Metro Alert: ಬಿಜೆಪಿ ಪ್ರತಿಭಟನೆ ಎಫೆಕ್ಟ್: ವಿಧಾನಸೌಧ ಮೆಟ್ರೋ ನಿಲ್ದಾಣ ದಿಢೀರ್ ಬಂದ್, ಪ್ರಯಾಣಿಕರಿಗೆ ಮಹತ್ವದ ಸೂಚನೆ
ಬೆಂಗಳೂರು: ಬೆಂಗಳೂರಿನಲ್ಲಿ ಬಿಜೆಪಿಯಿಂದ ಪ್ರತಿಭಟನಾ ಮೆರವಣಿಗೆ ಹಾಗೂ ವಿಧಾನಸೌಧ ಮುತ್ತಿಗೆ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಅಪ್ಡೇಟ್ ನೀಡಿದ್ದಾರೆ. ನಮ್ಮ ಮೆಟ್ರೋದ ಡಾ.ಬಿ.ಆರ್. ಅಂಬೇಡ್ಕರ್ ನಿಲ್ದಾಣ (ವಿಧಾನಸೌಧ ಮೆಟ್ರೋ ನಿಲ್ದಾಣ) ಪ್ರವೇಶ, ನಿರ್ಗಮನವನ್ನು ದಿಢೀರ್ ಬಂದ್ ಮಾಡಿರುವುದಾಗಿ ತಿಳಿಸಿದ್ದಾರೆ.
ಹೌದು, ಪ್ರಯಾಣಿಕರೇ ಎಂದಿನಂತೆ ನೀವು ನೇರಳೆ ಮಾರ್ಗದಲ್ಲಿ ಓಡಾಡುತ್ತಿದ್ದರೆ ನೀವು ಕೂಡಲೇ ವಿಧಾನಸೌಧ ನಿಲ್ದಾಣದಿಂದ ರೈಲು ಹತ್ತಲು ಮತ್ತು ಆ ನಿಲ್ದಾಣದಲ್ಲಿ ಇಳಿಯಲು ಆಗುವುದಿಲ್ಲ. ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬೆಳಗ್ಗೆ 10.17 ಗಂಟೆಯಿಂದಲೇ ನಿಲ್ದಾಣದ ಪ್ರವೇಶ ದ್ವಾರ ಮುಚ್ಚಲಾಗಿದೆ. ಪ್ರಯಾಣಿಕರಿಗೆ ಆದ ಅಡಚಣೆಗೆ ವಿಷಾದವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಧಾನಸೌಧ ಸುತ್ತಮುತ್ತ ಬಿಜೆಪಿ ನಾಯಕರು, ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಪ್ರಯಾಣಿಕರ ಹಿತದೃಷ್ಟಿ ಮುಂಜಾಗ್ರತಾ ಕ್ರಮವಾಗಿ ನಿಲ್ದಾಣ ಬಂದ್ ಮಾಡಲಾಗಿದೆ. ಪ್ರಯಾಣಿಕರು ಈ ಅಪ್ಡೇಟ್ ನೋಡಿಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕೆಂದು ನಮ್ಮ ಮೆಟ್ರೋ ತಿಳಿಸಿದೆ.
ಮೆಟ್ರೋ ಪ್ರಯಾಣಿಕರಿಗೆ ಪರ್ಯಾಯ ಆಯ್ಕೆ ಏನು?
ಮೊನ್ನೆ ಆಗಸ್ಟ್ 15ರ ಫ್ರೀಡಂ ಹಬ್ಬದಂದು ಸಹ ವಿಧಾನಸೌಧ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನವನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಸರ್ ಎಂ ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜು ನಿಲ್ದಾಣ ಅಥವಾ ಕಬ್ಬನ್ ಪಾಕ್ ನಿಲ್ದಾಣ ಮೂಲಕ ಪ್ರಯಾಣಿಕರು ಸಂಚಾರ ನಡೆಸಿದ್ದರು. ಇಂದು ಸಹ ಪ್ರಯಾಣಿಕರು ಅದೇ ರೀತಿ ಮಾಡಿದರೆ ಅನುಕೂಲವಾಗಲಿದೆ. ಪ್ರತಿಭಟನೆ, ಗದ್ದಲದಲ್ಲಿ ಸಿಲುಕಿ ಹಾಕಿಕೊಳ್ಳುವುದು ತಪ್ಪಲಿದೆ.
