Bengaluru Mysore Expressway: ದಶಪಥವಲ್ಲ, ಇದು ಭ್ರಷ್ಟಪಥ ಎಂದ ಕಾಂಗ್ರೆಸ್- ಸಂಸದರ ಟ್ವೀಟ್‌ಗೆ 'ಕೈ' ತಿರುಗೇಟು
ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾನುವಾರ ಉದ್ಘಾಟನೆಯಾದ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ವಿವಾದದ ಕೇಂದ್ರಬಿಂದುವಾಗಿದೆ. ಇನ್ನೂ ಅರ್ಥ ಕೆಲಸ ಬಾಕಿ ಇದ್ದರೂ, ಪ್ರಧಾನಿ ಮೋದಿ ಅವರನ್ನು ಕರೆಸಿ ಎಕ್ಸ್‌ಪ್ರೆಸ್‌ವೇಗೆ ಚಾಲನೆ ನೀಡಲಾಗಿದೆ.
ಬೆಂಗಳೂರು, ಮಾರ್ಚ್ 15: ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾನುವಾರ ಉದ್ಘಾಟನೆಯಾದ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ವಿವಾದದ ಕೇಂದ್ರಬಿಂದುವಾಗಿದೆ. ಇನ್ನೂ ಅರ್ಥ ಕೆಲಸ ಬಾಕಿ ಇದ್ದರೂ, ಪ್ರಧಾನಿ ಮೋದಿ ಅವರನ್ನು ಕರೆಸಿ ಎಕ್ಸ್‌ಪ್ರೆಸ್‌ವೇಗೆ ಚಾಲನೆ ನೀಡಲಾಗಿದೆ. ಇದು ಕೇವಲ ಚುನಾವಣೆ ಗಿಮಿಕ್ ಎಂದು ವಿರೋಧ ಪಕ್ಷಗಳ ನಾಯಕರು ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಹರಿಹಾಯ್ದಿದ್ದಾರೆ. ಈ ರಸ್ತೆಯಲ್ಲಿ ಹೆಚ್ಚು ಟೋಲ್ ದರ ಇದೆ ಎಂದೂ ವಾಹನ ಸವಾರರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಈ ರಸ್ತೆಯಲ್ಲಿ ಕಿತ್ತುಹೋದ ಡಾಂಬರ್ ಕುರಿತು ಸಂಸದ ಪ್ರತಾಪ್ ಸಿಂಹ ಮಾಡಿರುವ ಟ್ವೀಟ್‌ಗೆ ತಿರುಗೇಟು ನೀಡಿರುವ ಕಾಂಗ್ರೆಸ್, 'ಅಭಿನಂದನೆಗಳು ಮೋದಿಯವರೇ, ಒಂದು ವರ್ಷವಾದರೂ ಬಾಳಿಕೆ ಬರಬೇಕಿತ್ತು, ಒಂದು ತಿಂಗಳು, ಕೊನೆ ಪಕ್ಷ ಒಂದು ವಾರವಾದರೂ ಬಾಳಿಕೆ ಬರಬೇಕಿತ್ತು. ಆದರೆ ಉದ್ಘಾಟನೆಯಾದ ಒಂದೇ ದಿನಕ್ಕೆ ಕಿತ್ತು ಹೋಗಿದೆ, ರಾಜ್ಯದ 40 ಪರ್ಸೆಂಟ್, ಕೇಂದ್ರದ 40 ಪರ್ಸೆಂಟ್, ಒಟ್ಟು 80 ಪರ್ಸೆಂಟ್ ಕಮಿಷನ್ ಕಾಮಗಾರಿಯ ಬಂಡವಾಳ ಹೊರಬಂದಿದೆ. ದಶಪಥವಲ್ಲ ಇದು ಭ್ರಷ್ಟಪಥ' ಎಂದು ಹರಿಹಾಯ್ದಿದೆ.

'ಮಾನ್ಯ ಸಂಸದರೇ, ಯಾರ ಕಿವಿ ಮೇಲೆ ಇಡ್ತೀದಿರಿ? ಒಂದರಲ್ಲಿ ಹಳದಿ ಪಟ್ಟಿ, ಮತ್ತೊಂದರಲ್ಲಿ ಬಿಳಿ ಪಟ್ಟಿ, ಜನರ ದಿಕ್ಕು ತಪ್ಪಿಸುವುದಕ್ಕೂ ಮಿತಿ ಬೇಡವೇ? ಅಂದಹಾಗೆ, ನ್ಯೂನ್ಯತೆಗಳಿರುವ ರಸ್ತೆಯನ್ನು ತುರತುರಿಯಲ್ಲಿ ಉದ್ಘಾಟಿಸಿದ್ದೇಕೆ ಇಂತಹ ಹಲವು ನ್ಯೂನ್ಯತೆಗಳಿಗೆ 80 ಅಪಘಾತಗಳಾದವೇ? ನ್ಯೂನ್ಯತೆಯ ರಸ್ತೆಗೆ ಜನ ಟೋಲ್ ನೀಡಬೇಕೆ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.
'ಕಿತ್ತುಹೋದ ರಸ್ತೆ ದುರಸ್ತಿ ಕಾಮಗಾರಿಯ ಗುದ್ದಲಿ ಪೂಜೆಗೆ ಮತ್ತೊಮ್ಮೆ ಮೋದಿಯನ್ನು ಕರೆಸಿ. ದುರಸ್ತಿಯಾದ ನಂತರ ಉದ್ಘಾಟನೆಗೆ ಇನ್ನೊಮ್ಮೆ ಮೋದಿ ಕರೆಸಿ. ಗುಂಡಿ ಮುಚ್ಚಿದ ಸಂತೋಷಕ್ಕಾಗಿ ಮಗದೊಮ್ಮೆ ಮೋದಿ ಕರೆಸಿ ರೋಡ್ ಶೋ ಮಾಡಿಸಿ. ಆಗಬಹುದೇ ಬಿಜೆಪಿ?' ಎಂದು ಕಾಂಗ್ರೆಸ್ ಕುಹಕವಾಡಿದೆ.

