Bengaluru Mysuru Expressway ಜಲಾವೃತ: ಕ್ರೆಡಿಟ್ ತೆಗೆದುಕೊಳ್ಳುತ್ತಿರುವ ಪುಣ್ಯಾತ್ಮರೆಲ್ಲ ಈಗ ಮಾತಾಡಲಿ ಎಂದ ಡಿಕೆಶಿ
ಬೆಂಗಳೂರು-ಮೈಸೂರು ದಶಪಥ ರಸ್ತೆ ಕ್ರೆಡಿಟ್ ತೆಗೆದುಕೊಳ್ಳುತ್ತಿರುವ ಪುಣ್ಯಾತ್ಮರೆಲ್ಲ ಹೆದ್ದಾರಿಯು ಜಲಾವೃತವಾಗಿರುವ ಬಗ್ಗೆ ಮಾತನಾಡಬೇಕು ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದರು.
ಬೆಂಗಳೂರು, ಮಾರ್ಚ್ 18: ಬೆಂಗಳೂರು-ಮೈಸೂರು ದಶಪಥ ( Bengaluru-Mysuru expressway ) ರಸ್ತೆ ಕ್ರೆಡಿಟ್ ತೆಗೆದುಕೊಳ್ಳುತ್ತಿರುವ ಪುಣ್ಯಾತ್ಮರೆಲ್ಲ ಹೆದ್ದಾರಿಯು ಜಲಾವೃತವಾಗಿರುವ ಬಗ್ಗೆ ಮಾತನಾಡಬೇಕು. ದುಬಾರಿ ಟೋಲ್ ಮಾತ್ರ ಬೇಕು ಆದರೆ ಅದಕ್ಕೆ ತಕ್ಕ ಸೇವೆ ಒದಗಿಸುವುದು ಸಾಧ್ಯವಿಲ್ಲ. ಪ್ರಯಾಣಿಕರ ಜೀವವನ್ನು ಬಿಜೆಪಿಯ ಶೇ 40 ವ್ಯವಹಾರ ಪಣಕ್ಕಿಟ್ಟಿದೆ. ಭ್ರಷ್ಟಾಚಾರ ಬಿಟ್ಟರೆ ನಿಮ್ಮ ಕೊಡುಗೆ ಏನಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ನಿನ್ನೆ ( ಶುಕ್ರವಾರ ) ಸುರಿದ ಮಳೆಗೆ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್ ಜಲಾವೃತವಾಗಿದ್ದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಕಳೆದ ವರ್ಷವೇ ಬೆಂ-ಮೈ ಹೆದ್ದಾರಿ ಮಳೆ ಯಿಂದ ಮುಳುಗಿತ್ತು, ಈಗ ಮತ್ತೊಮ್ಮೆ ಸಣ್ಣ ಮಳೆಗೆ ಅವಾಂತರ ಸೃಷ್ಟಿಯಾಗಿದೆ ಎಂದರೆ ಇದು ಅವೈಜ್ಞಾನಿಕವಾಗಿರುವ #ಬಿಜೆಪಿಭ್ರಷ್ಟಪಥ ಅಲ್ಲವೇ? ನರೇಂದ್ರ ಮೋದಿ ಅವರು ಈಗ ಬಂದು ರೋಡ್ ಶೋ ಮಾಡಬೇಕೆಂದು ಕಾಂಗ್ರೆಸ್ ಆಹ್ವಾನಿಸುತ್ತದೆ. ರೋಡ್ ಶೋ ಕಾರಿನಲ್ಲಿ ಮಾಡುವರೋ, ಬೋಟಿನಲ್ಲಿ ಮಾಡುವರೋ ಅವರೇ ನಿರ್ಧರಿಸಲಿ' ಎಂದು ಹೇಳಿದೆ.
'ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ದೋಣಿಗಳಿಗೆ ಟೋಲ್ ಎಷ್ಟು? ಯಾವುದಕ್ಕೂ ದೋಣಿಗಳಿಗೂ ಟೋಲ್ ದರ ನಿಗದಿಪಡಿಸುವುದು ಉತ್ತಮ. ಒಂದು ಸಾಧಾರಣ ಮಳೆಗೆ ಹೆದ್ದಾರಿ ಮುಳುಗುತ್ತದೆ ಎಂದರೆ 40% ಲೂಟಿಯಲ್ಲಿ ಅದೆಷ್ಟು ಕಳಪೆ ಕಾಮಗಾರಿಯಾಗಿರಬಹುದು? ಪ್ರತಾಪ್ ಸಿಂಹ ಅವರೇ, ಈಗ ಫೇಸ್ಬುಕ್ ಲೈವ್ ಮಾಡುವುದಿಲ್ಲವೇ? ಸೆಲ್ಫಿ ತೆಗೆಯುವುದಿಲ್ಲವೇ?' ಎಂದೂ ಪ್ರಶ್ನಿಸಿದೆ.

'ವಾರದ ಹಿಂದೆ 'ಪ್ರಧಾನಿ'ಗಳಿಂದ ಉದ್ಘಾಟನೆಯಾದ, ಪ್ರಪಂಚದಲ್ಲಿ ಎಲ್ಲಿಯೂ ಕಾಣಸಿಗದಂತ, ಬಿಜೆಪಿಯ ಅಭಿವೃದ್ಧಿಯ ದ್ಯೋತಕವಾದ ಏಕೈಕ ಹೈ-ಫೈ ದುಬಾರಿ ಟೋಲ್ ರಸ್ತೆಯು ಒಂದು ಮಳೆಗೆ ಸೃಷ್ಟಿಸಿದ ಅವಾಂತರವಿದು. ಈ ಅವೈಜ್ಞಾನಿಕ ಕಾಮಗಾರಿಗೆ ಈಗ ಯಾರು ಹೊಣೆ ಹೊರುತ್ತೀರಿ? ಪ್ರಧಾನಿ ಮೋದಿ ಅಥವಾ ಪ್ರತಾಪ್ ಸಿಂಹ?' ಎಂದು ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, 'ನಾನು ಮೊದಲೇ ಹೇಳಿದಂತೆ, ಪ್ರಧಾನಿ ನರೇಂದ್ರ ಮೋದಿ ಅಪೂರ್ಣವಾಗಿರುವ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ. ಕರ್ನಾಟಕದ ಜನರನ್ನು ಮೂರ್ಖರು ಎಂದು ಬಿಜೆಪಿ ಭಾವಿಸುತ್ತಿದೆಯೇ? 'ಪ್ರಧಾನಿ ಸಹ ಪರಿಶೀಲಿಸಿದ್ದೀರಾ?' ಹೊಸದಾಗಿ ತೆರೆಯಲಾದ ಹೆದ್ದಾರಿ ಪ್ರವಾಹದಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಆರು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬೆಂಗಳೂರು-ಮೈಸೂರು ಹೆದ್ದಾರಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಜಲಾವೃತವಾಗಿತ್ತು.
₹ 8,480 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೆದ್ದಾರಿ ರಸ್ತೆ ಜಲಾವೃತವಾಗಿತ್ತು. ಹೆದ್ದಾರಿಯಲ್ಲಿನ ಕೆಳಸೇತುವೆಯಲ್ಲಿ ನೀರು ನಿಂತಿದ್ದು, ಬಂಪರ್-ಟು-ಬಂಪರ್ ಅಪಘಾತಗಳ ಸರಣಿಗೆ ಕಾರಣವಾಯಿತು. ಇದರಿಂದಾಗಿ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು. ಹೆದ್ದಾರಿಯಲ್ಲಿ ದೀರ್ಘಾವಧಿಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಳೆದ ವರ್ಷ ಸುರಿದ ಭಾರೀ ಮಳೆಗೆ ಕೆಳಸೇತುವೆ ಜಲಾವೃತವಾಗಿತ್ತು.
ಮಾರ್ಚ್ 12 ರಂದು ಪ್ರಧಾನಿ ಮೋದಿ ಅವರು 118 ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. ಇದು ಪ್ರಯಾಣದ ಸಮಯವನ್ನು ಮೂರು ಗಂಟೆಗಳಿಂದ ಸುಮಾರು 75 ನಿಮಿಷಗಳಿಗೆ ಇಳಿಸಿದೆ ಎಂದು ವರದಿಯಾಗಿದೆ. NH 275 ರ ಆರು ಲೇನ್ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗವು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.












Click it and Unblock the Notifications