BMTC-Namma Metro: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್
ಬೆಂಗಳೂರು: ಬೆಂಗಳೂರಿನಲ್ಲಿ ಒಟ್ಟು 96 ಕಿಲೋ ಮೀಟರ್ ಜಾಲ ಹೊಂದಿರುವ ನಮ್ಮ ಮೆಟ್ರೋ ನೇರಳೆ ಹಾಗೂ ಹಸಿರು ಮಾರ್ಗ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಈ ಮಾರ್ಗದ ಕೆಲವು ಪ್ರದೇಶಗಳಲ್ಲಿ ಬಿಎಂಟಿಸಿ ಬಸ್ ನಿಲ್ದಾಣಗಳು ಮೆಟ್ರೋ ನಿಲ್ದಾಣಗಳಿಂದ ದೂರದಲ್ಲಿದ್ದ ಕಾರಣ ಮೆಟ್ರೋ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿತ್ತು. ಮೆಟ್ರೋ ಪ್ರಯಾಣಿಕರ ಕೊನೆಯ ಸಂಪರ್ಕ (ಲಾಸ್ಟ್ ಮೈಲ್ ಕನೆಕ್ಟಿವಿಟಿ)" ಸುಧಾರಿಸುವ ಉದ್ದೇಶದಿಂದ ಮೆಟ್ರೋ ನಿಲ್ದಾಣಗಳ ಸಮೀಪ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಎಲ್ಲ ಮೆಟ್ರೋ ನಿಲ್ದಾಣಗಳಿಂದ ಏರ್‌ಪೋರ್ಟ್‌ಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ಬಿಎಂಟಿಸಿ ಹಾಗೂ ಬೆಂಗಳೂರು ಸಂಚಾರ ಪೊಲೀಸರ ಸಹಕಾರದಲ್ಲಿ ಸ್ಥಳ ಪರಿಶೀಲನೆ ನಡೆಸಿದೆ. ಫೆಬ್ರವರಿ 05 ರಿಂದ ನೇರಳೆ ಮಾರ್ಗ (ವೈಟ್‌ಫೀಲ್ಡ್‌ನಿಂದ ಚಲಘಟ್ಟವರೆಗೆ) ಹಾಗೂ ಹಸಿರು ಮಾರ್ಗ (ಮಾದಾವರದಿಂದ ರೇಷ್ಮೆ ಸಂಸ್ಥೆವರೆಗೆ) ಮಾರ್ಗದ ಕೆಲವು ಮೆಟ್ರೋ ನಿಲ್ದಾಣಗಳ ಸಮೀಪ ಹೊಸ ಬಸ್ ನಿಲ್ದಾಣಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲ ಮೆಟ್ರೋ ನಿಲ್ದಾಣಗಳಿಂದ ಏರ್‌ಪೋರ್ಟ್‌ಗೆ ವಾಯುವಜ್ರ ಬಸ್
ಇನ್ನೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru Airport) ಪ್ರಯಾಣಿಸುವ ಮೆಟ್ರೋ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ನಗರದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಟಿಸಿ ವಾಯುವಜ್ರ (ವಿಮಾನ ನಿಲ್ದಾಣ) ಬಸ್‌ಗಳನ್ನು ಒದಗಿಸಲಾಗಿದೆ. ಪ್ರಯಾಣಿಕರು ನೇರವಾಗಿ ಮೆಟ್ರೋ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಹಾಗೂ ಬರುವ ಬಸ್ಸುಗಳನ್ನು ಹತ್ತಬಹುದು ಅಥವಾ ಇಳಿಯಬಹುದು.
