರ್ತನೆ, ಒಬ್ಬರ ಹಿತಕ್ಕೆ ಕೆಲಸ ಮಾಡುವುದು, ಕರ್ತವ್ಯಲೋಪದ ಸೇರಿದಂತೆ ಇನ್ನಿತರ ಆರೋಪಗಳ ಮೇಲೆ ಹತ್ತಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ.
ಇಷ್ಟು ದೂರುಗಳ ಪೈಕಿ ಕೆಲವುಗಳು ಮೇಲೆ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲಾಗಿದೆ. ಇನ್ನು ಕೆಲವು ತನಿಖೆ ಹಂತದಲ್ಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದು ತಿಂಗಳ ಅವಧಿಯಲ್ಲಿ ಪೊಲೀಸರ ಮೇಲೆ ಬಂದ ಆರೋಪಗಳು ಇಂತಿವೆ. ಕರ್ತವ್ಯಲೋಪ, ಲಂಚಾವತಾರ, ಅನುಚಿತ ವರ್ತನೆ ಹಾಗೂ ಏಕಪಕ್ಷೀಯವಾಗಿ ಕೆಲಸ ಮಾಡ್ತಿರೋ ಆರೋಪಗಳು ಸೇರಿ ಹಲವು ದೂರುಗಳು ಬಂದಿವೆ.
ಪೊಲೀಸರ ವಿರುದ್ಧ ಮಾಜಿ ಪ್ರಧಾನಿ ಆರೋಪ: ಏನಿದು?
ರಾಜ್ಯದಲ್ಲಿ ಚುನಾವಣೆ ಚಟುವಟಿಕೆಗಳು ಆರಂಭವಾಗಿದ್ದು, ಪೊಲೀಸರು ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆರೋಪಿಸಿದ್ದಾರೆ. ಒಟ್ಟು ಮೂರು ಪೋಲೀಸರ ಮೇಲೆ ಅವರು ದೂರಿದ್ದಾರೆ.
ನಗರದ ಕಗ್ಗಲೀಪುರ, ತಲಘಟ್ಟಪುರ ಮತ್ತು ತಾವರೆಕೆರೆ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಮೇಲೆ ದೇವೇಗೌಡರು ಆರೋಪ ಮಾಡಿದ್ದಾರೆ. ಈ ಸಂಬಂಧ ಆ ಮೂರು ಅಧಿಕಾರಿಗಳ ವಿರುದ್ಧ ಅವರು ಪತ್ರ ಬರೆದಿದ್ದಾರೆ. ಅದರ ಆಧಾರದ ಮೇಲೆ ಪೊಲೀಸ್ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.

ಮಹಿಳೆ ಜತೆ ಪೊಲೀಸಪ್ಪನ ಅಸಭ್ಯ ವರ್ತನೆ: ದೂರು
ಬೆಂಗಳೂರಿನ ಸುದ್ದುಗುಂಟೆಪಾಳ್ಯ ಠಾಣೆಗೆ ಬಂದ ಮಹಿಳೆಯ ಜೊತೆಗೆ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಸ್ವಾಮಿ ಅವರು ಅನುಚಿತ ವರ್ತನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಜೊತೆಗೆ ಆಕೆಯ ನಂಬರ್ ಪಡೆದು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಮಂಜುನಾಥ್ ಸ್ವಾಮಿಯನ್ನು ಅಮಾನತಾಗಿದ್ದಾರೆ.
ಇನ್ನು ಐಷಾರಾಮಿ ಕಾರು ಕಳ್ಳತನ ಆರೋಪಿಗಳನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದರು. ನಂತರ ಕೆಲವು ಆರೋಪಿಗಳು ಜಾಮೀನು ಪಡೆದಿದ್ದರು. ಅವರು ಸುದ್ದಿಗೋಷ್ಠಿ ನಡೆಸಿ ನಮ್ಮದು ತಪ್ಪಿಲ್ಲದಿದ್ದರೆ ಕಾರು ಕಳ್ಳತನ ಕೇಸಿನಲ್ಲಿ ಬಂಧಿಸಿದ್ದಾರೆ, ಸಿಲುಕಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಪೊಲೀಸರು ಲಕ್ಷ ಲಕ್ಷ ಹಣ ಪೀಕಲು ಮುಂದಾಗಿದ್ದರು ಎಂದು ದೂರಿದ್ದಾರೆ.
ರೈಸ್ ಪೂಲಿಂಗ್ ಕೇಸ್ ಆರೋಪ
ರೈಸ್ ಪೂಲಿಂಗ್ ಕೇಸ್‌ನಲ್ಲಿ ಪುಲಕೇಶಿ ನಗರದ ಪೊಲೀಸರ ವಿರುದ್ಧ ಆರೋಪವೊಂದು ವ್ಯಕ್ತಪವಾಗಿದೆ. ಈ ಕೇಸ್‌ನಲ್ಲಿ ದೂರು ನೀಡಿದ್ದ ವ್ಯಕ್ತಿಗೆ ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಐದು ಜನ ಸಿಬ್ಬಂದಿ, ಸಬ್‌ಸ್ಪೆಕ್ಟರ್ ಅಮಾನತುಗೊಂಡಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧದ ಆರೋಪ ಕುರಿತು ತನಿಖೆ ನಡೆಯುತ್ತಿದೆ.
ಅದೇ ರೀತಿ ಮಾರತ್ತಹಳ್ಳಿಯ ಉಪ ಪೊಲೀಸ್ ಅಧಿಕಾರಿಯೊಬ್ಬರು ಮತ್ತವರ ಸಿಬ್ಬಂದಿಯು ಉದ್ಯಮಿಗೆ ಪಿಸ್ತೂಲ್ ಇಟ್ಟು 40 ಲಕ್ಷಕ್ಕೆ ಡಿಮ್ಯಾಂಡ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಉಪ ಪೊಲೀಸ್ ಅಧಿಕಾರಿ ನಾಪತ್ತೆಯಾಗಿದ್ದು, ಹಡುಕಾಟ ನಡೆದಿದೆ.
ಹೀಗೆ ಪೊಲೀಸರ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬಂದಿವೆ. ಅದು ಚುನಾವಣೆ ಹೊತ್ತಿನಲ್ಲಿ ಪೊಲೀಸರ ಈ ವರ್ತನೆಗಳಿಂದ ನಗರಾಯುಕ್ತರು ಕೆಂಡವಾಗಿದ್ದಾರೆ. ಈ ಆರೋಪ ಕೇಸಿನಲ್ಲಿ ಒತ್ತಡವಿಲ್ಲದೆ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications