Namma Metro New Lines: ಮೆಟ್ರೋ ಈ ಹೊಸ ಮಾರ್ಗಗಳು 2026ಕ್ಕೆ ಲೋಕಾರ್ಪಣೆ ನಿರೀಕ್ಷೆ
ಬೆಂಗಳೂರು, ಅಕ್ಟೋಬರ್ 21: ಬೆಂಗಳೂರು ಹಳದಿ ಮಾರ್ಗ ಲೋಕಾರ್ಪಣೆ (2025 ಆಗಸ್ಟ್ 10) ಹೊರತಾಗಿ 2026ರಲ್ಲಿ ನಮ್ಮ ಮೆಟ್ರೋ ಜಾಲ ಮತ್ತಷ್ಟು ವಿಸ್ತರಣೆ ಆಗಲಿದೆ. ಬೆಂಗಳೂರು ಮೆಟ್ರೋ ರೈಲು ನಿಮಗ (BMRCL) ಮುಂದಿನ ವರ್ಷ ಒಂದೆಡೆರು ಹೊಸ ಮಾರ್ಗಗಳನ್ನು ತೆರಯಲು ಪ್ಲಾನ್ ಮಾಡಿಕೊಂಡಿದೆ. ಈ ವಿಸ್ತರಣೆಗಳು ಬೆಂಗಳೂರಿನ ಸಾರ್ವಜನಿಕ ಸಾರಿಗೆ ಮೂಲಸೌಕರ್ಯವನ್ನು ಆಧುನೀಕರಿಸಲಿವೆ. ಸಾರಿಗೆ ಸಂಪರ್ಕ ಸುಧಾರಿಸುತ್ತದೆ.
ಬೆಂಗಳೂರಿನ ನಗರ ಸಂಚಾರದ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ತನ್ನದೆ ಆದ ಕೊಡುಗೆ ನೀಡುತ್ತಿರುವ ನಮ್ಮ ಮೆಟ್ರೋ ಸುಸ್ಥಿರ ನಗರ ಚಲನಶೀಲತೆ ಉದ್ದೇಶ ಹೊಂದಿದೆ. ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರವನ್ನು ಸಂಪರ್ಕಿಸುವ 19 ಕಿ.ಮೀ ಕಾರಿಡಾರ್ ಹಳದಿ ಮಾರ್ಗವನ್ನು ಆಗಸ್ಟ್ 10, 2025 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಮಾರ್ಗವು ದಕ್ಷಿಣ ತಂತ್ರಜ್ಞಾನ ಮತ್ತು ಕೈಗಾರಿಕಾ ವಲಯಕ್ಕೆ ಉತ್ತಮ ಸಂಪರ್ಕ ಒದಗಿಸುತ್ತದೆ. ನಾಲ್ಕು ರೈಲುಗಳಿಂದ ಕಾರ್ಯಾಚರಣೆ ಶುರುವಾಗಿದೆ. ನಿತ್ಯ 70 ಸಾವಿರ ಮಂದಿ ಪ್ರಯಾಣಿಸುತ್ತಿದ್ದಾರೆ.

ನಾಗವಾರ ಮತ್ತು ಕಾಳೇನ ಅಗ್ರಹಾರ ಗುಲಾಬಿ ಮಾರ್ಗವನ್ನು ಪೂರ್ಣವಾಗಿ ತೆರಯದೇ ಎರಡು ಹಂತಗಳಲ್ಲಿ ತೆರೆಯಲು ಯೋಜಿಸಲಾಗಿದೆ. ಹಂತ 1 ರಲ್ಲಿ 7.5 ಕಿಮೀ ಎತ್ತರದ ಮಾರ್ಗವು ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ. ಕಾಳೇನ ಅಗ್ರಹಾರದಿಂದ -ತಾವರೆಕೆರೆಯವರೆಗಿನ ಮಾರ್ಗ ಮಾರ್ಚ್ 2026 ರಲ್ಲಿ ಸೇವೆ ಆರಂಭಿಸುವ ನಿರೀಕ್ಷೆ ಇದೆ.