ಎಲ್ಲೆಲ್ಲಿವೆ ಹೊಸ ಬಿಎಂಟಿಸಿ ಬಸ್ ನಿಲ್ದಾಣಗಳು
ನಮ್ಮ ಮೆಟ್ರೋ ನೇರಳೆ ಮಾರ್ಗ
1. ಟ್ರಿನಿಟಿ: ಎಂ.ಜಿ.ರಸ್ತೆಯಿಂದ ಹಲಸೂರು ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ 'ಬಿ' ಪ್ರವೇಶದ್ವಾರದ ಬಳಿ (ಹೋಟೆಲ್ ಒಬೆರಾಯ್ ಎದುರು) ಹೊಸ ಬಸ್ ನಿಲ್ದಾಣವನ್ನು ಒದಗಿಸಲಾಗಿದೆ.
2. ಹೂಡಿ: ಸೀತಾರಾಮಪಾಳ್ಯದಿಂದ ಗರುಡಾಚಾರ್ ಪಾಳ್ಯಕ್ಕೆ ಸಂಚರಿಸುವ ಪ್ರಯಾಣಿಕರಿಗಾಗಿ 'ಬಿ' ಪ್ರವೇಶದ್ವಾರದ ಬಳಿ (ಡಿ'ಮಾರ್ಟ್ ಎದುರು) ಹೊಸ ಬಸ್ ನಿಲ್ದಾಣ ಕಲ್ಪಿಸಲಾಗಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗ
1. ಮಂಜುನಾಥ ನಗರ: ಚಿಕ್ಕಬಿದರಕಲ್ಲುದಿಂದ ನಾಗಸಂದ್ರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ 'ಎ' ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಹೊಸ ಬಸ್ ನಿಲ್ದಾಣವನ್ನು ಒದಗಿಸಲಾಗಿದೆ.
2. ಪೀಣ್ಯ: ಗೊರಗುಂಟೆಪಾಳ್ಯದಿಂದ ಪೀಣ್ಯ ಕೈಗಾರಿಕಾ ಪ್ರದೇಶದ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ಮೆಟ್ರೋ ನಿಲ್ದಾಣದ ಎದುರಿನ ಸರ್ವಿಸ್ ರಸ್ತೆಯಲ್ಲಿ ಹೊಸ ಬಸ್ ನಿಲ್ದಾಣ ನೀಡಲಾಗಿದೆ.
3. ಪೀಣ್ಯ ಕೈಗಾರಿಕಾ ಪ್ರದೇಶದಿಂದ ಗೊರಗುಂಟೆಪಾಳ್ಯ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ 'ಬಿ' ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣ ಕೆಳಭಾಗದಲ್ಲಿ ಮತ್ತೊಂದು ಹೊಸ ಬಸ್ ನಿಲ್ದಾಣ ಸೌಕರ್ಯ ಸಿಗುತ್ತಿದೆ.
4. ಲಾಲ್‌ಬಾಗ್: ಸೌತ್ ಎಂಡ್ ಸರ್ಕಲ್‌ನಿಂದ ಕಾಲೇಜ್ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ 'ಬಿ' ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಸಮೀಪ ಹೊಸ ಬಸ್ ನಿಲ್ದಾಣ ಸ್ಥಾಪಿಸಲಾಗಿದೆ.

5. ಸೌತ್ ಎಂಡ್ ಸರ್ಕಲ್: ಲಾಲ್‌ಬಾಗ್‌ನಿಂದ ಜಯನಗರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ 'ಎ' ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಮೊದಲು ಹೊಸ ಬಸ್ ನಿಲ್ದಾಣ ಒದಗಿಸಲಾಗಿದೆ.
6. ಜಯಪ್ರಕಾಶ್ ನಗರ: ಬನಶಂಕರಿಯಿಂದ ಯಲಚೇನಹಳ್ಳಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ 'ಸಿ' ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣ ಮತ್ತು ಯಲಚೇನಹಳ್ಳಿಯಿಂದ ಬನಶಂಕರಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ 'ಡಿ' ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಮತ್ತೊಂದು ಹೊಸ ಬಸ್ ನಿಲ್ದಾಣ ಸ್ಥಾಪಿಸಲಾಗಿದೆ.
