ದರೋಡೆ ಪ್ರಯತ್ನ ಪ್ರಕರಣದ ಆರೋಪಿಗಳ ಬಂಧನ: ಬೆನ್ನಟ್ಟಿದ ಮೇಲೆ ಬೇಟೆ ಗ್ಯಾರಂಟಿ ಎಂದ ಪೊಲೀಸರು
ಬೆಂಗಳೂರು, ಆಗಸ್ಟ್ 22: ಹಾಡಹಗಲೇ ಗುಂಡು ಹಾರಿಸಿ ದರೋಡೆಗೆ ಪ್ರಯತ್ನಿಸಿದ ನಾಲ್ವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಮಧ್ಯಾಹ್ನ ವೈಯಾಲಿಕಾವಲ್‌ನ ಸಾಮ್ರಾಟ್ ಜ್ಯುವೆಲರ್ಸ್‌ನಲ್ಲಿ ದರೋಡೆಗೆ ಯತ್ನಿಸಿದ್ದ ಮಹಾರಾಷ್ಟ್ರದ ಸೊಲ್ಲಾಪುರದ ಬಾಲಾಜಿ ರಮೇಶ ಗಾಯಕವಾಡ್ (25), ಹರಿಯಾಣದ ಬಲವಾನ್ ಸಿಂಗ್ (24), ರಾಜಸ್ತಾನದ ಶ್ರೀರಾಮ ಬಿಶ್ನೋಯಿ (23) ಮತ್ತು ಓಂಪ್ರಕಾಶ್ (25) ಬಂಧಿತ ಆರೋಪಿಗಳು.
ಬೆಂಗಳೂರಿನ ವಿನಾಯಕನಗರದ ಡಿವಿಜಿ ಬಡಾವಣೆಯಲ್ಲಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ನಾಡ ಪಿಸ್ತೂಲ್ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಭಾಸ್ಕರರಾವ್ ಅವರು ಗುರುವಾರ ತಿಳಿಸಿದರು.

ಬುಧವಾರ ರಾತ್ರಿಯೇ ಮಿಂಚಿನ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಗಲು ಹೊತ್ತಿನಲ್ಲಿ ಜನನಿಬಿಡ ರಸ್ತೆ ಸಮೀಪವೇ ನಡೆದ ಈ ದರೋಡೆ ಪ್ರಯತ್ನ ಬೆಂಗಳೂರನ್ನು ಬೆಚ್ಚಿ ಬೀಳಿಸಿತ್ತು.
ಬುಧವಾರ ಮಧ್ಯಾಹ್ನ 2.40ರ ಸುಮಾರಿಗೆ ಚಿನ್ನ ಖರೀದಿಸುವ ನೆಪದಲ್ಲಿ ಆಭರಣ ಮಳಿಗೆಗೆ ಬಂದಿದ್ದ ಮೂವರು ದರೋಡೆಕೋರರು ಚಿನ್ನದ ಸರವನ್ನು ಕೇಳಿದ್ದರು. ಅದನ್ನು ತೋರಿಸುವ ವೇಳೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬೆದರಿಸಿದ್ದರು. ಕೂಡಲೇ ಮಾಲೀಕರ ಪತ್ನಿ ರಾಖಿ, ಕುರ್ಚಿಯನ್ನು ದರೋಡೆಕೋರರ ಮೇಲೆ ಎಸೆದು ಕೂಗಿಕೊಂಡಿದ್ದರು. ಆಗ ದರೋಡೆಕೋರರು ಮಿಸ್ ಫೈರ್ ಮಾಡಿ ಅಲ್ಲಿಂದ ಓಡಿಹೋಗಿದ್ದರು.
ಕೂಡಲೇ ಕಾರ್ಯಾಚರಣೆ ನಡೆಸಿದ ವೈಯಾಲಿ ಕಾವಲ್ ಪೊಲೀಸರು ದರೋಡೆಕೋರರನ್ನು ಬಂಧಿಸಿದ್ದಾರೆ. ತಮ್ಮ ಮಿಂಚಿನ ಕಾರ್ಯಾಚರಣೆಯನ್ನು ಸಿನಿಮೀಯ ರೀತಿಯಲ್ಲಿ ಬೆಂಗಳೂರು ಪೊಲೀಸರು ಬಣ್ಣಿಸಿದ್ದಾರೆ.
'ನಮ್ಮ ಮಿಂಚಿನ ಕಾರ್ಯಾಚರಣೆ, ದರೋಡೆಕೋರರಿಗೆ ಜೈಲಿನಲ್ಲಿ ಜಾಗರಣೆ! ಒಂದ್ಸಲ ಬಿಸಿಪಿ ಬೆನ್ನಟ್ಟಿದ ಮೇಲೆ ಬೇಟೆ ಗ್ಯಾರಂಟಿ' ಎಂದು ಬೆಂಗಳೂರು ಸಿಟಿ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಬಣ್ಣಿಸಲಾಗಿದೆ.











Click it and Unblock the Notifications