ಬೆಂಗಳೂರು-ಮುರುಡೇಶ್ವರ ರೈಲು: ಕರಾವಳಿ ಜನರಿಗೆ ಗುಡ್ ನ್ಯೂಸ್
ಬೆಂಗಳೂರು, ಮಾರ್ಚ್ 23: ರಾಜಧಾನಿ ಬೆಂಗಳೂರು-ಕಾರವಾರ ನಡುವೆ ಪ್ರಯಾಣಿಕರ ದಟ್ಟಣೆ ಅಧಿಕವಾಗಿದೆ. ಈಗಿರುವ ರೈಲುಗಳು ಸಾಕಾಗುತ್ತಿಲ್ಲ. ಹೊಸ ರೈಲುಗಳ ಸಂಚಾರ ಆರಂಭಿಸಬೇಕು ಎಂದು ಮನವಿ ಮಾಡಲಾಗುತ್ತಿದೆ. ಈಗ ಯಾವುದೇ ಹೊಸ ರೈಲುಗಳು ಘೋಷಣೆಯಾಗಿಲ್ಲ. ಆದರೆ ಬೆಂಗಳೂರು-ಮುರುಡೇಶ್ವರ ರೈಲುನ್ನು ಕಾರವಾರ ತನಕ ವಿಸ್ತರಣೆ ಮಾಡುವ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ.
ಬಹಳ ವರ್ಷಗಳಿಂದ ಬೆಂಗಳೂರು-ಮುರುಡೇಶ್ವರ ನಡುವಿನ ರೈಲನ್ನು ಕಾರವಾರದ ತನಕ ವಿಸ್ತರಣೆ ಮಾಡಬೇಕು ಎಂದು ಪ್ರಯಾಣಿಕರು, ವಿವಿಧ ರೈಲು ಹೋರಾಟ ಸಮಿತಿಗಳು ಬೇಡಿಕೆ ಇಟ್ಟಿದ್ದಾರೆ. ಅಂತಿವಾಗಿ ಈ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ. ಯುಗಾದಿ ಸಮಯದಲ್ಲಿಯೇ ಬೆಂಗಳೂರು-ಮುರುಡೇಶ್ವರ ರೈಲು ಕಾರವಾರದ ತನಕ ಸಂಚಾರ ನಡೆಸಲಿದೆ.

ಕುಮಟಾ ಶಾಸಕ ದಿನಕರ್ ಶೆಟ್ಟಿ ಮತ್ತು ಉತ್ತರ ಕನ್ನಡ ರೈಲ್ವೇ ಸೇವಾ ಸಮಿತಿಯ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಕೆ ಮಾಡಲಾಗಿತ್ತು. ಬೆಂಗಳೂರು-ಮುರುಡೇಶ್ವರ ರೈಲನ್ನು ಕಾರವಾರಕ್ಕೆ ವಿಸ್ತರಣೆ ಮಾಡಲು ಸಚಿವರು ಒಪ್ಪಿಗೆ ನೀಡಿದ್ದಾರೆ.
ಯುಗಾದಿಯ ಸಮಯದಲ್ಲೇ ಸಂಚಾರ ಆರಂಭ: 2024ರ ಮಾರ್ಚ್‌ನಲ್ಲಿ ಮಂಗಳೂರಿನಲ್ಲಿ ನಡೆದ ಕೊಂಕಣ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸಭೆಯಲ್ಲಿ ಬೆಂಗಳೂರು-ಮುರುಡೇಶ್ವರ ರೈಲು ಕಾರವಾರದ ತನಕ ವಿಸ್ತರಣೆ ಮಾಡಬೇಕು ಎಂದು ಚರ್ಚೆ ನಡೆದಿತ್ತು. ಆಗ ಪ್ರಸ್ತಾವನೆಗೆ ಒಪ್ಪಿಗೆಯೂ ಸಿಕ್ಕಿತ್ತು. ಆದರೆ ಭರವಸೆಯಾಗಿಯೇ ಉಳಿದಿತ್ತು. ಈಗ ಯುಗಾಗಿ ಹಬ್ಬದ ಸಂದರ್ಭದಿಂದ ರೈಲು ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು-ಮುರುಡೇಶ್ವರ ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡುವ ಪೂರ್ವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ರೈಲ್ವೆ ಇಲಾಖೆ ಈ ಕುರಿತು ಅಧಿಕೃತ ಘೋಷಣೆ ಮಾಡಿ, ವೇಳಾಪಟ್ಟಿ ಪ್ರಕಟಿಸಬೇಕಿದೆ. ಯುಗಾದಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಆಗಿನಿಂದಲೇ ರೈಲು ಸೇವೆ ವಿಸ್ತರಣೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇದೆ.
ಸುಮಾರು ಒಂದೂವರೆ ವರ್ಷದಿಂದ ಕುಮಟಾ ಶಾಸಕರು, ರೈಲ್ವೆ ಹೋರಾಟಗಾರ ರಾಜೀವ್ ಗಾಂವ್ಕರ್ ಹುಬ್ಬಳ್ಳಿ, ಬೆಂಗಳೂರು ನಗರದಲ್ಲಿ ಹಲವು ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿ ಕಾರವಾರಕ್ಕೆ ರೈಲು ವಿಸ್ತರಣೆ ಮಾಡುವ ಕುರಿತು ಚರ್ಚೆ ನಡೆಸಿದ್ದರು. ಸಂಸದರ ಮೂಲಕ ರೈಲ್ವೆ ಸಚಿವರಿಗೂ ಈ ಕುರಿತು ಮನವಿ ಸಲ್ಲಿಕೆ ಮಾಡಲಾಗಿತ್ತು.
2023ರಲ್ಲಿ ಸತೀಶ್ ಸೈಲ್ ಕೊಂಕಣ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಬೆಂಗಳೂರು-ಮುರುಡೇಶ್ವರ ರೈಲು ವಿಸ್ತರಣೆ ಕುರಿತು ಗಮನ ಸೆಳೆದಿದ್ದರು. ಹಲವು ವರ್ಷಗಳ ಹೋರಾಟಕ್ಕೆ ಈಗ ಒಪ್ಪಿಗೆ ಸಿಕ್ಕಿದ್ದು, ಕಾರವಾರಕ್ಕೆ ರೈಲು ವಿಸ್ತರಣೆಯಾಗಲಿದೆ. ಈ ಮೂಲಕ ಬೆಂಗಳೂರು ನಗರದಿಂದ ಕರಾವಳಿ ಮತ್ತು ಗೋವಾ ರಾಜ್ಯಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಬೆಂಗಳೂರು ನಗರದಿಂದ ಹೊರಡುವ ರೈಲು ಮೈಸೂರು ಮೂಲಕ ಕರಾವಳಿಗೆ ತಲುಪಲಿದೆ. ಮಂಗಳೂರು ಮೂಲಕ ರೈಲು ಮುರುಡೇಶ್ವರ ತನಕ ಸಂಚಾರ ನಡೆಸುತ್ತಿತ್ತು. ಈಗ ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಿದರೆ ಸಾವಿರಾರು ಪ್ರಯಾಣಿಕರಿಗೆ ಸಹಾಯಕವಾಗಲಿದೆ.












Click it and Unblock the Notifications