ಬೆಂಗಳೂರು ರಸ್ತೆಗಳಲ್ಲಿ ವೀಲಿಂಗ್ ಮಾಡ್ಕೊಂಡು ಲಾಂಗ್ ತೋರಿಸಿದವರು ಲಾಕ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಪುಂಡರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರಿನಲ್ಲಿ ರಾತ್ರಿ ಸಮಯದಲ್ಲಿ ರೋಡಿಗಿಳಿದ ಪರೋಡಿಗಳ ಗುಂಪೊಂದು ಕೈಯಲ್ಲಿ ಲಾಂಗ್ ತೋರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವ ಭಂಡತನ ಪ್ರದರ್ಶಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿ ಈ ಪುಂಡರ ಹೆಡೆಮುರಿ ಕಟ್ಟುವಂತೆ ಪೊಲೀಸರಿಗೆ ನೆಟ್ಟಿಗರು ಆಗ್ರಹಿಸಿದ್ದರು.
ಈ ಘಟನೆ ನಡೆದು ಸುಮಾರು ಒಂದು ವಾರ ಕಳೆದಿದೆ. ಕೆಲವರು ಈ ಕಿಡಿಗೇಡಿಗಳ ಕೃತ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಈ ವಿಡಿಯೋ ನೋಡಿ ಹಲವರು ಶಾಕ್‌ಗೆ ಒಳಗಾಗಿದ್ದರು. ಸುಮಾರು 20ಕ್ಕೂ ಹೆಚ್ಚು ಯುವಕರು ಬೈಕ್‌ನಲ್ಲಿ ಯಾವುದೇ ಹೆಲ್ಮೆಟ್ ಕೂಡ ಧರಿಸದೆ ಕೈಯಲ್ಲಿ ಲಾಂಗ್ ಹಿಡಿದು, ವೀಲಿಂಗ್ ಕೂಡ ಮಾಡಿದ್ರು. ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರಿಗೆ ಆತಂಕ ಸೃಷ್ಟಿಸಿದ್ರು.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಪುಂಡರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದರು. ಅಲ್ಲದೆ ರಾತ್ರಿ ವೇಳೆ ರಸ್ತೆಗಳಲ್ಲಿ ಈ ರೀತಿ ಕೃತ್ಯ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳುವಂತೆಯೂ ಒತ್ತಾಯಿಸಿದ್ದರು. ಈ ವಿಡಿಯೋ ಅನ್ನು ಹಲವರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಕೂಡ ಮಾಡಿದ್ದರು. ಪೊಲೀಸರು ಈ ವಿಡಿಯೋ ಆಧರಿಸಿ ಕೊನೆಗೂ ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಲಾಂಗ್ ಹಿಡಿದಿದ್ದ ಕೈಗಳನ್ನು ಲಾಕ್ ಮಾಡಿ ಕಂಬಿ ಎಣಿಸಲು ಕಳಿಸಿದ್ದಾರೆ.
ಫೆಬ್ರವರಿ 13ರ ಮಧ್ಯರಾತ್ರಿ ಶಬ್ ಎ ಬರಾತ್ ಹಬ್ಬದ ಪ್ರಯುಕ್ತ 25ಕ್ಕೂ ಯುವಕರು ಕೆ.ಜಿ.ಹಳ್ಳಿಯ ನೂರ್ ಮಸೀದಿ ಬಳಿ ಜಮಾಯಿಸಿದ್ದರು. ಬಳಿಕ ರೀಲ್ಸ್ ಮಾಡುವ ಹುಚ್ಚಿನಿಂದ ಕೆಲವರು ವೀಲಿಂಗ್ ಮಾಡಲು ಪ್ಲ್ಯಾನ್ ಮಾಡಿದ್ದರು. ನಂತರ ಪುಂಡರು ಗ್ಯಾಂಗ್ ಕಟ್ಟಿಕೊಂಡು ಕೆಜಿ ಹಳ್ಳಿ ಮುಖ್ಯರಸ್ತೆಯಲ್ಲಿ ತ್ರಿಬಲ್ ರೈಡಿಂಗ್ ಹೋಗಿದ್ದರು. ಬಳಿಕ ಅಲ್ಲಿಂದ ಶುರುವಾಗಿ ಹೊಸಕೋಟೆ ಟೋಲ್ ಗೇಟ್‌ವರೆಗೆ ಪುಂಡರು ಗ್ಯಾಂಗ್ ಹಾವಳಿ ಮಾಡಿದೆ.
ಹೊಸಕೋಟೆ ಟೋಲ್ ಗೇಟ್‌ನಿಂದ ಮತ್ತೆ ಕೆಜಿ ಹಳ್ಳಿ ಕಡೆಗೆ ವಾಪಸ್ ಆಗುವ ಮಾರ್ಗ ಮಧ್ಯೆ ಏರಿಯಾಗಳಲ್ಲಿ ರ‍್ಯಾಶ್ ಡ್ರೈವ್ ಮಾಡಿಕೊಂಡು ಕೈಯಲ್ಲಿ ಲಾಂಗ್ ಹಿಡಿದು ನಡುರಸ್ತೆಯಲ್ಲೇ ವೀಲಿಂಗ್ ಮಾಡಿದ್ದರು. ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದರೂ ಈ ಪುಂಡರು ಮಾರಕಾಸ್ತ್ರಗಳನ್ನು ಹಿಡಿದು ವೇಗವಾಗಿ ಚಾಲನೆ ಮಾಡಿ ಅಟ್ಟಹಾಸ ಮೆರೆದಿದ್ದರು.
ಈ ವಿಡಿಯೋ ಅನ್ನು ಹಲವರು ಹಂಚಿಕೊಂಡಿದ್ದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪೊಲೀಸರು ಇವರ ಮೇಲೆ ಯಾವುದೇ ಕಾರ್ಯಕ್ರಮ ತೆಗೆದುಕೊಂಡಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲೂ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೂ ಪುಂಡರಿಗೆ ಬಲೆ ಬೀಸಿದ ಪೊಲೀಸರು ಐದು ಮಂದಿಯನ್ನು ಅರೆಸ್ಟ್ ಮಾಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಕೇಸ್ ಅನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಈ ಕೃತ್ಯದಲ್ಲಿ ಭಾಗಿಯಾದ ಉಳಿದವರಿಗಾಗಿ ಹುಡುಕಾಟ ನಡೆಸುವಂತೆಯೂ ಖಡಕ್ ಸೂಚನೆ ನೀಡಿದ್ದಾರೆ. ಈ ಅಪರಾಧ ಸಂಬಂಧ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ, ಬಂಧಿತರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ.












Click it and Unblock the Notifications