ಡಿಕೆ ಶಿವಕುಮಾರ್ ಭೇಟಿ ಮಾಡಿದ ಬೆಂಗಳೂರು ಒಆರ್‌ಆರ್ ಕಂಪೆನಿಗಳ ಸಂಘ, ಟ್ರಾಫಿಕ್ ನಿಯಂತ್ರಣಕ್ಕೆ ಪರಿಹಾರ ಕ್ರಮ
ಬೆಂಗಳೂರು, ಅಕ್ಟೋಬರ್ 02: ಬೆಂಗಳೂರಿನ ಟ್ರಾಫಿಕ್ ದಟ್ಟಣೆಗೆ ಕುಖ್ಯಾತಿ ಪಡೆದಿರುವ ಹೊರ ವರ್ತುಲ ರಸ್ತೆ (ಓಆರ್‌ಆರ್) ಪ್ರದೇಶದಲ್ಲಿರುವ ಹೊರವರ್ತುಲ ರಸ್ತೆ ಕಂಪನಿಗಳ ಸಂಘ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಮಳೆ ಮಾತ್ರವಲ್ಲದೆ ವಿವಿಧ ಕಾರಣಗಳಿಂದ ಹೊರ ವರ್ತುಲ ರಸ್ತೆಯಲ್ಲಿ ನಿರಂತರವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ, ಇದರಿಂದ ಗಂಟೆಗಟ್ಟಲೇ ವಾಹನಗಳು ರಸ್ತೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿ ಇದು ದೇಶದ ಗಮನವನ್ನು ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರಾಫಿಕ್ ವೇಳೆ ಹರಿದಾಡುವ ವಿಡಿಯೋ ಪೋಟೋಗಳು ನಿರಂತವಾಗಿ ಎದುರಾಗುವ ಟ್ರಾಫಿಕ್ ಸಮಸ್ಯೆಯನ್ನು ಎತ್ತಿ ತೋರಿಸುತ್ತವೆ.

ಹೀಗಾಗಿ ಹೊರ ವರ್ತುಲ ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಕೆಆರ್ ಪುರಂ ನಡುವೆ ಇರುವ ಕಂಪನಿಗಳನ್ನು ಪ್ರತಿನಿಧಿಸುವ ಹೊರವರ್ತುಲ ರಸ್ತೆ ಕಂಪನಿಗಳ ಸಂಘ (ORRCA) ಶನಿವಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಭೇಟಿ ಮಾಡಿ ಆಗಾಗ್ಗೆ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಯೋಜನೆಗಳನ್ನು ಚರ್ಚಿಸಿತು.
ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ನಡೆದ ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.18 ಕಿಮೀ ವ್ಯಾಪ್ತಿಯಲ್ಲಿ ಹೊರ ವರ್ತುಲ ರಸ್ತೆಯುದ್ದಕ್ಕೂ 500 ಕ್ಕೂ ಹೆಚ್ಚು ಕಂಪನಿಗಳಿವೆ. ಈ ಕಂಪನಿಗಳಲ್ಲಿ 9.5 ಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಂಚಾರ ದಟ್ಟಣೆ ತಗ್ಗಿಸಲು ಕೈಗೊಂಡ ಕ್ರಮಗಳೇನು?
1. ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧ.
ಮುಂದಿನ ವಾರದಿಂದ ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ಭಾರೀ ವಾಹನಗಳಾದ ಮಣ್ಣು ಟ್ರಪ್ಪರ್‌ಗಳು, ಟ್ರಕ್‌ಗಳು ಮತ್ತು ಸರಕು ವಾಹನಗಳನ್ನು ನಿಷೇಧಿಸಲಾಗಿದೆ. ಈ ಕ್ರಮವು ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ವಾಹನಗಳ ಚಲನೆಯನ್ನು ವೇಗಗೊಳಿಸುವ ಸಾಧ್ಯತೆಯಿದೆ.
18 ಕಿಮೀ ವಿಸ್ತಾರದಲ್ಲಿ 36 ಚಾಕ್ ಪಾಯಿಂಟ್
ಹೊರ ವರ್ತುಲ ರಸ್ತೆಯ 18 ಕಿಮೀ ವ್ಯಾಪ್ತಿಯಲ್ಲಿ 36 ಚಾಕ್ ಪಾಯಿಂಟ್‌ಗಳನ್ನು ನಿಗದಿಪಡಿಸುವಂತೆ ಸರ್ಕಾರಕ್ಕೆ ಹೊರವರ್ತುಲ ರಸ್ತೆ ಕಂಪನಿಗಳ ಸಂಘ ಮನವಿ ಸಲ್ಲಿಸಿದೆ. ಯೆಮ್ಲೂರು ಜಂಕ್ಷನ್, ಪಾಣತ್ತೂರು ಜಂಕ್ಷನ್, ಬೆಳ್ಳಂದೂರು ಲೇಕ್ ಜಂಕ್ಷನ್, ಎಂಬಸಿ ಪಾರ್ಕ್ ಗೇಟ್ ಮತ್ತು ಸಕ್ರಾ ಆಸ್ಪತ್ರೆ ರಸ್ತೆ ಸೇರಿದಂತೆ 36 ಚಾಕ್ ಪಾಯಿಂಟ್‌ಗಳನ್ನು ಇದರಲ್ಲಿ ಗುರುತಿಸಲಾಗಿದೆ.
ನೌಕರರ ಬಸ್ ಪೂಲಿಂಗ್:
ಖಾಸಗಿ ನಿರ್ವಾಹಕರಿಂದ ಕಾರ್ಯನಿರತ ಪೂಲಿಂಗ್‌ಗೆ ಅವಕಾಶ ನೀಡುವಂತೆ ಒಆರ್‌ಆರ್‌ಸಿಎ ಸಂಚಾರ ಇಲಾಖೆಗೆ ಮನವಿ ಮಾಡಿದೆ. ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬಸ್ ಪೂಲಿಂಗ್ ಅನ್ನು ಇಲಾಖೆಯು ಕಾನೂನು ನಿಬಂಧನೆಗಳ ಕೊರತೆಯಿಂದಾಗಿ ಸ್ಥಗಿತಗೊಳಿಸಿದೆ. ವಾಹನ ದಟ್ಟಣೆಯನ್ನು ತಡೆಗಟ್ಟಲು ವಾಹನ ಚಲನೆಯನ್ನು ಯೋಜಿಸಲು ಟ್ರಾಫಿಕ್ ಪೊಲೀಸರೊಂದಿಗೆ ಉದ್ಯೋಗಿಗಳು ಬಳಸುವ ವಾಹನಗಳ ಸಂಖ್ಯೆಯ ಅಂಕಿ ಅಂಶಗಳನ್ನು ಹಂಚಿಕೊಳ್ಳಲು ಹೊರವರ್ತುಲ ರಸ್ತೆ ಕಂಪನಿಗಳ ಸಂಘ ಒಪ್ಪಿಕೊಂಡಿದೆ.












Click it and Unblock the Notifications