DK Shivakumar: ನನಗೆ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ: ಶಾಕಿಂಗ್ ವಿಚಾರ ಹೇಳಿದ ಡಿ.ಕೆ.ಶಿವಕುಮಾರ್
ಇಂದು ವಿಧಾನ ಪರಿಷತ್‌ನಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಡಿಕೆಶಿ ಅವರನ್ನು ಕನಕಪುರದ ಬಂಡೆ, ಕಾಂಗ್ರೆಸ್‌ನ ಟ್ರಬಲ್ ಶೂಟರ್ ಎಂದೆಲ್ಲ ಕರೆಯುತ್ತಾರೆ. ಆದರೆ, ಡಿಕೆಶಿ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂಬ ಸ್ಫೋಟಕ ವಿಚಾರವನ್ನು ಅವರೇ ಬಹಿರಂಗಪಡಿಸಿದ್ದಾರೆ. ಈ ವಿಚಾರ ಕೇಳಿ ಪರಿಷತ್‌ನಲ್ಲಿದ್ದವರೆಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಬೆಂಗಳೂರಿನ ಗಂಭೀರ ಸಮಸ್ಯೆ ಬಗ್ಗೆ ಮಾತನಾಡುವಾಗ ಡಿಕೆ ಶಿವಕುಮಾರ್ ಅವರು ತಮಗೆ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ವಿಚಾರ ಹೇಳಿಕೊಂಡಿದ್ದಾರೆ.
ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಬೆಂಗಳೂರಿನ ಕಸದ ಸಮಸ್ಯೆ ಬಗ್ಗೆ ಕಾಂಗ್ರೆಸ್‌ನ ನಾಗರಾಜ್ ಯಾದವ್ ಅವರು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು ಕಸ ಎನ್ನುವುದು ದೊಡ್ಡ ಮಾಫಿಯಾ. ಕಸದ ವಿಚಾರವಾಗಿಯೇ ಬೆಂಗಳೂರಿನ ಶಾಸಕರು ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ. ಇಲ್ಲಿ ಎಲ್ಲ ಪಕ್ಷದವರು ಇದ್ದಾರೆ. ಬೆಂಗಳೂರಿನ ಕಸ ವಿಲೇವಾರಿಗೆ 800 ಕೋಟಿ ರೂಪಾಯಿ ಎಂಬ ವಿಚಾರ ತಿಳಿದು ನನಗೇ ಶಾಕ್ ಆಯ್ತು. ಅಲ್ಲದೆ ಮೂರು ದಿನಗಳಿಂದ ಮಹದೇವಪುರ ಭಾಗದಲ್ಲಿ ಕಸದ ಗಾಡಿಗಳು ಹಾಗೇ ನಿಂತಿವೆ ಎಂದು ಹೇಳಿದ್ದಾರೆ.

ಬೆಂಗಳೂರು ವ್ಯಾಪ್ತಿಯ ಕಸವನ್ನು ನಗರದಿಂದ ಹೊರಗೆ ಹಾಕಲು ಸ್ಥಳ ಹುಡುಕುತ್ತಿದ್ದೇವೆ. ತಮಿಳುನಾಡು, ಆಂಧ್ರಪ್ರದೇಶ, ದೆಹಲಿಯಲ್ಲಿರುವಂತೆ ಕಸ ವಿಲೇವಾರಿಯ ವ್ಯವಸ್ಥೆ ಗಮನಿಸಿದ್ದೇವೆ. ಹಾಗಾಗಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರದ ಕ್ರಮ ಕೈಗೊಳ್ಳುತ್ತಿದ್ದೇವೆ. ಹೀಗಿರುವಾಗ ಯಾರೋ ಮಹಾನ್ ವ್ಯಕ್ತಿ ಟೆಂಡರ್ ಕರೆಯದೆ ಡಿ.ಕೆ.ಶಿವಕುಮಾರ್ 15 ಸಾವಿರ ಕೋಟಿ ಲೂಟಿ ಹೊಡೆದಿದ್ದಾನೆ ಎಂದು ಅಂತಾರೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
ತುಂಗಭದ್ರ ಜಲಾಶಯದಲ್ಲಿ ಹೂಳು ತುಂಬಿ ವ್ಯರ್ಥವಾಗುತ್ತಿರುವ 27 ಟಿಎಂಸಿ ನೀರು ಸದ್ಬಳಕೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಇದಕ್ಕಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಹಾಗೂ ಪಂಪ್ ಮಾಡಿ ನೀರು ಬಳಸಿಕೊಳ್ಳುವ ಪರ್ಯಾಯ ಯೋಜನೆ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ. ತುಂಗಭದ್ರಾ ಜಲಾಶಯದಿಂದ ಪೋಲಾಗುತ್ತಿರುವ ನೀರನ್ನು ಉಳಿಸಿ ರೈತರಿಗೆ ಹೇಗೆ ಸಹಾಯ ಆಗುವಂತೆ ಮಾಡಬೇಕು ಎನ್ನುವ ವಿಚಾರದಲ್ಲಿ ಸರ್ಕಾರ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಗಾರ್ಬೇಜ್ ಸಿಟಿ ಎಂದ ಜೆಡಿಎಸ್: ಬ್ರ್ಯಾಂಡ್ ಬೆಂಗಳೂರು ಎಂದು ಗಾರ್ಬೇಜ್ ಸಿಟಿ ಮಾಡಿದೆ ಕಾಂಗ್ರೆಸ್. ಬೆಂಗಳೂರು ಎಂದರೇ ಗಾರ್ಡನ್ ಸಿಟಿ ಎಂದೇ ವಿಶ್ವವಿಖ್ಯಾತಿ ಪಡೆದಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿಯನ್ನಾಗಿ ಪರಿವರ್ತಿಸಿದೆ. ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಎದ್ದು ಕಾಣಿಸುತ್ತಿದೆ. ಕಸ ವಿಲೇವಾರಿಗೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವ ಬದಲು ಅದರಲ್ಲೂ ದುಡ್ಡು ಮಾಡುತ್ತಿದೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಸ್ಕ್ಯಾಮ್ ಸರ್ಕಾರ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

ಸರ್ಕಾರಕ್ಕೆ ಜನಸಮಾನ್ಯರ ಆರೋಗ್ಯ ರಕ್ಷಣೆ ಬಗ್ಗೆಯೂ ಕಾಳಜಿ ಇಲ್ಲ. ಎರಡು ವರ್ಷವಾಗುತ್ತಾ ಬಂದರೂ ಬೆಂಗಳೂರಿನ ಗುಂಡಿ ಬಿದ್ದಿರುವ ರಸ್ತೆಗಳಿಗೆ ಸರಿಯಾಗಿ ತೇಪೆ ಹಾಕಲು ಸಾಧ್ಯವಾಗಿಲ್ಲ. ಇದೀಗ ನಗರದೆಲ್ಲೆಡೆ ಕಸದ ಸಮಸ್ಯೆ ಉಲ್ಬಣಿಸಿದೆ. ಇದು ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ದೂರಿದೆ.












Click it and Unblock the Notifications