ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಿದ SUV ಕಾರು, ವಿಡಿಯೋ ವೈರಲ್
ಬೆಂಗಳೂರು, ಏಪ್ರಿಲ್, 26: ಬೆಂಗಳೂರು-ಮೈಸೂರು ಹೆದ್ದಾರಿ ಒಂದಲ್ಲ ಒಂದು ವಿಚಾರದಲ್ಲಿ ಮೊದಲಿನಿಂದಲೂ ಸುದ್ದಿಯಾಗುತ್ತಲೇ ಇದೆ. ಇನ್ನು ಇದೀಗ ಹೆದ್ದಾರಿಯಲ್ಲಿ ನಿಯಮ ಉಲ್ಲಂಘಿಸಿ ಒನ್ ವೇನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದು, ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿವೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ಒನ್ ವೇನಲ್ಲಿ ವಾಹನ ಚಲಾಯಿಸುತ್ತಿರುವ ವಿಡಿಯೋ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು, ಇಂತಹ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

ಈ ಘಟನೆ ಏಪ್ರಿಲ್ 21ರಂದು ಬೆಳಿಗ್ಗೆ 7.21ಕ್ಕೆ ನಡೆದಿದ್ದು, ತಡವಾಗಿ ಬೆಳಕಿದೆ ಬಂದಿದೆ. ಇನ್ನು ಈ ಇದನ್ನು ರೆಕಾರ್ಡ್ ಮಾಡಿದ ವೀಡಿಯೊವನ್ನು ಏಪ್ರಿಲ್ 21ರ ಸಂಜೆ ನಂತರ @bidadi_rohith ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾಹಿತಿಯ ಪ್ರಕಾರ, ರೋಹಿತ್ ಎಂಬಾತ ಚಲಾಯಿಸುತ್ತಿದ್ದ ಕಾರು ಸುಮಾರು 95 ಕಿ.ಮೀ. ವೇಗದಲ್ಲಿ ಇತ್ತು ಎಂದು ತಿಳಿದುಬಂದಿದೆ.
ಚಾಲಕ ರೋಹಿತ್ ಬ್ರೇಕ್‌ಗಳನ್ನು ಹೊಡೆದು ಐದು ಸೆಕೆಂಡುಗಳಲ್ಲಿ ಕಾರಿನ ವೇಗವನ್ನು ನಿಯಂತ್ರಿಸಿದ್ದು, ಅವರ ಮುಂದೆ ನೇರವಾಗಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕೆಂಪು ಬಣ್ಣದ SUV ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿದನು ಎಂದು ತಿಳಿದುಬಂದಿದೆ.
ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರು ಪೋಸ್ಟ್‌ಗೆ ಪ್ರತಿಕ್ರಿಯಿಸಿ ಕಠಿಣ ಕ್ರಮದ ಭರವಸೆ ನೀಡಿದರು. ಪೊಲೀಸರು ಅಡ್ಡದಿಡ್ಡಿಯಾಗಿ ಕಾರು ಚಲಾಯಿಸಿದವನನ್ನು ಗುರುತಿಸಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಚಾಲಕನನ್ನು ಇನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ಧಾರೆ ಅಂತಾ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
"ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಲು ನಾವು ಪ್ರಾದೇಶಿಕ ಸಾರಿಗೆ ಕಚೇರಿಗೆ ಪತ್ರ ಬರೆದಿದ್ದೇವೆ. ನಮ್ಮ ಗಮನಕ್ಕೆ ಬಂದ ಎಲ್ಲಾ ಘಟನೆಗಳಲ್ಲಿಯೂ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತದೆ," ಎಂದು ಅವರು ಹೇಳಿದರು.
ರಾಂಗ್ ಸೈಡ್ ಡ್ರೈವಿಂಗ್ ಎಲ್ಲಾ ರಸ್ತೆ ಬಳಕೆದಾರರಿಗೆ ತುಂಬಾ ಅಪಾಯಕಾರಿ ಎಂದು ಅವರು ಒಪ್ಪಿಕೊಂಡಿದ್ದಾರೆ. ಇಂತಹ ಘಟನೆಗಳಲ್ಲಿ ಹೆಚ್ಚಿನವು ಮಂಡ್ಯದ ಗಣಗನೂರು ಟೋಲ್ ಪ್ಲಾಜಾ ಬಳಿ ನಡೆದಿವೆ ಎಂದು ವರದಿಯಾಗಿವೆ. ಬಹುತೇಕ ಮಂದಿ ಟೋಲ್‌ಗಳನ್ನು ತಪ್ಪಿಸುವ ಉದ್ದೇಶದಿಂದ ಇಂತಹ ಘಟನೆಗಳು ಸಂಭವಿಸಿದೆ ಎಂದು ಅನುಮಾಮ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ಗಸ್ತು ಹೆಚ್ಚಿಸುವಂತೆ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೇನೆ. ಚುನಾವಣೆ ನಂತರ ಪೊಲೀಸರು ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ರಾಜ್ಯ ಸಾರಿಗೆ ನಿಗಮದ ಬಸ್‌ಗಳು ಯು-ಟರ್ನ್ ತೆಗೆದುಕೊಂಡು ವಿರುದ್ಧ ದಿಕ್ಕಿನಲ್ಲಿ ಚಲಿಸುವ ವೀಡಿಯೊಗಳು ವೈರಲ್ ಆಗಿದ್ದವು. ಬಳಿಕ ಸುರಕ್ಷತಾ ಕ್ರಮಗಳು ಮತ್ತು ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರಿಗೆ ನಿಗಮದ ಅಧಿಕಾರಿಗಳು ಚಾಲಕರಿಗೆ ಸೂಚಿಸಿದರು.












Click it and Unblock the Notifications