ಇನ್ನೂ ಗುಲಾಬಿ ಮಾರ್ಗದ ಎರಡನೇ ಹಂತದಲ್ಲಿ ಡೈರಿ ವೃತ್ತದಿಂದ ನಾಗವಾರವರೆಗೆ ಒಟ್ಟು 13.76 ಕಿಮೀ ಭೂಗತ ಸುರಂಗದ ಮೆಟ್ರೋ ಮಾರ್ಗವನ್ನು 2026 ಡಿಸೆಂಬರ್ ಹೊತ್ತಿಗೆ ತೆರಯುವ ಸಾಧ್ಯತೆ ಇದೆ. ಈ ಮಾರ್ಗವು ಬನ್ನೇರುಘಟ್ಟ ರಸ್ತೆ, ಎಂಜಿ ರಸ್ತೆ, ಶಿವಾಜಿನಗರ ಮತ್ತು ಟ್ಯಾನರಿ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ಸಂಪರ್ಕಿಸುತ್ತದೆ. ಜಯದೇವ ಆಸ್ಪತ್ರೆಯಲ್ಲಿ ಇಂಟರ್‌ಚೇಂಜ್ ನಿಲ್ದಾಣ ಸಹ ಹೊಂದಿದೆ.
ಇನ್ನೂ ನೀಲಿ ಮಾರ್ಗವು ಬೆಂಗಳೂರು ಹೊರ ವರ್ತುಲ ರಸ್ತೆಯಲ್ಲಿ ನಿರ್ಮಾನವಾಗುತ್ತಿದೆ. ಎರಡು ಹಂತಗಳಲ್ಲಿ ಸ್ಥಾಪನೆಯಾಗುತ್ತಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್.ಪುರಂವರೆಗೆ (ಹಂತ 2A) 19 ಕಿಲೋ ಮೀಟರ್ ಉದ್ದದ ಲೈನ್ ಕಾಮಗಾರಿ ಭರದಿಂದ ಸಾಗಿದೆ. ಈ 2A ಮಾರ್ಗವು 2026 ರ ಮಧ್ಯ ಭಾಗದಲ್ಲಿ ಲೋಕಾರ್ಪಣೆ ಗೊಳ್ಳುವ ನಿರೀಕ್ಷೆ ಇದೆ.
ಕೆ.ಆರ್.ಪುರಂನಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಂತ 2B ಅಡಿ ನಿರ್ಮಿಸಲಾಗುತ್ತಿದೆ. ಆದರೆ ಈ ಮಾರ್ಗದಲ್ಲಿ ಸಂಚಾರ ಮುಂದಿನ ವರ್ಷ ಅನುಮಾನ ಎನ್ನಲಾಗಿದೆ. ಬದಲಾಗಿ 2027 ರ ಆರಂಭದಲ್ಲಿ ಇಲ್ಲವೇ ಮಧ್ಯ ಭಾಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಶುರುವಾಗುವ ನಿರೀಕ್ಷೆ ಇದೆ. ನೀಲಿ ಮಾರ್ಗವು ನಗರ ಭಾಗದಿಂದ ವಿಮಾನ ನಿಲ್ದಾಣಕ್ಕೆ ಸುಗಮ ಸಂಪರ್ಕ ಒದಗಿಸಲಿದೆ. ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಮುಖ ಮೆಟ್ರೋ ಲೈನ್ ಆಗಲಿದೆ ಎಂದು BMRCL ಮಾಹಿತಿ ನೀಡಿದೆ.
ಉಪನಗರ ರೈಲ್ವೆ ಯೋಜನೆಗೆ ಮತ್ತೆ ಟೆಂಡರ್
ಮೆಟ್ರೋ ಮಾತ್ರವಲ್ಲದೇ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಕಾರಿಡಾರ್-2 ಮತ್ತು ಕಾರಿಡಾರ್-4 ರ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಹೊಸ ಟೆಂಡರ್ ಆಹ್ವಾನಿಸಲು ಸರ್ಕಾರದಿಂದ ಅಧಿಕೃತ ಸೂಚನೆ ಬಂದಿದೆ. ಕನಕ ಮತ್ತು ಮಲ್ಲಿಗೆ ಎರಡು ಕಾರಿಡಾರ್‌ಗಳು ಉಪನಗರ ಸಂಪರ್ಕ ಹೆಚ್ಚಿಸುತ್ತದೆ. ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಎಲ್ ಆಂಡ್ ಟಿ ಕಂಪನಿಯು ಭೂಮಿ ಹಸ್ತಾಂತರ ವಿಚಾರದಲ್ಲಿ K-RIDE ಜೊತೆಗೆ ಭಿನ್ನಾಭಿಪ್ರಾಯ ಹೊಂದಿತ್ತು. ಹೀಗಾಗಿ ಈ ಎರಡು ಕಾರಿಡಾರ್‌ಗಳ ಕೆಲಸ ಸ್ಥಗಿತಗೊಳಿಸಿತ್ತು. ಹೀಗಾಗಿ ಮರು ಟೆಂಡರ್ ಆಹ್ವಾನಿಸಲು K-RIDE ಮುಂದಾಗಿದೆ.












Click it and Unblock the Notifications