ಈ ಜನಕ್ರೋಶಕ್ಕೆ ಬಿಜೆಪಿ ಭಸ್ಮವಾಗುವುದು ನಿಶ್ಚಿತ ಎಂದಿರುವ ಕೆಪಿಸಿಸಿ, 'ರಸ್ತೆ ನಿರ್ಮಿಸಿದ್ದು ಜನರ ಹಣದಲ್ಲೇ, ಓಡಾಡುವ ವಾಹನವೂ ಜನರದ್ದೇ, ಟೋಲ್ ಹಣ ನೀಡಬೇಕಾದವರೂ ಜನರೇ. ಪ್ರಚಾರ ಮಾತ್ರ ಕೈಬೀಸಿ ಹೋಗುವ ಮೋದಿಯದ್ದು. ಬೆಲೆ ಏರಿಕೆಯಲ್ಲಿ ಬವಣೆಯಲ್ಲಿ ಟೋಲ್ ಬರೆ ಹಾಕಿದ ಬಿಜೆಪಿಯ ಹೆದ್ದಾರಿ ದರೋಡೆ ವಿರುದ್ಧ ನಿಜವಾದ ಜನಧ್ವನಿ ಇದು' ಎಂದೂ ಹರಿಹಾಯ್ದಿದೆ.
ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೊಗಳನ್ನು ಹಂಚಿಕೊಂಡಿರುವ ಕೆಪಿಸಿಸಿ, 'ಮಾತೆತ್ತಿದರೆ ಫೇಸ್ಬುಕ್ ಲೈವ್ ಬಂದು ಹೆದ್ದಾರಿ ನಾನೇ ಮಾಡಿದೆ ಎನ್ನುವ ಮಾನ್ಯ ಪ್ರತಾಪ ಸಿಂಹ ಅವರೇ, ಬನ್ನಿ ಜನರ ಈ ಮಾತುಗಳನ್ನೂ ಒಮ್ಮೆ ಫೇಸ್ಬುಕ್ ಲೈವ್ ಮಾಡಿಬಿಡಿ. ಸರ್ವಿಸ್ ರಸ್ತೆಗಳನ್ನು ನಿರ್ಮಿಸದೆ ಟೋಲ್ ಹೆಸರಲ್ಲಿ ಜನರ ಸುಲಿಗೆಗೆ ಇಳಿದ ಸರ್ಕಾರದ ವಿರುದ್ಧ ಜನರ ಹಿಡಿಶಾಪ ಬಿಜೆಪಿಗೆ ಮಾರಕವಾಗಿ ಪರಿಣಮಿಸಲಿದೆ' ಎಂದೂ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ನೂತನವಾಗಿ ಉದ್ಘಾಟನೆಗೊಂಡ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ 'ಸೌಲಭ್ಯಗಳಿಲ್ಲದೆ' ಶುಲ್ಕ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಶೇಷಗಿರಿಹಳ್ಳಿ ಟೋಲ್ ಬಳಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿರುವ ಪ್ರತಿಭಟನಾಕಾರ ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಪಿ ರಂಗನಾಥ್, 'ಈ ಮಾರ್ಗದಲ್ಲಿ ಶೌಚಾಲಯಗಳು, ಪ್ರಥಮ ಚಿಕಿತ್ಸೆ, ಆಂಬ್ಯುಲೆನ್ಸ್ ಮತ್ತು ಇತರ ಸೌಲಭ್ಯಗಳಿಲ್ಲ' ಎಂದು ಆರೋಪಿಸಿದ್ದಾರೆ.
'ಎಕ್ಸ್‌ಪ್ರೆಸ್‌ವೇ ಹೊಂದಿರಬೇಕಾದ ಮೂಲಭೂತ ಅಗತ್ಯಗಳನ್ನು ಪೂರೈಸದೆ ರೂ 60 ಕಡ್ಡಾಯ ಟೋಲ್ ಅನ್ನು ವಿಧಿಸುತ್ತಿದ್ದೀರಿ. ಇದೆಲ್ಲ ಚುನಾವಣಾ ಗಿಮಿಕ್. ಕರ್ನಾಟಕ ಚುನಾವಣೆಯ ಕಾರಣದಿಂದ ಎಕ್ಸ್‌ಪ್ರೆಸ್‌ವೇಯನ್ನು ತರಾತುರಿಯಲ್ಲಿ ಉದ್ಘಾಟಿಸಲಾಗಿದೆ. ನಿತಿನ್ ಗಡ್ಕರಿ ಮತ್ತು ಕ್ಷೇತ್ರದ ಬಿಜೆಪಿ ಸಂಸದರ ಆಪ್ತರಿಗೆ ಟೆಂಡರ್ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ' ಎಂದು ಅವರು ತಿಳಿಸಿದ್ದಾರೆ.












Click it and Unblock the Notifications