ಪ್ರತಿಭಟನೆಯಿಂದ ಭಾರೀ ಸಂಚಾರ ದಟ್ಟಣೆ, ಸವಾರರಿಗೆ ತೊಂದರೆ!
ಮುಂಗಾರು ವಿಧಾನಮಂಡಲ ಅಧಿವೇಶನ ಆರಂಭವಾದಾಗಿನಿಂದಲೂ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸುತ್ತಲೇ ಬಂದಿದ್ದ ಬಿಜೆಪಿಯು ಇಂದು ಸೋಮವಾರ ಬೃಹತ್ ಪ್ರತಿಭಟನೆ ಜೊತೆಗೆ ವಿಧಾನಸೌಧ ಮುತ್ತಿಗೆಗೆ ಯತ್ನಿಸಿದೆ. ವಾಲ್ಮಿಕಿ ಅಭಿವೃದ್ಧಿ ನಿಗಮದ 187 ಕೋಟಿ ಹಣ ಲೂಟಿ ಮಾಡಿದ ಸಚಿವ ಬಿ.ನಾಗೇಂದ್ರ ಅವರು ಕ್ಲೀನ್ ಚೀಟ್ ಪಡೆದು ಬಳಿಕ ಸಚಿವರಾಗಲಿ. ಅಲ್ಲಿಯವರೆಗೆ ಅವರನ್ನು ಸಚಿವ ಸ್ಥಾನದಲ್ಲಿ ಕೂರಿಸಲು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್, ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಗುಡುಗಿದ್ದರು.
ಅದರಂತೆ ಇಂದು ಸೋಮವಾರ ಬೆಳಗ್ಗೆ 9.30ಕ್ಕೆ ಸ್ವಾತಂತ್ರ್ಯ ಉದ್ಯಾನದಿಂದ ಮೆರವಣಿಗೆ ಮೂಲಕ ಬಂದ ಬಿಜೆಪಿ ನಾಯಕರು, ಮುಖಂಡರು, ಶಾಸಕರು ಮತ್ತು ಕಾರ್ಯಕರ್ತರು ಆರ್.ಅಶೋಕ್ ನೇತೃತ್ವದಲ್ಲಿ ಶಕ್ತಿಸೌಧ ಮುತ್ತಿಗೆ ಯತ್ನಿಸಿತು. ಈ ವೇಳೆ ಸಿಟಿ ರವಿ. ವಿಜಯೇಂದ್ರ ಸೇರಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು.
ಈ ಪ್ರತಿಭಟನೆ ಹಿನ್ನೆಲೆ ಕೆ.ಆರ್.ವೃತ್ತದಲ್ಲಿ, ಅಂಬೇಡ್ಕರ್ ವೀದಿ, ಇಂಡಿಯನ್ ಎಕ್ಸ್‌ಪ್ರೆಸ್ ಸ್ಟಾಪ್ ಸೇರಿದಂತೆ ವಿಧಾನಸೌಧ ಸುತ್ತಮುತ್ತ ತೀವ್ರ ಟ್ರಾಫಿಕ್ ಕಂಡು ಬಂತು. ವಾಹನ ಸವಾರರು ಪರದಾಡಿದರು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಚೇರಿಗೆ ತೆರಳುವವರು, ಶಾಲೆ- ಕಾಲೇಜು ವಿದ್ಯಾರ್ಥಿಗಳು, ಇನ್ನಿತರ ಕೆಲಸಗಳಿಗೆ ಹೋಗುವವರು ಟ್ರಾಫಿಕ್‌ಗೆ ಹೈರಾಣಾದರು. ಇದನ್ನು ಕಂಡು ನಮ್ಮ ಮೆಟ್ರೋ ತಾತ್ಕಾಲಿಕವಾಗಿ ವಿಧಾನಸೌಧ ನಿಲ್ದಾಣ ಬಂದ್ ಮಾಡಲು ನಿರ್ಧರಿಸಿದ್ದಾಗಿ ತಿಳಿಸಿದೆ.


Click it and Unblock the Notifications