7 ಕೋಣನಕುಂಟೆ ಕ್ರಾಸ್: ದೊಡ್ಡಕಲ್ಲಸಂದ್ರದಿಂದ ಯಲಚೇನಹಳ್ಳಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ 'ಎ' ಪ್ರವೇಶದ್ವಾರದ ಬಳಿ (ಪಿಲ್ಲರ್ ಸಂಖ್ಯೆ 147) ಮೆಟ್ರೋ ನಿಲ್ದಾಣದ ಸಮೀಪ ಬಸ್ ಹತ್ತಲು ಸಹಾಯವಾಗುವಂತೆ ಬಸ್ ನಿಲ್ದಾಣ ಸೌಕರ್ಯ ನೀಡಲಾಗಿದೆ.
8,. ಯಲಚೇನಹಳ್ಳಿಯಿಂದ ದೊಡ್ಡಕಲ್ಲಸಂದ್ರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ 'ಬಿ' ಪ್ರವೇಶದ್ವಾರದ ಬಳಿ (ಪಿಲ್ಲರ್ ಸಂಖ್ಯೆ 148) ಮತ್ತೊಂದು ಹೊಸ ಬಸ್ ನಿಲ್ದಾಣವನ್ನು ಒದಗಿಸಲಾಗಿದೆ.
9. ವಾಜರಹಳ್ಳಿ: ತಲಘಟ್ಟಪುರದಿಂದ ದೊಡ್ಡಕಲ್ಲಸಂದ್ರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ 'ಬಿ' ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಮತ್ತು ದೊಡ್ಡಕಲ್ಲಸಂದ್ರದಿಂದ ತಲಘಟ್ಟಪುರದ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ 'ಎ' ಪ್ರವೇಶ ದ್ವಾರದ ಬಳಿ ಮೆಟ್ರೋ ನಿಲ್ದಾಣದ ಸಮೀಪ ಹೊಸ ಬಸ್ ನಿಲ್ದಾಣಗಳ ವ್ಯವಸ್ಥೆ ಮಾಡಲಾಗಿದೆ.
ಸಿಲ್ಕ್ ಇನ್ಸ್ಟಿಟ್ಯೂಟ್ ನಿಂದ ವಾಜರಹಳ್ಳಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ
'ಬಿ' ಪ್ರವೇಶದ್ವಾರದ ಬಳಿ ಹಾಗೂ ವಾಜರಹಳ್ಳಿ ಸಿಲ್ಕ್ ಇನ್ಸ್ಟಿಟ್ಯೂಟ್ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ 'ಎ' ಪ್ರವೇಶ ದ್ವಾರದ ಬಳಿ ಮೆಟ್ರೋ ನಿಲ್ದಾಣ ಕೆಳಭಾಗದಲ್ಲಿ ಹೊಸ ಬಸ್ ನಿಲ್ದಾಣಗಳು ಲಭ್ಯವಿವೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದರು.
ಇತರ ಮೆಟ್ರೋ ನಿಲ್ದಾಣಗಳಲ್ಲಿ 100 ಮೀಟರ್ ದೂರದಲ್ಲಿ ಬಸ್ ನಿಲ್ದಾಣಗಳು ಲಭ್ಯವಿದ್ದು ಕೆಲವೆಡೆ ಸ್ಥಳಾಭಾವದ ಕಾರಣದಿಂದ ಹೊಸ ಬಸ್ ನಿಲ್ದಾಣಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಸದ್ಯ ಒದಗಿಸಿರುವ ಬಸ್ ಸೌಲಭ್ಯ, ನಿಲ್ದಾಣಗಳ ಪ್ರಯೋಜನ ಪಡೆಯುವಂತೆ ಅಧಿಕಾರಿಗಳು ಕೋರಿದ್ದಾರೆ.












Click it and Unblock the Notifications