Namma Metro: ನೇರಳೆ-ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಹೊಸ ಸಮಸ್ಯೆ
ಬೆಂಗಳೂರು, ಸೆಪ್ಟಂಬರ್ 20: ಬೆಂಗಳೂರು ನಮ್ಮ ಮೆಟ್ರೋ 96 ಕಿಲೋ ಮೀಟರ್‌ವರೆಗೆ ವಿಸ್ತರಣೆ ಆಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಈ ಮಧ್ಯೆ ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಕೊರತೆ ಉಂಟಾಗಿರುವುದು ಬೆಳಕಿಗೆ ಬಂದಿದೆ. ವಿಶೇಷವಾಗಿ ಆರ್‌ವಿ ರಸ್ತೆ-ಬೊಮ್ಮಸಂದ್ರ 'ಹಳದಿ ಮಾರ್ಗ'ದಲ್ಲಿ ಪಾರ್ಕಿಂಗ್ ಸೌಲಭ್ಯಗಳ ಕೊರತೆ ಹೆಚ್ಚಾಗಿದೆ. ಮೆಟ್ರೋ ಮಾರ್ಗ 1ರಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದ್ದು, ಟಿಕೆಟ್ ಖರೀದಿಸಲು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯಾಣಿಕರು ಕಾದು ನಿಲ್ಲಬೇಕಾದ ಸ್ಥಿತಿ ಇದೆ.
ಬೆಂಗಳೂರು ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾರ್ಗ 1ರ ನೇರಳೆ ಮಾರ್ಗದಲ್ಲಿ ಚಲ್ಲಘಟ್ಟ-ವೈಟ್‌ಫೀಲ್ಡ್ ಲೈನ್‌ನಲ್ಲಿ ಟಿಕೆಟ್ ಪಡೆಯಲು ಸುಮಾರು 30 ನಿಮಿಷ ನಿಲ್ಲಬೇಕಾಗಿದೆ. ವಿದ್ಯಾರ್ಥಿಗಳು ತರಗತಿಗೆ ತಡವಾಗಿ ಹೋಗುವಂತಾಗಿದೆ. ಒಂದೊಂಮ್ಮೆ ಗಮ್ಯಸ್ಥಳಕ್ಕೆ ಬಿಎಂಟಿಸಿ ಬಸ್‌ಗಳೇ ಮೆಟ್ರೋಗಿಂತಲೂ ಬೇಗ ತಲುಪುತ್ತದೆ. ಈ ಸಂಬಂಧ ಪ್ರಯಾಣಿಕರು ಅಸಮಾಧಾನ ಹೊರ ಹಾಕಿದ್ದಾರೆ.

ಹಳದಿ ಮಾರ್ಗ: ಇಷ್ಟು ನಿಲ್ದಾಣಗಳಲ್ಲಿ ಇಲ್ಲ ಪಾರ್ಕಿಂಗ್...
ತಿಂಗಳ ಹಿಂದಷ್ಟೇ ಲೋಕಾರ್ಪಣೆಗೊಂಡ 19 ಕಿಲೋ ಮೀಟರ್ ಉದ್ದದ ಆರ್.ವಿ.ರಸ್ತೆ-ಬೊಮ್ಮಸಂದ್ರದ ಹಳದಿ ಮಾರ್ಗದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಈ ಮಾರ್ಗ 16 ನಿಲ್ದಾಣಗಳಲ್ಲಿ ಕೇವಲ 11 ನಿಲ್ದಾಣಗಳಷ್ಟೇ ಪಾರ್ಕಿಂಗ್ ವ್ಯವಸ್ಥೆಯಿದೆ. ಉಳಿದ ಐದು ನಿಲ್ದಾಣಗಳಲ್ಲಿ ಪಾರ್ಕಿಂಗ್ ಇಲ್ಲದ ಕಾರಣ ಪ್ರಯಾಣಿಕರು ಹತ್ತಿರದ ವಸತಿ ಪ್ರದೇಶಗಳಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಸದ್ಯ ಮೆಟ್ರೋ ಹಸಿರು ಮಾರ್ಗ, ನೇರಳೆ ಮಾರ್ಗ ಮತ್ತು ಹಳದಿ ಮಾರ್ಗ ಸೇರಿ ಒಟ್ಟು 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ಬಳಕೆ ಮಾಡುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಹೊಸ ಮೂರನೇ ಮಾರ್ಗದಲ್ಲಿ ನಿತ್ಯ ಕನಿಷ್ಠ 70,000 ಪ್ರಯಾಣಿಕರು ಓಡಾಡುತ್ತಾರೆ. ಮೆಟ್ರೋ ಜಾಲದಲ್ಲಿ ಒಟ್ಟು 83 ನಿಲ್ದಾಣಗಳು ಇವೆ. ಅದರಲ್ಲಿ 18 ನಿಲ್ದಾಣಗಳಲ್ಲಿ ಇನ್ನೂವರೆಗೆ ಪಾರ್ಕಿಂಗ್ ಸೌಲಭ್ಯವೇ ಇಲ್ಲ. ಇದು ಮೆಟ್ರೋ ಸಾರಿಗೆ ಅವಲಂಬಿತ ಪ್ರಯಾಣಿಕರಿಗೆ ನಿತ್ಯ ಕಿರಿಕಿರಿ ಉಂಟು ಮಾಡಿದೆ.
ಈಗಾಗಲೇ ಅನೇಕ ನಿಲ್ದಾಣಗಳಿಗೆ ಪಾರ್ಕಿಂಗ್ ಹಂಚಿಕೆ ಮಾಡಲಾಗಿದೆ. ಕೆಲವು ಕಾರಣಾಂತರಗಳಿಂದ ಈ ಪಾರ್ಕಿಂಗ್ ಸಮಸ್ಯೆ ಉಂಟಾಗಿದೆ. ಸಮಸ್ಯೆ ನಿವಾರಣೆ ಕ್ರಮ ಕೊಂಚ ವಿಳಂಬವಾಗಿದೆ. ಶೀಘ್ರವೇ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications