Bengaluru: ಮೋದಿ ಹಬ್ಬಕ್ಕೆ ಕಿಚ್ಚು ವ್ಯಾಪಾರಸ್ಥರ ದಿನದ ಊಟಕ್ಕೆ ಕುತ್ತು
ಬೆಂಗಳೂರು ಮೇ 6: ಬೆಂಗಳೂರಿನಲ್ಲಿ ನರೇಂದ್ರ ಮೊದಿ ಬೃಹತ್ ರೋಡ್ ಶೋಗಾಗಿ ರಸ್ತೆ ಹಾಗೂ ಅಂಗಡಿಗಳನ್ನು ಬೆಳಿಗ್ಗೆಯಿಂದಲೇ ಬಂದ್ ಮಾಡಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ವಾರವಿಡೀ ಒಂದು ರೀತಿಯ ಜನರ ಜೀವನ ಇದ್ದರೆ, ವಾರಾಂತ್ಯಕ್ಕೆ ಮತ್ತೊಂದು ರೀತಿಯಾಗಿ ಜನರ ಜೀವನ ನಡೆಯುತ್ತದೆ. ಕೆಲವರು ವಾರವಿಡೀ ದುಡಿದು ವಾರಾಂತ್ಯಕ್ಕೆ ವಿಶ್ರಾಂತಿ ಪಡೆದರೆ, ಮತ್ತೆ ಕೆಲವರು ವಾರಾಂತ್ಯವೇ ದುಡಿದು ಇಡೀ ವಾರದ ಜೀವನ ನಡೆಸುತ್ತಾರೆ. ಮಾರುಕಟ್ಟೆ, ಸಣ್ಣ ವ್ಯಾಪಾರಿಗಳು, ಅಂಗಡಿ ಮುಗ್ಗಟ್ಟುಗಳ ವ್ಯಾಪಾರಸ್ಥರಿಗೆ ವೀಕೆಂಡ್ ವ್ಯಾಪರದಿಂದಲೇ ಬದುಕು. ವೀಕೆಂಡ್ ವ್ಯಾಪಾರ ಕೈ ಕೊಟ್ಟರೆ ವಾರದ ಊಟಕ್ಕೆ ತಣ್ಣೀರು ಬಟ್ಟೆಯೇ ಗತಿ. ಇದು ಬೆಂಗಳೂರಿನಲ್ಲಿ ಬದುಕುವ ಎಷ್ಟೋ ಜನರ ಜೀವನ ಶೈಲಿ.

ಮಳೆ ಬಂದರೆ, ತಿಂಗಳು ಗಟ್ಟಲೆ ರಸ್ತೆ ಕಾಮಗಾರಿ ನಡೆದರೆ ಈ ವ್ಯಾಪಾರಿಗಳ ಜೀವನ ನೆಲಕ್ಕಚ್ಚಿ ಹೋಗುತ್ತದೆ. ದಿನವಿಡೀ ಆಮೆಗತಿಯಲ್ಲಿ ನಡೆಯುವ ವ್ಯಾಪಾರ ವಾರಾಂತ್ಯಕ್ಕೆ ಇಂತಹ ಸಮಸ್ಯೆಗಳಿಂದ ಸಂಪೂರ್ಣ ಕೈಗೆಟಕದೇ ಹೋಗುತ್ತದೆ. ಹೀಗಿರುವಾಗ ಚುನಾವಣೆಗೆ ದಿನಾಂಕ ನಿಗದಿಯಾದಾಗಿನಿಂದ ಕೇಂದ್ರ ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದ ಜನನಾಯಕರನ್ನು ಕರೆಸಿ ಬಿಜೆಪಿ ಬೃಹತ್ ರೋಡ್ ಶೋ ನಡೆಸುವುದು ಮಾತ್ರವಲ್ಲದೆ, ರಸ್ತೆ ಬದಿಯಲ್ಲಿರುವ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಜನ ಸಾಮಾನ್ಯಕರ ಬೇಜು ಸುಡುತ್ತಿದೆ.
ನಿತ್ಯ ಒಬ್ಬರಾದಂತೆ ಒಬ್ಬರು ಸಿಲಿಕಾನ್ ಸಿಟಿಯತ್ತ ಮತಬೇಟೆ ನಡೆಸುತ್ತಿದ್ದಾರೆ. ಹೀಗಿರುವಾಗ ಬೆಂಗಳೂರಿನಲ್ಲಿಂದು ಮೋದಿ ಹಬ್ಬದ ಕಿಚ್ಚು ವೀಕೇಡ್ ವ್ಯಾಪಾರಕ್ಕೆ ಕುತ್ತು ತಂದಿದೆ. ಹೌದು... ವೀಕೆಂಡ್ ಬಂದರೆ ಎಷ್ಟೋ ವ್ಯಾಪರಸ್ಥರಿಗೆ ಹಬ್ಬ. ಆದರೆ ಮೋದಿ ಹಬ್ಬದ ಮುಂದೆ ವ್ಯಾಪಾರಸ್ಥರ ಹಬ್ಬಕ್ಕೆ ಕಿಮ್ಮತ್ತಿಲ್ಲ. ರಾಜೋರೋಷವಾಗಿ ಪೊಲೀಸರು ಮೋದಿ ರೋಡ್ ಶೋ ವೇಳೆ ಅಂಗಡಿಗಳನ್ನು ಮುಚ್ಚಬೇಕು ಎಂದಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ.
Mudi is visiting our streets, so they've blockaded all our apartments... all the shops are closed... no autoes.... no busses.... no vehicles on the road... this is the country I come from... just think of the financial losses... #KarnatakaAssemblyElection pic.twitter.com/OUnUUW6izY
— Kartik (@KartikSeshan) May 6, 2023
ರೋಡ್ ಶೋ ಸಂದರ್ಭದಲ್ಲಿ ಮನೆಯ ಮೇಲೆ ಹಾಗೂ ಬಾಲ್ಕನಿ ಮೇಲೆ ನಿಲ್ಲುವಂತಿಲ್ಲ. ಬೆಳಿಗ್ಗೆ ಆರರಿಂದ ರೋಡ್ ಶೋ ಮುಗಿಯುವವರೆಗೂ ವಾಹನ ಸಂಚರಿಸುವಂತಿಲ್ಲ. ರೋಡ್ ಶೋ ವೇಳೆ ಮನೆ/ಕಟ್ಟಡ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಬಂದ್ ಮಾಡಬೇಕು. ಹೀಗೆ ಒಂದಲ್ಲ ಎರಡಲ್ಲಾ ಸಮಯ ಸಂದರ್ಭಕ್ಕೆ ನಾನಾ ನಿಯಮಗಳನ್ನು ಜನ ಪಾಲಿಸಬೇಕು. ಇದರಿಂದ ವ್ಯಾಪಾರಿಗಳಿಗೇನು ಲಾಭ?

ವಾರವಿಡೀ ದುಡಿದು ವಾರಾಂತ್ಯಕ್ಕೆ ಫ್ರೀ ಇರುವ ಜನ ರಸ್ತೆ ಬದಿ ನಿಂತು 'ಮೋದಿ.... ಮೋದಿ..'ಎಂದು ಘೋಷಣೆ ಕೂಗುತ್ತಿದ್ದರೆ, ವಾರಾಂತ್ಯದ ದುಡಿಮೆಯಲ್ಲೇ ಜೀವನ ಕಟ್ಟಿಕೊಳ್ಳುವ ಜನರ ಪಾಡೇನು? ಸಂಚಾರ ಬಂದ್, ಅಂಗಡಿಗಳನ್ನು ಬಂದ್ ಮಾಡಿಕೊಂಡು ಕುಳಿತರೆ ಯಾರಿಗೆ ನಷ್ಟ? ನಷ್ಟವನ್ನು ಭರಿಸುವವರು ಯಾರು?
ರಸ್ತೆ ಬದಿ ವ್ಯಾಪಾರ ಹಾಗೂ ವ್ಯಾಪಾರಸ್ಥರು ಅಂದರೆ ಅಷ್ಟೋಂದು ಕೀಳಾಗಿ ನೋಡುವುದೇಕೆ? ಸಣ್ಣ ವ್ಯಾಪಾರಿಗಳ ಜೀವನ ಜೀವ ಎರಡಕ್ಕೂ ಬೆಲೆ ಇಲ್ಲವೇ? ಅವರು ಎಲ್ಲರಂತೆ ಬದುಕು ಕಟ್ಟಿಕೊಳ್ಳುವ ಸ್ವಾತಂತ್ರ್ಯ ಇಲ್ಲವೆ? ಅವರಿಗಾದ ನಷ್ಟವನ್ನು ಭರಿಸುವವರು ಯಾರು? ಮೋದಿ ಬಂದು ಹೋಗುವುದರಿಂದ ಜನ ಸಾಮಾನ್ಯರು ಹೊಟ್ಟೆಗೆ ಹಿಟ್ಟಿಲ್ಲದೆ ಮಲಗುವುದು ಎಷ್ಟು ಸರಿ? ಇದಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರವೇ ಉತ್ತರ ನೀಡಬೇಕು.












Click it and Unblock the Notifications